ದುಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಮತ್ತು ನಾಲ್ಕನೇ ಟಿ20 ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಭಾರತದ ಎಡಗೈ ಯುವ ಬ್ಯಾಟರ್ ತಿಲಕ್ ವರ್ಮಾ(Tilak Varma) ನೂತನ ಐಸಿಸಿ ಟಿ20 ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ(ICC T20I Rankings) ಜೀವನಶ್ರೇಷ್ಠ ಸಾಧನೆಗೈದಿದ್ದಾರೆ. 69 ಸ್ಥಾನಗಳ ಜಿಗಿತ ಕಂಡಿರುವ ತಿಲಕ್ ತನ್ನ ಜೀವನಶ್ರೇಷ್ಠ 3ನೇ ಸ್ಥಾನವನ್ನು ಪಡೆದಿದ್ದಾರೆ. ಈ ಹಾದಿಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಅವರನ್ನು ಹಿಂದಿಕ್ಕಿದ್ದಾರೆ.
ಸೆಂಚುರಿಯನ್‌ನಲ್ಲಿ ನಡೆದಿದ್ದ ಮೂರನೇ ಟಿ20 ಪಂದ್ಯದಲ್ಲಿ ಅಜೇಯ 107 ರನ್ ಬಾರಿಸಿದ್ದ ತಿಲಕ್, ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿಯೂ ಅಜೇಯ 120 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಅವರ ಈ ಸಾಹಸದ ಬ್ಯಾಟಿಂಗ್‌ನಿಂದಾಗಿ ಟೀಂ ಇಂಡಿಯಾ 4 ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಜಯಿಸಿತ್ತು. ಒಟ್ಟಾರೆ ಟೂರ್ನಿಯಲ್ಲಿ 280 ರನ್ ಕಲೆ ಹಾಕಿದ್ದರು. ಜತೆಗೆ ಟಿ20ಐ ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಸಾಧನೆ ಮಾಡಿದ್ದರು.
ಈ ವರ್ಷದ ಆರಂಭದಲ್ಲಿ ನಂ.1 ಸ್ಥಾನ ಅಲಂಕರಿಸಿದ್ದ ಸೂರ್ಯಕುಮಾರ್ ಯಾದವ್ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿಯೂ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಸರಣಿಯಲ್ಲಿ 2 ಶತಕ ಬಾರಿಸಿ ಮಿಂಚಿದ್ದ ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್ ಕೂಡ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ್ದಾರೆ. 17 ಸ್ಥಾನಗಳ ಪ್ರಗತಿಯೊಂದಿಗೆ 22 ನೇ ಸ್ಥಾನಕ್ಕೆ ತಲುಪಿದ್ದಾರೆ.
ಇದನ್ನೂ ಓದಿ IND vs SA: ಮೂರನೇ ಕ್ರಮಾಂಕವನ್ನು ತಿಲಕ್ ವರ್ಮಾಗೆ ತ್ಯಾಗ ಮಾಡಲು ಕಾರಣ ತಿಳಿಸಿದ ಸೂರ್ಯ!
ಪಾಂಡ್ಯ ನಂ.1 ಆಲ್‌ರೌಂಡರ್
ಆಲ್‌ರೌಂಡರ್‌ಗಳ ಯಾದಿಯಲ್ಲಿ ಟೀಮ್ ಇಂಡಿಯಾದ ಹಾರ್ದಿಕ್ ಪಾಂಡ್ಯ(244 ರೇಟಿಂಗ್ ಅಂಕ) ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಪಾಂಡ್ಯ(Hardik Pandya) ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ನೇಪಾಳದ ದೀಪೇಂದ್ರ ಸಿಂಗ್ ಐರಿ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ 4-ಪಂದ್ಯಗಳ ಸರಣಿಯಲ್ಲಿ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಇದು ಅವರ ಶ್ರೇಯಾಂಕ ಪ್ರಗತಿಗೆ ಕಾರಣವಾಯಿತು.