Wednesday, 20th November 2024

BBK 11: ನನಗೆ ಬಂದ ವೋಟ್ಸ್‌ ಎಲ್ಲಿ ಹೋಯ್ತು? ಬಿಗ್‌ ಬಾಸ್‌ ಸ್ಪರ್ಧಿ ಅನುಷಾ ಪ್ರಶ್ನೆ: ವಿಶೇಷ ಸಂದರ್ಶನ ಇಲ್ಲಿದೆ

BBK 11

ಬೆಂಗಳೂರು: ʼʼಇಷ್ಟು ಬೇಗ ಬಿಗ್‌ಬಾಸ್‌ ಮನೆಯಿಂದ ಹೊರಗೆ ಬಂದಿದ್ದಕ್ಕೆ ಬೇಜಾರಿದೆ. ಸಾಕಷ್ಟು ಮಂದಿ ನನಗೆ ವೋಟು ಮಾಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ ವೋಟು ಮಾಡುವಂತೆ ಬಸ್‌ ಸ್ಟ್ಯಾಂಡ್‌, ರೈಲ್ವೆ ಸ್ಟೇಷನ್‌, ಕಾಲೇಜು ಮುಂತಾದ ಕಡೆ ಪ್ರಚಾರ ನಡೆಸಿರುವ ಫೋಟೊಗಳನ್ನು ಹಲವರು ನನಗೆ ತೋರಿದ್ದಾರೆ. ಆದರೂ ಎಲಿಮಿನೇಷನ್‌ ಆಗಿರುವುದು ಆಘಾತ ತಂದಿದೆ. ನನಗೆ ಬಂದ ವೋಟ್ಸ್‌ ಎಲ್ಲಿ ಹೋಯ್ತು ಎನ್ನುವ ಅನುಮಾನ ಮೂಡಿದೆʼʼ ಎಂದು ಬಿಗ್‌ ಬಾಸ್‌ ಮನೆಯಿಂದ ಕಳೆದ ವಾರ ಹೊರಗೆ ಬಂದಿರುವ ಅನುಷಾ ರೈ (Anusha Rai) ತಿಳಿಸಿದ್ದಾರೆ (BBK 11).

ಬಿಗ್‌ ಬಾಸ್‌ ಮನೆಯಲ್ಲಿ 50 ದಿನಗಳ ಕಳೆದಿರುವ ಅನುಭವವನ್ನು ಅವರು ವಿಶ್ವವಾಣಿ ಟಿವಿ ಸ್ಪೆಷಲ್‌ ಯೂಟ್ಯೂಬ್‌ ಚಾನಲ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರಿಸಿದ್ದಾರೆ.

ʼʼಇಷ್ಟು ಬೇಗ ಹೊರಗೆ ಬಂದಿದ್ದಕ್ಕೆ ಆರಂಭದಲ್ಲಿ ತುಂಬ ಬೇಜಾರಾಗಿತ್ತು. ಆದರೆ ಜನರ ಪ್ರತಿಕ್ರಿಯೆ, ಬೆಂಬಲ ನೋಡಿ ಸಮಾಧಾನ ಆಗಿದೆ. ದೊಡ್ಮನೆಯಲ್ಲಿ ನಾನು ಇದ್ದಷ್ಟು ದಿನ ಜನರು ನನ್ನು ಮೆಚ್ಚಿದ್ದಾರೆ, ನನ್ನ ವ್ಯಕ್ತಿತ್ವ ಇಷ್ಟಪಟ್ಟಿದ್ದಾರೆ. ಇದು ತಿಳಿದು ಖುಷಿಯಾಗುತ್ತಿದೆʼʼ ಎಂದು ಅನುಷಾ ಹೇಳಿದ್ದಾರೆ. ʼʼಒಳಗಡೆ ಇದ್ದಾಗ ಏನಾಗುತ್ತಿದೆ ಎನ್ನುವುದು ಗೊತ್ತಾಗುತ್ತಿರಲಿಲ್ಲ. ಜನ ಹೇಗೆ ಸ್ವೀಕರಿಸುತ್ತಾರೆ ಎನನುವ ಬಗ್ಗೆ ಭಯ ಇತ್ತು. ಇದೀಗ ಈ ಭಯ ಹೋಗಿದೆʼʼ ಎಂದು ತಿಳಿಸಿದ್ದಾರೆ.

