ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಗುರುವಾರ (ನ. 21) ಗೋಧ್ರಾ ರೈಲು ದಹನ ಘಟನೆಯನ್ನು ಆಧರಿಸಿದ ʼದಿ ಸಾಬರಮತಿ ರಿಪೋರ್ಟ್ʼ (The Sabarmati Report) ಸಿನಿಮಾ ವೀಕ್ಷಿಸಿದ ನಂತರ ರಾಜ್ಯದಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.
ವಿಕ್ರಾಂತ್ ಮಾಸ್ಸೆ ಅಭಿನಯದ ʼದಿ ಸಾಬರಮತಿ ರಿಪೋರ್ಟ್ʼ ಚಲನಚಿತ್ರವನ್ನು ಲಖನೌನಲ್ಲಿ ಚಿತ್ರ ತಂಡದೊಂದಿಗೆ ವೀಕ್ಷಿಸಿದ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಿತ್ರಕ್ಕೆ ತೆರಿಗೆ ಮುಕ್ತ (Tax free) ಸೌಲಭ್ಯ ನೀಡುವುದಾಗಿ ಘೋಷಿಸಿದ್ದಾರೆ. ಚಿತ್ರ ವೀಕ್ಷಣೆಯ ವೇಳೆ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಕೂಡ ಉಪಸ್ತಿತರಿದ್ದರು.
#WATCH | The star cast of 'The Sabarmati Report' – Vikrant Massey and Raashii Khanna meets Uttar Pradesh CM Yogi Adityanath, in Lucknow.
— ANI (@ANI) November 21, 2024
The Uttar Pradesh government has declared 'The Sabarmati Report' tax-free in the state. pic.twitter.com/KIXarLwIkE
ಇತ್ತೀಚೆಗಷ್ಟೇ ನಟ ವಿಕ್ರಾಂತ್ ಮಾಸ್ಸೆ ಅವರು ಯೋಗಿ ಆದಿತ್ಯನಾಥ್ ಅವರನ್ನು ಲಖನೌನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದರು.
“ಉತ್ತರ ಪ್ರದೇಶ ಸರ್ಕಾರವು ʼದಿ ಸಾಬರಮತಿ ರಿಪೋರ್ಟ್ʼ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಿದೆ” ಎಂದು ವಿಕ್ರಾಂತ್ ಮಾಸ್ಸೆ ANI ನ್ಯೂಸ್‌ಗೆ ತಿಳಿಸಿದ್ದಾರೆ. “ನಾನು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದೊಂದು ಅತ್ಯಂತ ಪ್ರಮುಖ ಚಿತ್ರವಾಗಿದೆ. ಪ್ರತಿಯೊಬ್ಬರು ಚಿತ್ರಮಂದಿರಕ್ಕೆ ಹೋಗಿ ಈ ಚಿತ್ರವನ್ನು ತಪ್ಪದೇ ವೀಕ್ಷಿಸಬೇಕುʼʼ ಎಂದು ಮನವಿ ಮಾಡಿದ್ದಾರೆ.
ʼದಿ ಸಾಬರಮತಿ ರಿಪೋರ್ಟ್ ʼ ಚಿತ್ರದಲ್ಲಿ ಏನಿದೆ?
ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ, ಕರ ಸೇವಕರಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಗುಜರಾತ್‌ನ ಗೋಧ್ರಾದಲ್ಲಿ 2002ರ ಫೆಬ್ರುವರಿ 27ರಂದು ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ 59ಕ್ಕೂ ಹೆಚ್ಚು ಕರಸೇವಕರು ಮೃತಪಟ್ಟಿದ್ದರು. ಗೋಧ್ರಾದ ಈ ಘಟನೆಯು ಆಗ ಗುಜರಾತ್ ರಾಜ್ಯದಲ್ಲಿ ಕೋಮು ಗಲಭೆಗೆ ಕಾರಣವಾಯಿತಲ್ಲದೇ 1,200ಕ್ಕೂ ಹೆಚ್ಚು ಜನ ಕೊಲ್ಲಲ್ಪಟ್ಟಿದ್ದರು. ಇದೀಗ ʼದಿ ಸಾಬರಮತಿ ರಿಪೋರ್ಟ್ʼ ಚಲನಚಿತ್ರದ ಮೂಲಕ ನೈಜ ಕತೆಯನ್ನು ತಿಳಿಸಲು ಚಿತ್ರ ತಂಡ ಹೊರಟಿದೆ. 22 ವರ್ಷಗಳ ಹಿಂದೆ ನಡೆದ ಹತ್ಯಾಕಾಂಡದ ಸತ್ಯಾಸತ್ಯತೆಯನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ ಎಂದು ಚಿತ್ರ ತಂಡ ತಿಳಿಸಿದೆ.
ಸಿನಿಮಾದ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. “ಸಾಮಾನ್ಯ ಜನರು ನೋಡುವ ರೀತಿಯಲ್ಲಿ ಸತ್ಯ ಹೊರಗೆ ಬರುತ್ತಿರುವುದು ಒಳ್ಳೆಯ ವಿಷಯ. ಕ್ಷಣಿಕ ಕಾಲಕ್ಕೆ ಮಾತ್ರ ಸುಳ್ಳಿನ ನಿರೂಪಣೆ ಇರಬಹುದು. ಕೊನೆಗೂ ಸತ್ಯ ಹೊರಗೆ ಬರುತ್ತದೆ” ಎಂದು ಅವರು ಎಕ್ಸ್ ಮೂಲಕ ತಿಳಿಸಿದ್ದರು. ನರೇಂದ್ರ ಮೋದಿ ಅವರ ಮೆಚ್ಚುಗೆ ಲಭ್ಯವಾದ ಬೆನ್ನಲ್ಲೇ ಬಿಜೆಪಿ ಆಡಳಿತದಲ್ಲಿರುವ ಮಧ್ಯ ಪ್ರದೇಶ ಮತ್ತು ಹರಿಯಾಣದಲ್ಲಿ ತೆರಿಗೆ ವಿನಾಯಿತಿಯನ್ನು ಘೋಷಿಸಲಾಗಿದೆ. ಇದೀಗ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲೂ ʼದಿ ಸಾಬರಮತಿ ರಿಪೋರ್ಟ್ʼ ಚಿತ್ರಕ್ಕೆ ಮುಕ್ತ ತೆರಿಗೆ ವಿನಾಯಿತಿಯನ್ನು ಘೋಷಿಸಲಾಗಿದೆ.
ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಅವರು ಈ ʼದಿ ಸಬರಮತಿ ರಿಪೋರ್ಟ್ʼ ಸಿನಿಮಾದಲ್ಲಿ ನಟಿಸಿದ್ದಾರೆ. ವಿಶೇಷವಾಗಿ ವಿಕ್ರಾಂತ್ ಮಾಸ್ಸಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭಾರೀ ಅದ್ಭುತವಾಗಿ ಪಾತ್ರವನ್ನು ನಿಭಾಯಿಸಿದ್ದಾರೆ. ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ವಿಕಿರ್ ಫಿಲ್ಮ್ಸ್ ಪ್ರೊಡಕ್ಷನ್ ಪ್ರೆಸೆಂಟ್ಸ್ ಮಾಡಿದ್ದು, ಧೀರಜ್ ಸರ್ನಾ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Sabarmati Report: ʻಸಬರಮತಿʼ ರಿಲೀಸ್ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ನಟ ವಿಕ್ರಾಂತ್ ಮಾಸ್ಸಿ