Wednesday, 20th November 2024

Pakistan News: ಆತ್ಮಾಹುತಿ ಕಾರು ಬಾಂಬ್‌ ಸ್ಪೋಟದಿಂದ 12 ಪಾಕ್‌ ಯೋಧರ ಸಾವು!

At least 12 Pak Army soldiers killed in suicide car bomb attack in Khyber-Pakhtunkhwa

ನವದೆಹಲಿ: ಪಾಕಿಸ್ತಾನದಲ್ಲಿ (Pakistan News) ಭಯೋತ್ಪಾದಕ ಕೃತ್ಯಗಳು ನಡೆಯುತ್ತಲೇ ಇವೆ. ಮಂಗಳವಾರ (ನವೆಂಬರ್ 19), ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದ ಆತ್ಮಾಹುತಿ ಕಾರು ಬಾಂಬ್‌ ದಾಳಿಯಲ್ಲಿ 12 ಯೋಧರು ಸಾವಿಗೀಡಾಗಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇನಾ ಚೆಕ್ ಪೋಸ್ಟ್ ಬಳಿ ಭಯೋತ್ಪಾದಕರು ಸ್ಫೋಟಕ ತುಂಬಿದ ವಾಹನವನ್ನು ಸ್ಫೋಟಿಸಿದಾಗ ಈ ಘಟನೆ ನಡೆದಿದೆ.

ಹಫೀಜ್ ಗುಲ್ ಬಹದ್ದೂರ್ ಗುಂಪು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಆದರೆ, ಈ ಘಟನೆಯ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ, ಆದರೆ ಸಂಬಂಧಪಟ್ಟ ಉಗ್ರರನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೋಮವಾರವೂ ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಅದೇ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 8 ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 18 ಯೋಧರು ಸಾವಿಗೀಡಾಗಿರುವುದು ಪಾಕಿಸ್ತಾನದಲ್ಲಿ ತೀವ್ರ ಸಂಚಲನವನ್ನು ಉಂಟು ಮಾಡಿದೆ. ಪಾಕಿಸ್ತಾನದಲ್ಲಿ ನಿರಂತರ ದಾಳಿಗಳು ಹೆಚ್ಚುತ್ತಿವೆ. ಈ ವೇಳೆ ಹಲವು ಪೊಲೀಸ್ ವಾಹನಗಳಿಗೂ ಹಾನಿಯಾಗಿದೆ. ಈ ದಾಳಿಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್ ಟಿಟಿಪಿ ಹೊತ್ತುಕೊಂಡಿದೆ.

ದಾಳಿಯ ಹೊಣೆಯನ್ನು ವಹಿಸಿಕೊಂಡ ತೆಹ್ರೀಕ್-ಎ-ತಾಲಿಬಾನ್

ಸೋಮವಾರದ ದಾಳಿಯ ಹೊಣೆಯನ್ನು ಟಿಟಿಪಿ ವಹಿಸಿಕೊಂಡಿದೆ ಮತ್ತು ಇದು ಭದ್ರತಾ ಪಡೆಗಳ ಕ್ರಮಗಳಿಗೆ ಪ್ರತಿಕ್ರಿಯೆಯಾಗಿದೆ ಎಂದು ಹೇಳಿಕೊಂಡಿದೆ. ತಾಲಿಬಾನ್ ಪರ ಟಿಟಿಪಿ ಮತ್ತು ಹಫೀಜ್ ಗುಲ್, ಬಹದ್ದೂರ್ ಗುಂಪಿನಂತಹ ಇತರ ಸಂಘಟನೆಗಳು ಕಳೆದ ಕೆಲವು ವರ್ಷಗಳಲ್ಲಿ ಈ ಪ್ರದೇಶದಲ್ಲಿ ತಮ್ಮ ಚಟುವಟಿಕೆಗಳನ್ನು ಹೆಚ್ಚಿಸಿವೆ. ವಿಶೇಷವಾಗಿ 2021ರಲ್ಲಿ ಆಫ್ಘನ್ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ, ಈ ಪ್ರದೇಶದಲ್ಲಿ ಹಿಂಸಾಚಾರದಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ.

ಕಳೆದ 24 ಗಂಟೆಗಳಲ್ಲಿ 18 ಯೋಧರು ಹುತಾತ್ಮ

ಇದೇ ಪ್ರದೇಶದಲ್ಲಿ 24 ಗಂಟೆಯೊಳಗೆ 18 ಯೋಧರು ಹುತಾತ್ಮರಾಗಿದ್ದು, ಈ ಭಾಗದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಸೋಮವಾರ ಅಫ್ಘಾನಿಸ್ತಾನದ ಗಡಿಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 8 ಯೋಧರು ಹುತಾತ್ಮರಾಗಿದ್ದರು. ನಿರಂತರ ದಾಳಿಗಳು ಪಾಕಿಸ್ತಾನದ ಭದ್ರತಾ ಪಡೆಗಳ ಮೇಲೆ ಅಪಾರ ಒತ್ತಡವನ್ನು ಉಂಟುಮಾಡಿದೆ ಮತ್ತು ಸ್ಥಳೀಯ ಜನರಲ್ಲಿ ಭೀತಿಯನ್ನು ಉಂಟುಮಾಡಿದೆ. ಹಫೀಜ್ ಗುಲ್ ಬಹದ್ದೂರ್ ಗುಂಪು ಮತ್ತು ಟಿಟಿಪಿ ಎರಡೂ ತಾಲಿಬಾನ್ ಪರ ಗುಂಪುಗಳಾಗಿವೆ. ಆದಾಗ್ಯೂ, ಈ ಗುಂಪುಗಳ ಉದ್ದೇಶಗಳು ಮತ್ತು ತಂತ್ರಗಳು ವಿಭಿನ್ನವಾಗಿವೆ.