Thursday, 21st November 2024

IND vs AUS: ಪರ್ತ್‌ ಟೆಸ್ಟ್‌ಗೆ ಮಳೆ ಭೀತಿ

ಪರ್ತ್‌: ಪ್ರವಾಸಿ ಭಾರತ ಮತ್ತು ಆತಿಥೇಯ ಆಸ್ಟ್ರೆಲಿಯಾ ತಂಡಗಳ ನಡುವೆ ನಾಳೆ(ಶುಕ್ರವಾರ)ಯಿಂದ ಪರ್ತ್​ನಲ್ಲಿ ಆರಂಭವಾಗಲಿರುವ ಬಾರ್ಡರ್ ಗಾವಸ್ಕರ್ ಟೆಸ್ಟ್‌​ ಟ್ರೋಫಿಯ ಮೊದಲ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ಆಡುವ ಬಳಗದ ಮಾಹಿತಿ ಹೀಗಿದೆ.

ಪರ್ತ್‌ನಲ್ಲಿ ಭಾರತ…

ಭಾರತ ತಂಡ ಪರ್ತ್‌ ಸ್ಟೇಡಿಯಂನಲ್ಲಿ ಇದುವರೆಗೆ 5 ಟೆಸ್ಟ್‌ ಪಂದ್ಯಗಳನ್ನು ಆಡಿದೆ. ಈ ಪೈಕಿ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ. ಆಸೀಸ್‌ ನಾಲ್ಕು ಪಂದ್ಯದಲ್ಲಿ ಗೆಲುವು ಕಂಡಿದೆ. ಇತ್ತಂಡಗಳು ಇಲ್ಲಿ ಕೊನೆಯ ಬಾರಿಗೆ ಟೆಸ್ಟ್‌ ಪಂದ್ಯ ಆಡಿದ್ದು 2018ರ ಪ್ರವಾಸದಲ್ಲಿ. ಸರಣಿಯ ದ್ವಿತೀಯ ಪಂದ್ಯ ಇದಾಗಿತ್ತು. ಅಂದು ನಾಯಕನಾಗಿದ್ದ ವಿರಾಟ್‌ ಕೊಹ್ಲಿ(123) ಶತಕ ಬಾರಿಸಿದ್ದರೂ ಭಾರತ 146 ರನ್‌ ಅಂತರದ ಸೋಲು ಕಂಡಿತ್ತು. ಭಾರತ ಈ ಮೈದಾನದಲ್ಲಿ ಗಳಿಸಿದ ಗರಿಷ್ಠ ಮೊತ್ತ 402 ರನ್‌. 1977ರಲ್ಲಿ ನಡೆದಿದ್ದ ಪಂದ್ಯವಾಗಿತ್ತು. 

ಮಳೆ ಭೀತಿ

ಮೊದಲ ಪಂದ್ಯಕ್ಕೆ ಮಳೆ ಭೀತಿ ಕೂಡ ಎದುರಾಗಿದೆ. ಕಳೆದ ಎರಡು ದಿನಗಳಿಂದ ಇಲ್ಲಿ ಮಳೆಯಾಗಿದ್ದು ಅಭ್ಯಾಸಕ್ಕೂ ಅಡ್ಡಿ ಮಾಡಿತ್ತು. ಹಮಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಪಂದ್ಯದ ಮೊದಲ ಮತ್ತು ಮೂರನೇ ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಹೀಗಾಗಿ ದಿನದಾಟ ರದ್ದಾಗುವ ಸಾಧ್ಯತೆಯೂ ಕಂಡು ಬಂದಿದೆ. ಮಳೆ ಜತೆಗೆ ಮಂಜಿನ ಕಾಟ ಕೂಡ ಇರಲಿದೆ ಎನ್ನಲಾಗಿದೆ.

ಇದನ್ನೂ ಓದಿ IND vs AUS: ಮೊದಲ ಟೆಸ್ಟ್‌ಗೆ ಆಡುವ ಬಳಗ ಅಂತಿಮ; ನಾಯಕ ಬುಮ್ರಾ

ಪಿಚ್‌ ರಿಪೋರ್ಟ್‌

ಪರ್ತ್​ನಲ್ಲಿ ಬೌನ್ಸಿ ಪಿಚ್​ ಸಿದ್ಧಪಡಿಸಲಾಗಿದೆ. ಈ ಡ್ರಾಪ್​ ಇನ್​ ಪಿಚ್​ ಭಾರತೀಯ ಬ್ಯಾಟರ್​ಗಳಿಗೆ ಮತ್ತಷ್ಟು ಕಠಿಣ ಸವಾಲೊಡ್ಡುವ ಭೀತಿ ಮೂಡಿಸಿದೆ. ತವರಿನ ಸ್ಪಿನ್​ ಸ್ನೇಹಿ ಧೂಳಿನ ಪಿಚ್​ನಲ್ಲೇ ಆಡಲು ಪರದಾಡಿದ ಭಾರತೀಯ ಬ್ಯಾಟರ್​ಗಳ ನಿದ್ದೆಗೆಡಿಸುವಂಥ ಪಿಚ್​ ಇದಾಗಿದೆ ಎನ್ನಲಾಗಿದೆ. ಹಸಿರು ಮತ್ತು ತೇವಾಂಶದ ಪಿಚ್​ ವೇಗದ ಬೌಲರ್​ಗಳಿಗೆ ಹೇಳಿ ಮಾಡಿಸಿದಂತಿದೆ. ಬ್ಯಾಟರ್‌ಗಳು ಚೆಂಡಿನೇಟು ತಿನ್ನುವುದು ಖಚಿತ. ಈಗಾಗಲೇ ಅಭ್ಯಾಸದ ವೇಳೆ ಉಭಯ ತಂಡದ ಆಟಗಾರರು ಹಲವು ಏಟು ತಿಂದಿದ್ದಾರೆ.

ಸಂಭಾವ್ಯ ಆಡುವ ಬಳಗ

ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಭ್‌ ಪಂತ್ (ವಿ.ಕೀ), ಧ್ರುವ್‌ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ರವಿಚಂದ್ರನ್ ಅಶ್ವಿನ್, ಜಸ್‌ಪ್ರೀತ್‌ ಬುಮ್ರಾ (ನಾಯಕ), ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ಆಸ್ಟ್ರೇಲಿಯಾ: ನಾಥನ್ ಮೆಕ್‌ಸ್ವೀನಿ, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಮಿಚೆಲ್ ಮಾರ್ಶ್/ಸ್ಕಾಟ್ ಬೋಲ್ಯಾಂಡ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್,ಜೋಶ್ ಹೇಜಲ್‌ವುಡ್, ನಾಥನ್ ಲಿಯಾನ್.