ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ನಟ ದರ್ಶನ್ (Actor Darshan) ಮತ್ತು ಅವರ ಸ್ನೇಹಿತೆ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಲಿದೆ. ಈಗಾಗಲೇ ಅನಾರೋಗ್ಯದ ಹಿನ್ನೆಲೆ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಿಂದ ಜಾಮೀನು ನೀಡುವಂತೆ ಈ ಹಿಂದೆ ಹೈಕೋರ್ಟ್ ಸಾಮಾನ್ಯ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆಯು ಇಂದು ಗುರುವಾರ ನವೆಂಬರ್ 21ರಂದು ಕರ್ನಾಟಕ ಹೈಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ. ಅದರ ಅರ್ಜಿ ವಿಚಾರಣೆಯು ಗುರುವಾರ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿರುವ ನ್ಯಾಯಪೀಠದಲ್ಲಿ ನಡೆಯಲಿದೆ. ದರ್ಶನ್ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಅನಾರೋಗ್ಯದ ಹೆಸರಿನಲ್ಲಿ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿರುವ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರಿಗೆ ಈವರೆಗೂ ಆಪರೇಷನ್ ಮಾಡಿಲ್ಲ. ಮೂರು ವಾರ ಕಳೆದಿವೆ. ಇದೇ ಕಾರಣದಿಂದಾಗಿ ಪೊಲೀಸರು ನಟ ದರ್ಶನ್ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಅನಾರೋಗ್ಯ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಈವರೆಗೂ ಸರ್ಜರಿ ಮಾಡಿಸಿಲ್ಲ. ಆ ಬಗ್ಗೆ ಅವರು ನ್ಯಾಯಾಲಯಕ್ಕೆ ಪ್ರತಿಕ್ರಿಯಿಸಬೇಕಿದೆ. ಇನ್ನೂ ಯಾಕೆ ಸರ್ಜರಿ ಮಾಡಿಸಿಲ್ಲ, ಬೆನ್ನು ನೋವಿಗೆ ಚಿಕಿತ್ಸೆ ಯಾವ ಹಂತದಲ್ಲಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ದರ್ಶನ್ ಪರ ವಕೀಲರು ಹೈಕೋರ್ಟ್ಗೆ ನ.21ರಂದು ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಹಲವು ಆರೋಪಿಗಳ ಪೈಕಿ ಕೆಲವರಿಗೆ ಮಾತ್ರ ಜಾಮೀನು ಸಿಕ್ಕಿದೆ. ಪವನ್, ನಂದೀಶ್ ಅವರ ಜಾಮೀನು ಅರ್ಜಿ ನಿನ್ನೆ ವಜಾ ಆಗಿದೆ. ಜಾಮೀನು ಅರ್ಜಿ ವಜಾಗೊಳಿಸಿ ಬೆಂಗಳೂರಿನ ಸಿಸಿಹೆಚ್ 57ರ ಜಡ್ಜ್ ಜೈಶಂಕರ್ ಆದೇಶ ನೀಡಿದ್ದಾರೆ. ಧನರಾಜ್ ಜಾಮೀನು ಅರ್ಜಿ ಬಗ್ಗೆ ಗುರುವಾರ (ನ.21) ಆದೇಶ ಪ್ರಕಟ ಆಗಲಿದೆ.
ಈ ಸುದ್ದಿಯನ್ನೂ ಓದಿ: Darshan Thoogudeepa Bail : ಬೇರೆ ನಟರನ್ನುನಿಂದಿಸಬೇಡಿ; ದರ್ಶನ್ ಅಭಿಮಾನಿಗಳ ಮನವಿ!
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಮಧ್ಯಂತರ ಜಾಮೀನು ರದ್ದು ಕೋರಿ ಶೀಘ್ರದಲ್ಲೇ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಮಿಷನರ್ ದಯಾನಂದ್ ಅವರು, ಮೇಲ್ಮನವಿ ಸಲ್ಲಿಸಲು ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ. ಕನ್ನಡದಲ್ಲಿರುವ ಮಾಹಿತಿಯನ್ನು ಇಂಗ್ಲಿಷ್ಗೆ ಭಾಷಾಂತರಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.