Thursday, 21st November 2024

IND vs AUS: ಪೂಜಾರ ಇಲ್ಲದಿರುವುದು ಸಂತಸದ ವಿಷಯ; ಹ್ಯಾಜಲ್‌ವುಡ್‌

ಪರ್ತ್‌: ಕಳೆದ ಎರಡು ಆಸ್ಟ್ರೆಲಿಯಾ(IND vs AUS) ಪ್ರವಾಸದ ಟೆಸ್ಟ್​ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಭಾರತದ ಅನುಭವಿ ಬ್ಯಾಟರ್​ ಚೇತೇಶ್ವರ ಪೂಜಾರ(Cheteshwar Pujara) ಈ ಬಾರಿ ಭಾರತ ತಂಡದಲ್ಲಿ ಇಲ್ಲದಿರುವುದು ಬಹಳ ಸಂತಸದ ವಿಚಾರ ಎಂದು ಆಸೀಸ್‌ ವೇಗಿ ಜೋಶ್‌ ಹ್ಯಾಜಲ್‌ವುಡ್‌(Josh Hazlewood) ಹೇಳಿದ್ದಾರೆ.

ಬಹುನಿರೀಕ್ಷಿತ ಭಾರತ ಮತ್ತು ಆಸ್ಟ್ರೇಲಿಯಾ ನಡುವ 5 ಪಂದ್ಯಗಳ ಬಾರ್ಡರ್‌-ಗವಾಸ್ಕರ್‌(Border Gavaskar Trophy) ಟೆಸ್ಟ್‌ ಸರಣಿಗೆ ನಾಳೆಯಿಂದ ಅಧಿಕೃತ ಚಾಲನೆ ಸಿಗಲಿದೆ. ಪರ್ತ್‌ನಲ್ಲಿ ಆರಂಭವಾಗುವ ಮೊದಲ ಟೆಸ್ಟ್‌ ಪಂದ್ಯಕ್ಕೆ ಉಭಯ ತಂಡಗಳು ಸಕಲ ಸಿದ್ಧತೆಯೊಂದಿಗೆ ರೆಡಿಯಾಗಿ ನಿಂತಿದೆ.

ಪಂದ್ಯಕ್ಕೂ ಮುನ್ನ ನಡೆದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಹ್ಯಾಜಲ್‌ವುಡ್‌, ʼಅನುಭವಿ ಆಟಗಾರ ಪೂಜಾರ ಆಸ್ಟ್ರೇಲಿಯಾ ನೆಲದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. 2018-19ರ ಸಾಲಿನ ಆಸೀಸ್‌ ಪ್ರವಾಸದಲ್ಲಿ ಪೂಜಾರ ನಮ್ಮ ತಂಡದ ಬೌಲರ್‌ಗಳ ತಲೆಗೆಡಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಒಬ್ಬ ಬ್ಯಾಟರ್‌ ಕ್ರೀಸ್‌ಗೆ ಅಂಟಿಕೊಂಡರೆ ಅವರನ್ನು ಔಟ್‌ ಮಾಡುವುದು ಕಷ್ಟ. ಇಂತಹ ಕೆಲಸವನ್ನು ಪೂಜಾರ ಹಲವು ಬಾರಿ ಮಾಡಿದ್ದಾರೆ. ಆದರೆ ಈ ಬಾರಿ ಅವರು ತಂಡದಲ್ಲಿಲ್ಲ ಹೀಗಾಗಿ ನಾವು ಸಂತಸಗೊಂಡಿದ್ದೇವೆʼ ಎಂದು ಹೇಳಿದ್ದಾರೆ.

ಪೂಜಾರ 2018-19ರ ಸಾಲಿನ ಆಸೀಸ್‌ ಪ್ರವಾಸದಲ್ಲಿ ಒಟ್ಟು ನಾಲ್ಕು ಪಂದ್ಯಗಳಿಂದ 521 ರನ್‌ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅಲ್ಲದೆ ಸರಣಿ ಗೆಲುವಿನಲ್ಲಿಯೂ ಇವರ ಬ್ಯಾಟಿಂಗ್‌ ಮಹತ್ವದ ಪಾತ್ರವಹಿಸಿತ್ತು. ಸಿಡ್ನಿಯಲ್ಲಿ ನಡೆದಿದ್ದ ಅಂತಿಮ ಪಂದ್ಯದಲ್ಲಿ 193 ರನ್‌ ಬಾರಿಸಿ ಭಾರತವನ್ನು ಸೋಲಿನಿಂದ ಪಾರು ಮಾಡಿದ್ದರು. 2020-21 ರ ಪ್ರವಾಸದಲ್ಲಿಯೂ ಪೂಜಾರ ಸರಣಿ ಗೆಲ್ಲುವಲ್ಲಿ ತಂಡಕ್ಕೆ ನೆರವಾಗಿದ್ದರು. ಬ್ಯಾಟಿಂಗ್‌ ಫಾರ್ಮ್‌ ಕಳೆದುಕೊಂಡಿರುವ ಕಾರಣ ಅವರಿಗೆ ಈ ಬಾರಿ ತಂಡದಲ್ಲಿ ಅವಕಾಶ ನೀಡಿಲ್ಲ.

ಇದನ್ನೂ ಓದಿ IND vs AUS: ಸ್ಲಿಪ್‌ ಕ್ಯಾಚ್‌ ಅಭ್ಯಾಸ ನಡೆಸಿದ ಭಾರತ ತಂಡ

ಈ ಬಾರಿ ಪೂಜಾರ ವೀಕ್ಷಕ ವಿವರಣೆಕಾರರಾಗಿ ಬಾರ್ಡರ್-ಗಾವಸ್ಕರ್​ ಟ್ರೋಫಿಯಲ್ಲಿ ಭಾಗವಹಿಸಲಿದ್ದಾರೆ. ಸ್ಟಾರ್​ ಸ್ಪೋರ್ಟ್ಸ್​ ವಾಹಿನಿಯ ಹಿಂದಿ ಕಾಮೆಂಟರಿ ಪ್ಯಾನೆಲ್​ನಲ್ಲಿ ಪೂಜಾರ ಕೂಡ ಸ್ಥಾನ ಪಡೆದಿದ್ದಾರೆ. ಭಾರತ ಪರ 100ಕ್ಕೂ ಅಧಿಕ ಟೆಸ್ಟ್​ ಆಡಿರುವ 36 ವರ್ಷದ ಪೂಜಾರ 19 ಶತಕಗಳ ಸಹಿತ 7 ಸಾವಿರಕ್ಕೂ ಅಧಿಕ ರನ್​ ಗಳಿಸಿದ್ದಾರೆ. ಆದರೆ 2023ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ ಬಳಿಕ ಅವರು ಭಾರತ ಪರ ಯಾವುದೇ ಪಂದ್ಯ ಆಡಿಲ್ಲ.