ರಾಜ್ಗಿರ್ (ಬಿಹಾರ): ಅಜೇಯ ಓಟವನ್ನು ಮುಂದುವರಿಸಿರುವ ಹಾಲಿ ಚಾಂಪಿಯನ್ ಭಾರತದ ಮಹಿಳೆಯರ ಹಾಕಿ ತಂಡ ಏಶ್ಯನ್ ಚಾಂಪಿಯನ್ಸ್ ಟ್ರೋಫಿ(Women’s Asian Champions Trophy) ಪಂದ್ಯಾವಳಿಯಲ್ಲಿ ಫೈನಲ್ಗೆ ಪ್ರವೇಶಿಸಿದೆ. ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಈ ಸಾಧನೆಗೈದಿತು.
ಇಂದು ನಡೆಯುವ ಪ್ರಶಸ್ತಿ ಕಾಳಗದಲ್ಲಿ ಭಾರತ(India vs China hockey) ತಂಡ ಚೀನಾ ತಂಡವನ್ನು ಎದುರಿಸಲಿದೆ. ಲೀಗ್ ಹಂತದಲ್ಲಿ ಭಾರತೀಯ ವನಿತೆಯರು ಚೀನಾಕ್ಕೆ ಸೋಲುಣಿಸಿದ್ದರು. ಹೀಗಾಗಿ ಫೈನಲ್ನಲ್ಲಿಯೂ ಭಾರತ ತಂಡ ಇದೇ ಪ್ರದರ್ಶನ ತೋರುವ ನಿರೀಕ್ಷೆ ಇದೆ.
ಭಾರತದ ಆಟ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಪಂದ್ಯ ಆರಂಭವಾಗಿ 5 ನಿಮಿಷಗಳಲ್ಲಿ ಭಾರತ ತಂಡವು ಮೊದಲ ಗೋಲು ಗಳಿಸುವ ಅವಕಾಶ ಪಡೆದಿತ್ತು. ನಾಯಕಿ ಸಲಿಮಾ ಟೆಟೆ ಅವರ ಪ್ರಯತ್ನವನ್ನು ಜಪಾನ್ ಗೋಲ್ಕೀಪರ್ ಯು ಕುಡೊ ವಿಫಲಗೊಳಿಸಿದರು. ಕೊನೆಗೆ 48ನೇ ನಿಮಿಷದಲ್ಲಿ ಉಪನಾಯಕಿ ನವನೀತ್ ಕೌರ್ ಪೆನಾಲ್ಟಿ ಸ್ಟ್ರೋಕ್ ಒಂದನ್ನು ಗೋಲಾಗಿ ಪರಿವರ್ತಿಸಿದರು. 56ನೇ ನಿಮಿಷದಲ್ಲಿ ಲಾಲ್ರೆಮಿಯಾಮಿ ಫೀಲ್ಡ್ ಗೋಲ್ ಒಂದನ್ನು ಬಾರಿಸಿದರು. ಒಟ್ಟಾರೆಯಾಗಿ 13 ಪೆನಾಲ್ಟಿ ಕಾರ್ನರ್ಗಳನ್ನು ಭಾರತದ ಆಟಗಾರ್ತಿಯರು ವ್ಯರ್ಥಗೊಳಿಸಿದರು. ಫೈನಲ್ನಲ್ಲಿ ಇದೇ ರೀತಿಯ ತಪ್ಪುಗಳನ್ನು ಮಾಡಿದರೆ ಸೋಲು ಖಚಿತ. ಹೀಗಾಗಿ ಸಿಕ್ಕ ಪೆನಾಲ್ಟಿ ಕಾರ್ನರ್ಗಳನ್ನು ಯಶಸ್ವಿಯಾಗಿ ಗೋಲು ಪೆಟ್ಟಿಗೆಗೆ ಸೇರಿಸಬೇಕು.
ಲೀಗ್ ಹಂತದ ಪಂದ್ಯದಲ್ಲಿ ದಾಳಿಯ ವಿಭಾಗದಲ್ಲಿ ದೀಪಿಕಾ ಗಮನ ಸೆಳೆದಿದ್ದಾರೆ. ಜತೆಗೆ ಉತ್ತಮ ಡ್ರ್ಯಾಗ್ಫ್ಲಿಕರ್ ಎನಿಸಿದ್ದಾರೆ. ನಾಲ್ಕು ಫೀಲ್ಡ್ ಗೋಲು ಸೇರಿ ಅವರು ಹತ್ತು ಗೋಲುಗಳನ್ನು ಗಳಿಸಿದ್ದಾರೆ. ಐದು ಪೆನಾಲ್ಟಿ ಕಾರ್ನರ್ ಪರಿವರ್ತಿಸಿದ್ದಾರೆ. ಒಮ್ಮೆ ‘ಪೆನಾಲ್ಟಿ’ಯಲ್ಲೂ ಗೋಲು ಗಳಿಸಿದ್ದಾರೆ. ಇತರ ಫಾರ್ವರ್ಡ್ಗಳಾದ ಶರ್ಮಿಳಾ ದೇವಿ, ಸಂಗೀತಾ ಕುಮಾರಿ, ಪ್ರೀತಿ ದುಬೆ ಮತ್ತು ಲಾಲ್ರೆಮ್ಸಿಯಾನಿ ಕೂಡ ಯಶಸ್ಸಿಗೆ ತಮ್ಮ ಪಾಲು ನೀಡಿದ್ದಾರೆ. ಮಿಡ್ಫೀಲ್ಡ್ನಲ್ಲಿ ನಾಯಕಿ ಸಲೀಮಾ ಟೆಟೆ ಅವರು ನೇಹಾ ಗೋಯಲ್, ಉಪನಾಯಕಿ ನವನೀತ್ ಕೌರ್ ಮತ್ತು ಬ್ಯೂಟಿ ಡಂಗ್ಡಂಗ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಇವರೆಲ್ಲ ಫೈನಲ್ ಪಂದ್ಯದಲ್ಲಿ ಕ್ಲಿಕ್ ಆದರೆ ಗೆಲುವು ಭಾರತಕ್ಕೆ ಒಲಿಯಲಿದೆ.