ಮುಂಬೈ: ಮಹಾರಾಷ್ಟ್ರ (Maharashtra Elections 2024) ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆ ಹಾಗೂ ಕೆಲವು ರಾಜ್ಯಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆ ಮತದಾನ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಮಹಾರಾಷ್ಟ್ರದಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದ್ದು, ರಾಜ್ಯದಾದ್ಯಂತ 18 ವರ್ಷದ ಯುವ ಮತದಾರರಿಂದ ಹಿಡಿದು ನೂರು ವರ್ಷ ದಾಟಿರುವ ಶತಾಯುಷಿ ಮತದಾರರು ಕೂಡ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.
ಮುಂಬೈನ ನೇಪಿಯನ್ ಸಿ ರೋಡ್ ನ 113 ವರ್ಷದ ಮಹಿಳೆ ಮತ್ತು ಗ್ರಾಂಟ್ ರೋಡ್ ಪ್ರದೇಶದ ನಿವಾಸಿ 103 ವರ್ಷದ ಪುರುಷರೊಬ್ಬರು ಮತದಾನ ಮಾಡಿದ್ದಾರೆ. ದೇಶ, ಪ್ರಜಾಪ್ರಭುತ್ವ ಮತ್ತು ಮತದಾನದ ಮೇಲೆ ವಯೋ ವೃದ್ಧರಿಗಿರುವ ಗೌರವವು ಯುವ ಮತದಾರರಲ್ಲಿ ಉತ್ಸಾಹವನ್ನು ತಂದಿದೆ.
113-year-old Kanchanben votes in Mumbai.
— Nehra (@Nehra_Singh80) November 20, 2024
Whats your Excuse ??? pic.twitter.com/GTYETYPTK5
ಮತದಾನ ಪ್ರಕ್ರಿಯೆ ಮುಗಿದ ಕೂಡಲೇ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಹೇಳಿಕೆಯನ್ನು ಬಿಡುಗಡೆ ಮಾಡಿದೆ. “113 ವಯಸ್ಸಿನ ನೇಪಿಯನ್ ಸಿ ರೋಡ್ ನ ನಿವಾಸಿಯಾದ ಕಾಂಚನ್‌ಬೆನ್ ನಂದಕಿಶೋರ್ ಬಾದ್‌ಶಾ ಮತ್ತು 103 ವರ್ಷ ವಯಸ್ಸಿನ ಗ್ರಾಂಟ್ ರಸ್ತೆಯ ನಿವಾಸಿ ಜಿಜಿ ಪರೇಖ್ ಮಲಬಾರ್ ಹಿಲ್‌ನಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದ್ದಾರೆ” ಎಂದು ತಿಳಿಸಿದೆ.
ಮತ ಚಲಾಯಿಸಲು ಮತಗಟ್ಟೆಗೆ ಬಂದ ಶತಾಯುಷಿಗಳನ್ನು ಕಂಡ ಕೂಡಲೇ ಚುನಾವಣಾ ಆಯೋಗದ ಸಿಬ್ಬಂದಿಗಳು ಗೇಟ್‌ನವರೆಗೂ ಹೋಗಿ ಅವರನ್ನು ಕರೆ ತಂದಿದ್ದಾರೆ. ಚುನಾವಣಾ ಆಯೋಗವು 85 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯವನ್ನು ನವೆಂಬರ್ 16 ರವರೆಗೂ ಒದಗಿಸಿತ್ತು. ಆದರೂ ಶತಾಯುಷಿಗಳು ವೈಯಕ್ತಿಕವಾಗಿ ಮತದಾನ ಪ್ರಕ್ರಿಯೆಯಲ್ಲಿ ಹುರುಪಿನಿಂದ ಪಾಲ್ಗೊಂಡಿದ್ದಾರೆ. ನೇರವಾಗಿ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ಮತದಾನ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನ ವ್ಯಕ್ತಿಗಳಿಗೆ ಗಾಲಿ ಕುರ್ಚಿಯ ಸೌಲಭ್ಯವನ್ನು ನೀಡಲಾಗಿತ್ತು. NSS ಮತ್ತು ಎನ್‌ಸಿಸಿ ಯ ಸ್ವಯಂ ಸೇವಕರು ಮತಗಟ್ಟೆಯಲ್ಲಿಅವರಿಗೆ ಸಹಾಯ ಮಾಡಿದ್ದಾರೆ.
120 ವರ್ಷ ಮೇಲ್ಪಟ್ಟ 110 ಮತದಾರರಿದ್ದಾರೆ
ಮಹಾರಾಷ್ಟ್ರದಲ್ಲಿ 120 ವರ್ಷ ಮೇಲ್ಪಟ್ಟ 110 ಮತದಾರರಿದ್ದಾರೆ ಎಂದು ತಿಳಿದು ಬಂದಿದೆ. ಅಕ್ಟೋಬರ್ 30, 2024ರಲ್ಲಿ ಮಹಾರಾಷ್ಟ್ರವು 18-19 ವರ್ಷ ವಯಸ್ಸಿನ 22,22,704 ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 30-39 ವರ್ಷ ವಯಸ್ಸಿನ ಮತದಾರರು ಹೆಚ್ಚಿದ್ದು, 2,18,15,278 ರಷ್ಟಿದ್ದಾರೆ. 85 ರಿಂದ 150 ವರ್ಷ ವಯಸ್ಸಿನ 12,40,919 ಮತದಾರರು ಮಹಾರಾಷ್ಟ್ರದಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ 120 ವರ್ಷಕ್ಕಿಂತ ಮೇಲ್ಪಟ್ಟ 110 ನೋಂದಾಯಿತ ಮತದಾರಿದ್ದು ಅದರಲ್ಲಿ 56 ಪುರುಷರು ಮತ್ತು 54 ಮಹಿಳಾ ಮತದಾರರಿದ್ದಾರೆಂದು ಚುನಾವಣಾ ಆಯೋಗ ಹೇಳಿದೆ.
ಬುಧವಾರ ನಡೆದ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ವಯೋ ವೃದ್ಧರು ಸಕ್ರಿಯವಾಗಿ ಪಾಲ್ಗೊಂಡು ಮತ ಚಲಾಯಿಸುವ ಮೂಲಕ ಯುವ ಮತದಾರರನ್ನು ಪ್ರೋತ್ಸಾಹಿಸಿದ ಕಾರಣಕ್ಕೆ ಚುನಾವಣಾ ಆಯೋಗವು ಅವರಿಗೆ ಧನ್ಯವಾದಗಳನ್ನು ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Maharashtra Election: ಮಹಾರಾಷ್ಟ್ರ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