Thursday, 21st November 2024

Road Accident: ಬೆಂಗಳೂರಿನಲ್ಲಿ 4 ವರ್ಷದಲ್ಲಿ ರಸ್ತೆ ಅಪಘಾತ, ಸಾವಿನ ಸಂಖ್ಯೆ ದುಪ್ಪಟ್ಟು; ರಾಜ್ಯಕ್ಕೇ ಪ್ರಥಮ

kalaburagi road accident

ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ಬೆಂಗಳೂರಿನಲ್ಲಿ (Bengaluru news) ರಸ್ತೆ ಅಪಘಾತಗಳು (Road Accident) ಮತ್ತು ಸಾವಿನ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ನೇಮಕಾತಿ) ಮತ್ತು ಸಂಚಾರ ಮತ್ತು ರಸ್ತೆ ಸುರಕ್ಷತೆಯ (Road safety) ಆಯುಕ್ತ ಕೆ.ವಿ.ಶರತ್ ಚಂದ್ರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 2020ರಲ್ಲಿ 1,928 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, 2024ರಲ್ಲಿ ಅಕ್ಟೋಬರ್ 31ರವರೆಗೆ 3,969 ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ. 2020ರಲ್ಲಿ ರಸ್ತೆ ಅಪಘಾತದ ಕಾರಣಕ್ಕೆ 344 ಸಾವುಗಳು ವರದಿಯಾಗಿದ್ದು, 2024ರಲ್ಲಿ ಇದು 723ಕ್ಕೆ ಏರಿದೆ ಎಂದು ಅವರು ಹೇಳಿದ್ದಾರೆ.

ಅತಿವೇಗವೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣ ಎಂದು ಅವರು ಪ್ರತಿಪಾದಿಸಿದ್ದಾರೆ. ಅತಿ ಹೆಚ್ಚು ರಸ್ತೆ ಅಪಘಾತಗಳು, ಗಾಯಗಳು ಮತ್ತು ಸಾವುನೋವುಗಳಲ್ಲಿ ಬೆಂಗಳೂರು ನಗರವು ರಾಜ್ಯದಲ್ಲೆ ಅಗ್ರಸ್ಥಾನದಲ್ಲಿದೆ ಎಂದು ಅವರು ಹೇಳಿದ್ದಾರೆ. ತುಮಕೂರು ನಂತರದ ಸ್ಥಾನದಲ್ಲಿದೆ ಎಂದು ಶರತ್ ಚಂದ್ರ ಹೇಳಿದ್ದಾರೆ.

ರಸ್ತೆ ಅಪಘಾತಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹೆದ್ದಾರಿಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳ ಮೂಲಕ ಸಮಗ್ರ ಸಂಚಾರ ನಿರ್ವಹಣೆ ಪರಿಹಾರಗಳನ್ನು ಪರಿಚಯಿಸಲಾಗಿದೆ. ಆದಾಗ್ಯೂ, ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನಗಳು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ 34,178 ರಸ್ತೆ ಅಪಘಾತಗಳು 2020ರಲ್ಲಿ ವರದಿಯಾಗಿದ್ದು, ಅದರಲ್ಲಿ 9,720 ಮಂದಿ ಸಾವನ್ನಪ್ಪಿದ್ದಾರೆ. 2023ರಲ್ಲಿ 43,440 ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 12,321 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ. ಜಾಗೃತಿ, ಉತ್ತಮ ರಸ್ತೆ ಎಂಜಿನಿಯರಿಂಗ್ ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.

ಬ್ಲೂಮ್‌ಬರ್ಗ್ ಫಿಲಾಂತ್ರಪೀಸ್ ಇನಿಶಿಯೇಟಿವ್ ಫಾರ್ ಗ್ಲೋಬಲ್ ರೋಡ್ ಸೇಫ್ಟಿ ಅಡಿಯಲ್ಲಿ ಜಾಗತಿಕ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ವೈಟಲ್ ಸ್ಟ್ರಾಟಜೀಸ್‌ನ ತಾಂತ್ರಿಕ ಬೆಂಬಲದೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ‘ಮೋಟಾರ್ ಸೈಕಲ್ ಪುನರ್ನಿರ್ಮಾಣ’ ಅಭಿಯಾನಕ್ಕೆ ಮಂಗಳವಾರ ಬೆಂಗಳೂರಿನಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಇದನ್ನೂ ಓದಿ: Road Accident: ಕುಕ್ಕೆ ಸುಬ್ರಹ್ಮಣ್ಯದಿಂದ ಮರಳುತ್ತಿದ್ದ ದಂಪತಿ ಅಪಘಾತದಲ್ಲಿ ಬಲಿ, ಮಕ್ಕಳು ಅನಾಥ