ಬೆಂಗಳೂರು: ಅತ್ಯಂತ ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕದ (Karantaka) ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ಕ್ಷೇತ್ರಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇವೆ. ಈ ಮೂರೂ ಕ್ಷೇತ್ರಗಳ ಅಭ್ಯರ್ಥಿಗಳು ಗೆಲುವು-ಸೋಲಿನ ಲೆಕಾಚಾರಗಳಲ್ಲಿ ತೊಡಗಿದ್ದಾರೆ ಹಾಗೂ ತಮ್ಮ ಅದೃಷ್ಟ ಪರೀಕ್ಷೆಯ ಫಲಿತಾಂಶಕ್ಕಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಇದರ ನಡುವೆ ಈ ಮೂರೂ ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಪಡೆಯಲಿದೆ ಚುನಾವಣೋತ್ತರ ಸಮೀಕ್ಷೆಯೊಂದು ಭವಿಷ್ಯ ನುಡಿದಿದೆ.
ಅತ್ಯಂತ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಸ್ವಾಮಿ ಅವರು ಬಿಜೆಪಿ ಮತ್ತು ಜಿಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಪಕ್ಷದಿಂದ ಸಿಪಿ ಯೋಗೇಶ್ವರ್ ಸ್ಪರ್ಧೆ ಮಾಡಿದ್ದಾರೆ.
ಇನ್ನು ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾಸೀರ್ ಖಾನ್ ಪಠಾಣ್ ಹಾಗೂ ಬಿಜೆಪಿ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಸ್ಪರ್ಧಿಸಿದ್ದಾರೆ. ಇನ್ನು ಮೂರನೇ ಕ್ಷೇತ್ರವಾದ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಬಂಗಾರು ಲಕ್ಷ್ಮಣ್ ಮತ್ತು ಕಾಂಗ್ರೆಸ್ ವತಿಯಿಂದ ಇ ಅನ್ನಪೂರ್ಣ ಕಣದಲ್ಲಿದ್ದಾರೆ.
Karnataka Bypoll: ಕರ್ನಾಟಕ ವಿಧಾನಸಭೆ ಉಪಚುನಾವಣೆ, 3 ಕ್ಷೇತ್ರಗಳ ಮತದಾನ ಹೀಗಿದೆ
ಪಿ ಮಾರ್ಕ್ ಚುನಾವಣೋತ್ತರ ಸಮೀಕ್ಷೆಯ ವರದಿ
ಅಂದ ಹಾಗೆ ಈ ಮೂರೂ ಬೈ ಎಲೆಕ್ಷನ್ನಲ್ಲಿ ಯಾವ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆಂಬ ಬಗ್ಗೆ ತೀವ್ರ ಕುತೂಹಲವಿದೆ. ಅದರಂತೆ ಪಿ ಮಾರ್ಕ್ ಸಂಸ್ಥೆಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಬೈ ಎಲೆಕ್ಷನ್ನಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆದರೆ, ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಜಯ ದಾಖಲಿಸಲಿದೆ ಎಂದು ಹೇಳಲಾಗುತ್ತಿದೆ. ಚನ್ನಪಟ್ಟಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ಸ್ವಾಮಿ ಗೆಲುವು ಪಡೆದರೆ, ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ ಜಯಿಸಲಿದ್ದಾರೆ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ಗೆಲುವು ಸಾಧಿಸಲಿದ್ದಾರೆಂದು ಪಿ ಮಾರ್ಕ್ ಸಮೀಕ್ಷೆ ತಿಳಿಸಿದೆ.
ಈ ಬಾರಿ ದಾಖಲೆಯ ಮತದಾನ
ಈ ಬಾರಿ ಚನ್ನಪಟ್ಟಣದಲ್ಲಿ ದಾಖಲೆಯ ಮತದಾನ ನಡೆದಿದೆ. ಒಟ್ಟು ಶೇ. 89 ರಷ್ಟು ಮತದಾನ ಚನ್ನಪಟ್ಟಣದಲ್ಲಿ ನಡೆದಿದೆ. ಇನ್ನು ಬಸವರಾಜ ಬೊಮ್ಮಾಯಿ ಪುತ್ರ ಸ್ಪರ್ಧಿಸಿರುವ ಶಿಗ್ಗಾವಿಯಲ್ಲಿಯೂ ಶೇ 80.72ರಷ್ಟು ಮತದಾನ ನಡೆದಿದೆ ಹಾಗೂ ಒಟ್ಟು 1.91 ಲಕ್ಷ ಜನರು ಮತವನ್ನು ಚಲಾಯಿಸಿದ್ದಾರೆ. ಇನ್ನು ಸಂಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 2.34 ಲಕ್ಷ ಮತದಾರರ ಪೈಕಿ 1.80 ಲಕ್ಷ ಜನರು ಮತ ಚಲಾಯಿಸಿದ್ದಾರೆ. ಇಲ್ಲಿ ಒಟ್ಟು 76.24ರಷ್ಟು ಮತದಾನ ನಡೆದಿದೆ.