Wednesday, 20th November 2024

ಅಂಧರ ಟಿ20 ವಿಶ್ವಕಪ್: ಪಾಕ್‌ ಪ್ರಯಾಣಕ್ಕೆ ಅನುಮತಿ ನೀಡದ ಕೇಂದ್ರ

ನವದೆಹಲಿ: ಭದ್ರತಾ ಕಾರಣದಿಂದಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಸರ್ಕಾರ ಅನುಮತಿ ನಿರಾಕರಿಸಿರುವುದರಿಂದ ಭಾರತ ಅಂಧರ ಕ್ರಿಕೆಟ್(Indian blind cricket team) ತಂಡವು ಟಿ20 ವಿಶ್ವಕಪ್‌ನಲ್ಲಿ(Blind T20 World Cup) ಸ್ಪರ್ಧಿಸುವುದಿಲ್ಲ ಎಂದು ರಾಷ್ಟ್ರೀಯ ಫೆಡರೇಶನ್ ತಿಳಿಸಿದೆ. ನವೆಂಬರ್ 23 ರಿಂದ ಡಿಸೆಂಬರ್ 3 ರವರೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕಾಗಿ ಭಾರತ ತಂಡವು ಇಂದು (ಬುಧವಾರ) ವಾಘಾ ಗಡಿಯನ್ನು ದಾಟಬೇಕಿತ್ತು.

ತಂಡವು ಪಂದ್ಯಾವಳಿಯಲ್ಲಿ ಭಾಗವಹಿಸಲು ಕೇಂದ್ರ ಕ್ರೀಡಾ ಸಚಿವಾಲಯದಿಂದ(Ministry of External Affairs) ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿತ್ತು. ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅನುಮತಿ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಟೂರ್ನಿಯಿಂದ ಹಿಂದೆ ಸರಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಬುಧವಾರ ವಾಘಾ ಗಡಿಗೆ ಹೋಗಲು ನಮ್ಮ ತಂಡ ಸಿದ್ಧವಾಗಿತ್ತು. ಆದರೆ ಇದುವರೆಗೆ ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕಾರಿಗಳಿಂದ ಯಾವುದೇ ಅನುಮತಿ ಬಂದಿಲ್ಲ. ಇದರಿಂದ ನಮಗೆ ಬೇಸರವಾಗಿದೆ ಎಂದು ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಐಬಿಸಿಎ) ಪ್ರಧಾನ ಕಾರ್ಯದರ್ಶಿ ಶೈಲೆಂದ್ರ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ Champions Trophy Schedule: ಇನ್ನೆರಡು ದಿನದಲ್ಲಿ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಪ್ರಕಟ

“ಪಾಕ್‌ಗೆ ಪ್ರಯಾಣಿಸುವುದು ಸುರಕ್ಷಿತವಾಗಿಲ್ಲದಿದ್ದಾಗ ನೀವು ಅಲ್ಲಿ ಹೇಗೆ ಸುರಕ್ಷಿತವಾಗಿರುತ್ತೀರಿ ಎಂದು ಸಚಿವಾಲಯ ಹೇಳುತ್ತಿದೆ. ಖಂಡಿತ, ನಾವು ಈ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇವೆ. ಆದರೆ ನಿರ್ಧಾರವನ್ನು ಕೊನೆಯ ಕ್ಷಣದವರೆಗೆ ಏಕೆ ಹಿಡಿದಿಟ್ಟುಕೊಳ್ಳಬೇಕು, ಒಂದು ತಿಂಗಳು ಅಥವಾ 25 ದಿನಗಳ ಹಿಂದೆ ನಮಗೆ ತಿಳಿಸುತ್ತಿದ್ದರೆ ಉತ್ತಮವಾಗಿರುತ್ತಿತ್ತು. ನಾವು ತಂಡದ ಆಯ್ಕೆ ಸೇರಿದಂತೆ ತರಬೇತಿಗೆ ವ್ಯಯಿಸಿದ ಸಮಯವೆಲ್ಲ ವ್ಯರ್ಥವಲ್ಲವೇ” ಎಂದು ಯಾದವ್ ಬೇಸರ ಹೊರಹಾಕಿದರು.

ಪಾಕಿಸ್ತಾನವು ನಿಗದಿತ ವೇಳಾಪಟ್ಟಿಯಲ್ಲಿ ಟೂರ್ನಿಯನ್ನು ಆಯೋಜಿಸುತ್ತದೆ ಮತ್ತು ಭಾರತ ತಂಡವು ಬರಲಿ ಅಥವಾ ಇಲ್ಲದಿರಲಿ ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಪಾಕ್‌ ಅಂಧರ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷ ಸೈಯದ್ ಸುಲ್ತಾನ್ ಶಾ ಹೇಳಿದ್ದಾರೆ. ‘ವಿಶ್ವಕಪ್ ಆತಿಥ್ಯಕ್ಕೆ ಎಲ್ಲಾ ವ್ಯವಸ್ಥೆಗಳನ್ನು ನಾವು ಪೂರ್ಣಗೊಳಿಸಿದೆ ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲʼ ಎಂದು ಶಾ ಹೇಳಿದರು.

ಅಂದರ ತಂಡವನ್ನೇ ಪಾಕ್‌ಗೆ ಕಳುಹಿಸಲು ಒಪ್ಪದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇನ್ನೂ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನಾಡಲು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದು ಕನಸಿನ ಮಾತು. ಟೂರ್ನಿ ಹೈಬ್ರೀಡ್‌ ಮಾದರಿಯಲ್ಲಿ ನಡೆದರೇ ಮಾತ್ರ ಭಾರತ ತಂಡ ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್‌ ಟೋಫಿಯಲ್ಲಿ ಆಡಬಹುದು. ಇಲ್ಲವಾದಲ್ಲಿ ಟೂರ್ನಿಯಿಂದ ಹಿಂದೆ ಸರಿಯುವುದು ಖಚಿತ.