ಬೆಂಗಳೂರು: ವಿಶ್ವದ ಕ್ಯಾಶ್ ರಿಚ್ ಕ್ರಿಕೆಟ್ ಲೀಗ್ 18ನೇ ಆವೃತ್ತಿಯ ಐಪಿಎಲ್(IPL Auction 2025) ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ನ.24 ಮತ್ತು 25 ರಂದು ಸೌದಿ ಅರೇಬಿಯದ ಜೆಡ್ಡಾದಲ್ಲಿ ಹರಾಜು ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಹರಾಜಿನಲ್ಲಿ ದೊಡ್ಡ ಕ್ರಿಕೆಟ್ ತಾರೆಗಳಿಗಾಗಿ ಫ್ರಾಂಚೈಸಿಗಳು ಬಿಡ್ಡಿಂಗ್ ನಡೆಸಲಿದೆ. ರಿಷಭ್ ಪಂತ್, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಅರ್ಶದೀಪ್ ಸಿಂಗ್ ದೊಡ್ಡ ಮೊತ್ತಕ್ಕೆ ಹರಾಜಾಗುವ ಎಲ್ಲ ಸಾಧ್ಯತೆಗಳಿವೆ. ಹರಾಜು ಪ್ರಕ್ರಿಯೆಯ ಸಂಪೂರ್ಣ ಮಾಹಿಗಿ ಇಲ್ಲಿದೆ.
ಒಟ್ಟು ಆಟಗಾರರು
ಮೆಗಾ ಹರಾಜಿನಲ್ಲಿ ಒಟ್ಟು 574 ಮಂದಿ ಆಟಗಾರರಿದ್ದಾರೆ. 66 ಮಂದಿ ಭಾರತೀಯರಾದರೆ, 208 ಕ್ರಿಕೆಟಿಗರು ವಿದೇಶೀಯರು. 81 ಆಟಗಾರರು 2 ಕೋಟಿ ರೂ., 27 ಕ್ರಿಕೆಟಿಗರು 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ. ಒಟ್ಟು 1,574 ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದರು.
ಹರಾಜು ನಡೆಸುವವರು ಯಾರು?
ಮಹಿಳಾ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ ನಡೆಸಿ ಖ್ಯಾತಿ ಗಳಿಸಿರುವ ಮುಂಬೈನ ಮಲ್ಲಿಕಾ ಸಾಗರ್ ಈ ಬಾರಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಸಿಕೊಡಲಿದ್ದಾರೆ. ಕಳೆದ ವರ್ಷ ದುಬೈನಲ್ಲಿ ನಡೆದಿದ್ದ ಮಿನಿ ಹರಾಜು ಪ್ರಕ್ರಿಯೆಯಲ್ಲೂ ಮಲ್ಲಿಕಾ ಸಾಗರ್ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಸಂಪೂರ್ಣವಾಗಿ ಇವರೇ ಹರಾಜು ಪ್ರಕ್ರಿಯೆ ನಡೆಸಲಿದ್ದಾರೆ. ಅಲ್ಲಿಗೆ ಮೊದಲ ಬಾರಿಗೆ ಮಹಿಳೆಯೊಬ್ಬರು ಈ ಹೊಣೆ ಹೊತ್ತ ದಾಖಲೆ ನಿರ್ಮಾಣವಾಗಲಿದೆ.
ಇದನ್ನೂ ಓದಿ IPL 2025 Auction: ಐಪಿಎಲ್ ಹರಾಜಿನಲ್ಲಿ ರಾಜ್ಯದ 24 ಆಟಗಾರರು ಭಾಗಿ
ನೇರ ಪ್ರಸಾರ
ಹರಾಜು ಪ್ರಕ್ರಿಯೆಯ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರಗೊಳ್ಳಲಿದೆ. ಮೊಬೈಲ್ ಅಪ್ಲಿಕೇಶನ್‌ನಲ್ಲಿ ಜಿಯೋ ಸಿನಿಮಾದಲ್ಲಿ ನೋಡಬಹುದು. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12.30ಕ್ಕೆ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ.
ತಂಡಗಳ ಬಳಿ ಇರುವ ಮೊತ್ತ
1. ಪಂಜಾಬ್ ಕಿಂಗ್ಸ್-110.5 ಕೋಟಿ ರೂ.
2. ರಾಯಲ್ ಚಾಲೆಂಜರ್ಸ್ ಬೆಂಗಳೂರು- 83 ಕೋಟಿ ರೂ.
3. ಡೆಲ್ಲಿ ಕ್ಯಾಪಿಟಲ್ಸ್-73 ಕೋಟಿ ರೂ.
4. ಲಕ್ನೋ ಸೂಪರ್ ಜೈಂಟ್ಸ್-69 ಕೋಟಿ ರೂ.
5. ಗುಜರಾತ್ ಟೈಟಾನ್ಸ್- 69 ಕೋಟಿ ರೂ.
6. ಮುಂಬೈ ಇಂಡಿಯನ್ಸ್- 55 ಕೋಟಿ ರೂ.
7. ರಾಜಸ್ಥಾನ್ ರಾಯಲ್ಸ್-41ಕೋಟಿ ರೂ.
8. ಸನ್‌ರೈಸರ್ಸ್ ಹೈದರಾಬಾದ್-45 ಕೋಟಿ ರೂ.
9. ಚೆನ್ನೈ ಸೂಪರ್ ಕಿಂಗ್ಸ್-55 ಕೋಟಿ ರೂ.
10. ಕೋಲ್ಕತ್ತಾ ನೈಟ್ ರೈಡರ್ಸ್-51 ಕೋಟಿ ರೂ.