ಟೆನ್ಷನ್‌ ಇತ್ತು

ʼʼಪ್ರತಿ ಸಲ ಕೊನೆ ಕ್ಷಣದಲ್ಲಿ ಎಲಿಮಿನೇಷನ್‌ನಿಂದ ಪಾರಾಗುತ್ತಿದ್ದೆ. ನಾಮಿನೇಟ್‌ ಆಗದೇ ಇದ್ದಾಗ ಎಲಿಮಿನೇಷನ್‌ ಇರುತ್ತಿರಲಿಲ್ಲ. ಹೀಗಾಗಿ ಇದೊಂದು ಟೆನ್ಷನ್‌ ಇತ್ತು. ಆದರೆ ಜನರು ಮನೆ ಮಗಳಂತೆ ನನ್ನನ್ನು ಸ್ವೀಕರಿಸಿದ್ದಾರೆ. ಇದೊಂದು ಬ್ಯೂಟಿಫುಲ್‌ ಜರ್ನಿʼʼ ಎಂದು ವಿವರಿಸಿದ್ದಾರೆ.

ಅನುಷಾ ಇರ್ಬೇಕಿತ್ತು

ʼʼಸೋಷಿಯಲ್‌ ಮೀಡಿಯಾದಲ್ಲಿ ಅನುಷಾ ಇನ್ನೂ ಬಿಗ್‌ಬಾಸ್‌ ಮನೆಯಲ್ಲಿ ಇರ್ಬೇಕಿತ್ತು, ಅವರಿಗಿಂತ ವೀಕ್‌ ಸ್ಪರ್ಧಿಗಳು ಇದ್ದರು ಎಂದೆಲ್ಲ ಸೋಷಿಯಲ್‌ ಮೀಡಿಯಾದಲ್ಲಿ ಮೆಸೇಜ್‌ಗಳು ಹರಿದಾಡುತ್ತಿವೆ. ಇದು ನೋಡಿದಾಗ ಜನರು ಎಷ್ಟರ ಮಟ್ಟಿಗೆ ಪ್ರೀತಿ ತೋರಿಸುತ್ತಿದ್ದಾರೆ ಎನ್ನುವುದು ಮನದಟ್ಟಾಗುತ್ತಿದೆ. ನೇರ ವ್ಯಕ್ತಿತ್ವಕ್ಕೆ ಬೆಲೆ ಇಲ್ವಾ? ಅವರನ್ನು ಯಾಕೆ ಹೊರಗೆ ಕಳಿಸುತ್ತಿದ್ದೀರಾ? ಅವರು ನೇರವಾಗಿ ಇದ್ದುದನ್ನು ಇದ್ದ ರೀತಿಯೇ ಹೇಳುತ್ತಾರೆ ಎಂದೆಲ್ಲ ಹಲವರು ಬಿಗ್‌ ಬಾಸ್‌ಗೇ ನೇರವಾಗಿ ಕೇಳುತ್ತಿದ್ದಾರೆʼʼ ಎಂದು ಅವರು ಹೇಳಿದ್ದಾರೆ.

ʼʼಧರ್ಮ ಅವರ ವಿಚಾರದಲ್ಲಿ ನನ್ನನ್ನು ರೇಗಿಸುತ್ತಿದ್ದುದು ನನಗೆ ಇಷ್ಟವಾಗುತ್ತಿರಲಿಲ್ಲ. ಈ ಬಗ್ಗೆ ನಾನು ಹೇಳಿಯೂ ಇದ್ದೆ. ಏನೇ ಹೇಳಿದರೂ ಈ ಪ್ರವೃತ್ತಿ ಮುಂದುವರಿಸಿದ್ದರು. ಹೀಗಾಗಿ ಬಳಿಕ ನಾನೂ ಸುಮ್ಮನಾಗಿದ್ದೆ. ಮನೆಯೊಳಗೆ ಧರ್ಮ, ಚೈತ್ರಾ ಕುಂದಾಪುರ, ಭವ್ಯಾ ಗೌಡ, ತ್ರಿವಿಕ್ರಂ ಅವರೊಂದಿಗೆ ಆತ್ಮೀಯ ಸಂಬಂದ ಬೆಳೆದಿತ್ತು. ಅವರೊಂದಿಗೆ ಹೆಚ್ಚು ಬೆರೆಯುತ್ತಿದ್ದೆʼʼ ಎಂದು ತಿಳಿಸಿದ್ದಾರೆ.

