ಪರ್ತ್: ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿರುವ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಶುಕ್ರವಾರ (ನ.22) ಬೆಳಗ್ಗೆ ಆರಂಭವಾಗಲಿದೆ. ಇಲ್ಲಿನ ಆಪ್ಟಸ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸೀಸ್ ತಂಡಗಳು ಸೆಣಸಾಟ ನಡೆಸಲಿದೆ. ಸರಣಿಯ ಮೊದಲ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗವನ್ನು ಅಂತಿಮಗೊಳಿಸಲಾಗಿದೆ(India’s Predicted XI) ಎಂದು ಟೀಮ್ ಇಂಡಿಯಾದ ಉಸ್ತುವಾರಿ ನಾಯಕ ಜಸ್‌ಪ್ರೀತ್ ಬುಮ್ರಾ(Jasprit Bumrah) ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆದರೆ ಯಾರೆಲ್ಲ ಆಡಲಿದ್ದಾರೆ ಎಂಬ ಗುಟ್ಟನ್ನು ಮಾತ್ರ ಈಗಲೇ ಬಿಟ್ಟುಕೊಡಲಾರೆ ಎಂದು ಹೇಳಿದ್ದಾರೆ.
ಟ್ರೋಫಿ ಎದುರು ಪೋಸ್ ಕೊಟ್ಟ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬುಮ್ರಾ, ʼಯಾವುದೇ ಪಂದ್ಯ ಗೆದ್ದಾಗಲೂ ಶೂನ್ಯದಿಂದಲೇ ಪ್ರಾರಂಭಿಸುತ್ತೇವೆ. ಪಂದ್ಯ ಸೋತಾಗಲೂ ಶೂನ್ಯದಿಂದಲೇ ಆರಂಭಿಸುತ್ತೇವೆ. ಕಿವೀಸ್ ಸರಣಿಯಲ್ಲಿ ಮಾಡಿದ ತಪ್ಪಿನಿಂದ ಪಾಠಗಳನ್ನು ಕಲಿತಿದ್ದೇವೆ. ಆದರೆ ಇಲ್ಲಿನ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿ ನಮ್ಮ ಫಲಿತಾಂಶವೂ ವಿಭಿನ್ನವಾಗಿದೆ’ ಎಂದು ಹೇಳಿದರು. ಆಸ್ಟ್ರೇಲಿಯಾದಲ್ಲಿ ಭಾರತವು ಇದುವರೆಗೆ 52 ಟೆಸ್ಟ್‌ಗಳನ್ನು ಆಡಿದೆ. ಈ ಪೈಕಿ ಕೇವಲ ಒಂಬತ್ತು ಪಂದ್ಯಗಳನ್ನು ಮಾತ್ರ ಗೆದ್ದಿದೆ. 30 ರಲ್ಲಿ ಸೋತಿದೆ.
ಎರಡನೇ ಮಗುವಿನ ಜನನದ ಹಿನ್ನೆಲೆಯಲ್ಲಿ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ. ರೋಹಿತ್ ಎರಡನೇ ಪಂದ್ಯದ ವೇಳೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ರೋಹಿತ್ ಸ್ಥಾನದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಭಾರತದ ಇನಿಂಗ್ಸ್ ಆರಂಭಿಸುವು ಖಚಿತ. ಬೆರಳಿನ ಮೂಳೆ ಮುರಿತಕ್ಕೊಳಗಾದ ಶುಭಮನ್ ಗಿಲ್ ಚೇತರಿಸಿಕೊಂಡಿದ್ದರೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ.
ಇದನ್ನೂ ಓದಿ IND vs AUS: ರೋಹಿತ್ ಅಲಭ್ಯರಾದರೆ ಬುಮ್ರಾ ನಾಯಕ; ಕೋಚ್ ಗಂಭೀರ್
ಏಕೈಕ ಸ್ಪಿನ್ನರ್
ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್‌ಗಳಾದ ಉಸ್ಮಾನ್ ಖವಾಜ, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ ಅವರಂತಹ ಅಪಾಯಕಾರಿ ಎಡಗೈ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಅವರನ್ನು ಮಾತ್ರ ಸ್ಪಿನ್ನರ್ ಆಗಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿಸಲು ಟೀಮ್ ಇಂಡಿಯಾ ಕಾರ್ಯತಂತ್ರ ರೂಪಿಸಿದೆ ಎನ್ನಲಾಗಿದೆ. ಎಡಗೈ ಬ್ಯಾಟರ್‌ಗಳ ಎದುರು ಅಶ್ವಿನ್ ಉತ್ತಮ ವಿಕೆಟ್ ದಾಖಲೆ ಕೂಡ ಹೊಂದಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ನಾಯಕ ಜಸ್‌ಪ್ರೀತ್ ಬುಮ್ರಾಗೆ ಮೊಹಮ್ಮದ್ ಸಿರಾಜ್ ಎಡರನೇ ವೇಗಿಯಾಗಿ ಸಾಥ್ ನೀಡಿದರೆ, ಆಕಾಶ್‌ದೀಪ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಮೂರನೇ ಮತ್ತು ನಾಲ್ಕನೇ ವೇಗಿಗಳಾಗಿ ಬೆಂಬಲ ನೀಡುವ ಸಾಧ್ಯತೆ ಇದೆ.
ಸಂಭಾವ್ಯ ಭಾರತ ತಂಡ
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ), ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್ ಬುಮ್ರಾ (ನಾಯಕ), ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.