ಈಜಿಪ್ಟ್: ತೊನ್ನು ಎಂಬ ಚರ್ಮದ ಸಮಸ್ಯೆ ಇದ್ದರೂ ಕೂಡ 2024ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಇದೀಗ ಫಿನಾಲೆಯವರೆಗೂ ತಲುಪುವುದರ ಮೂಲಕ ಈಜಿಪ್ಟ್ ಮಾಡೆಲ್ ಲೊಗಿನಾ ಸಲಾಹಾ ಇತಿಹಾಸ ನಿರ್ಮಿಸಿದ್ದಾರೆ. ತೊನ್ನು ಸಮಸ್ಯೆ ಇದ್ದವರು ಆತ್ಮವಿಶ್ವಾಸ ಕಳೆದುಕೊಂಡು ಮನೆಯ ಮೂಲೆಯಲ್ಲಿ ಕುಳಿತುಕೊಂಡರೆ, ಲೊಗಿನಾ ಸಲಾಹಾ(Egypt Model Logina) ಮಾತ್ರ ಎಲ್ಲರಿಗೂ ಸ್ಫೂರ್ತಿಯಾಗಿ ಎಲ್ಲರ ಹೃದಯಗಳನ್ನು ಗೆದ್ದಿದ್ದಾರೆ. ಆ ಮೂಲಕ ಅವರು ಮಿಸ್ ಯೂನಿವರ್ಸ್‍ನಲ್ಲಿ ಸ್ಪರ್ಧಿಸಿದ ತೊನ್ನು ಸಮಸ್ಯೆ ಹೊಂದಿರುವ ಮೊದಲ ಸ್ಪರ್ಧಿ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.
ಮತ್ತೊಂದು ವಿಚಾರವೇನೆಂದರೆ ಲೊಗಿನಾ ಸಲಾಹಾ 73 ವರ್ಷಗಳ ಇತಿಹಾಸವಿರುವ 2024ರಲ್ಲಿ ಮೆಕ್ಸಿಕೋ ಸಿಟಿಯಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 30 ರಲ್ಲಿ ಸ್ಥಾನ ಪಡೆದ ಮೊದಲ ಈಜಿಪ್ಟ್ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಅವರ ದೇಶಕ್ಕೆ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ.
ಇನ್ಸ್ಟಾಗ್ರಾಂನಲ್ಲಿ 1.8 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್‍ಗಳನ್ನು ಹೊಂದಿರುವ ಲೊಗಿನಾ ಸಲಾಹಾ ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಈ ಪ್ರಯಾಣದಲ್ಲಿ ತನ್ನೊಂದಿಗೆ ಇದ್ದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಮತ್ತು ದ್ವೇಷ ಮತ್ತು ತಾರತಮ್ಯದಿಂದ ಮುಕ್ತವಾದ ಜಗತ್ತನ್ನು ರೂಪಿಸುವುದನ್ನು ಮುಂದುವರಿಸೋಣ ಎಂದು ಬರೆದಿದ್ದಾರೆ.
ಏಪ್ರಿಲ್ 21, 1990 ರಂದು ಈಜಿಪ್ಟ್‌ನಲ್ಲಿ ಜನಿಸಿದ ಸಲಾಹಾ ಅಲೆಕ್ಸಾಂಡ್ರಿಯಾದಲ್ಲಿ ಬೆಳೆದರು. ಅವರ ಜೀವನದಲ್ಲಿ ತೊನ್ನು ಸಮಸ್ಯೆ ಎಲ್ಲರಿಂದ ಅವಮಾನ ಅನುಭವಿಸುವಂತೆ ಮಾಡಿದೆ. ವೃತ್ತಿಪರ ಮೇಕಪ್ ಕಲಾವಿದೆಯಾಗಿರುವ ಅವರು ಮೂರು ವರ್ಷಗಳ ಹಿಂದೆ ತಮ್ಮ 10 ವರ್ಷದ ಮಗಳೊಂದಿಗೆ ದುಬೈಗೆ ಸ್ಥಳಾಂತರಗೊಂಡರು. ಅಲ್ಲಿ ಅವರು ಟಿವಿ ನಿರೂಪಕಿಯಾಗಿ, ಮಾಡೆಲ್ ಆಗಿ ಪರಿಚಿತರಾಗಿದ್ದಾರೆ.
ಇದನ್ನೂ ಓದಿ: ಮಗುವಿನ ಅಳು…ಮಹಿಳೆಯ ಕಿರುಚಾಟ ಕೇಳಿ ಹೊರಬಂದ್ರೆ ಅಷ್ಟೇ…ಒಂಟಿ ಮನೆಗಳೇ ಈ ಕುರುವಾ ಗ್ಯಾಂಗ್‌ನ ಟಾರ್ಗೆಟ್!
ತೊನ್ನು ಎಂಬುದು ಚರ್ಮದ ಸ್ಥಿತಿಯಾಗಿದ್ದು, ಚರ್ಮದ ಮೇಲ್ಮೈಯಲ್ಲಿ ಮಸುಕಾದ ಬಿಳಿ ತೇಪೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಚರ್ಮದ ಕೋಶಗಳು ಚರ್ಮಕ್ಕೆ ವರ್ಣದ್ರವ್ಯವನ್ನು ನೀಡುವುದನ್ನು ನಿಲ್ಲಿಸಿದಾಗ ಈ ಸಮಸ್ಯೆ ಕಾಡುತ್ತದೆ. ಈ ಬಿಳಿ ತೇಪೆಗಳು ಮುಖ, ಕುತ್ತಿಗೆ, ಕೈಗಳು ಅಥವಾ ಮೊಣಕಾಲುಗಳ ಮೇಲೆ ಕಾಣಿಸಿಕೊಳ್ಳಬಹುದು. ಈ ಸ್ಥಿತಿಗೆ ಕಾರಣ ತಿಳಿದಿಲ್ಲವಾದರೂ, ಪ್ರತಿರಕ್ಷಣಾ ವ್ಯವಸ್ಥೆಯಲ್ಲಾಗುವ ಬದಲಾವಣೆಗಳು, ಆನುವಂಶಿಕ ಅಂಶಗಳು, ಒತ್ತಡ ಅಥವಾ ಸೂರ್ಯನ ಬೆಳಕಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಈ ಸಮಸ್ಯೆ ಉಂಟಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.