ʼʼಪಾತ್ರಗಳ ಮೂಲಕ ನನ್ನನ್ನು ಜನರು ತೆರೆ ಮೇಲೆ ನೋಡಿದ್ದಾರೆ. ನಿಜವಾದ ನನ್ನ ವ್ಯಕ್ತಿತ್ವವನ್ನು ತೋರಿಸಬೇಕಿತ್ತು. ಅದಕ್ಕೆ ಬಿಗ್‌ ಬಾಸ್‌ ಉತ್ತಮ ವೇದಿಕೆಯಾಗಿತ್ತು. ಆದರೆ ನನ್ನನ್ನು ನಾವು ಪ್ರೂವ್‌ ಮಾಡುವಷ್ಟರಲ್ಲಿಯೇ ಹೊರಗೆ ಬಂದಿದ್ದು ನೋವಾಗಿದೆ. ಕ್ಯಾಪ್ಟನ್‌ ಆಗಿಲ್ಲ, ಕಿಚ್ಚನ ಚಪ್ಪಾಳೆ ತಗೊಂಡಿಲ್ಲ, ಉತ್ತಮ ಪಟ್ಟ ಗಳಿಸಿಲ್ಲ, ಫಿನಾಲೆವರೆಗೆ ಹೋಗಬೇಕು ಅಂದುಕೊಂಡಿದ್ದೆ. ಅದೂ ಆಗಿಲ್ಲ. ಈ ಎಲ್ಲದರ ಬಗ್ಗೆ ಬೇಸರವಿದೆ. ಈಗ್ಲೂ ನನ್ನನ್ನು ಯಾಕೆ ಹೊರಗೆ ಕಳಿಸಿದ್ದರು ಎನ್ನುವ ಬಗ್ಗೆ ಅನುಮಾನ ಕಾಡುತ್ತಿದೆʼʼ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

ವೈಲ್ಡ್‌ ಕಾರ್ಟ್‌ ಎಂಟ್ರಿ ಬಗ್ಗೆ ಅನುಷಾ ಮಾತು

ʼʼಇದುವರೆಗೆ ಎಲ್ಲರೂ ತಮ್ಮದೇ ಕಂಫರ್ಟ್‌ ಝೋನ್‌ನಲ್ಲಿದ್ದರು. ಇದೀಗ ವೈಲ್ಡ್‌ಕಾರ್ಡ್‌ ಮೂಲಕ ಶೋಭಾ ಶೆಟ್ಟಿ ಮತ್ತು ರಜತ್‌ ಎಂಟ್ರಿ ಕೊಟ್ಟಿದ್ದು, ಪೈಪೋಟಿ ಟಫ್‌ ಆಗಲಿದೆ. ಎಲ್ಲರನ್ನೂ ಟಾರ್ಗೆಟ್‌ ಮಾಡಿ ವೈಲ್ಡ್‌ ಕಾರ್ಡ್‌ ಎಂಟ್ರಿಯನ್ನು ಮನೆಯೊಳಗೆ ಬಿಟ್ಟಂತಿದೆ. ಈ ಇಬ್ಬರ ಎಂಟ್ರಿಯಿಂದ ಬಿಗ್‌ ಬಾಸ್‌ ಮನೆ ಸಂಪೂರ್ಣ ಬದಲಾಗಿದೆ. ಬಿಗ್‌ ಬಾಸ್‌ ಶೋ, ಬಿಗ್‌ ಬಾಸ್‌ ಮನೆ ಮತ್ತು ಅಲ್ಲಿನ ಸ್ಪರ್ಧಿಗಳನ್ನು ಮಿಸ್‌ ಮಾಡಿಕೊಳ್ಳುತ್ತೇನೆ. ಸದ್ಯ ಕೆಲವೊಂದು ಪ್ರಾಜೆಕ್ಟ್‌ ಕೈಯಲ್ಲಿದ್ದು ಅದರತ್ತ ಗಮನ ಹರಿಸಿದ್ದೇನೆʼʼ ಎಂದು ಅನುಷಾ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: BBK 11: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ: ಒಂದೇ ಬಾತ್​ರೂಮ್​ನಲ್ಲಿ ಒಟ್ಟಿಗೆ ಸ್ನಾನ ಮಾಡಿದ ಸ್ಪರ್ಧಿಗಳು