ಪರ್ತ್: ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆಯುವ ಪ್ರಯತ್ನದಲ್ಲಿರುವ ಭಾರತ ಹಾಗೂ ಆಸ್ಟ್ರೇಲಿಯಾ (IND vs AUS) ತಂಡಗಳು ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಸೆಣಸಲು ಸಜ್ಜಾಗುತ್ತಿವೆ. ಇಲ್ಲಿನ ಆಪ್ಟಸ್ ಸ್ಟೇಡಿಯಂನಲ್ಲಿ ಶುಕ್ರವಾರದಿಂದ (ನವೆಂಬರ್ 22) ಆರಂಭವಾಗಲಿರುವ ಮೊದಲನೇ ಪಂದ್ಯದಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ.
ಭಾರತ ತಂಡ ತನ್ನ ಕೊನೆಯ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆಗೆ ಭಾಜನವಾಗಿತ್ತು. ಇದೀಗ ಕಾಂಗರೂ ನಾಡಿನಲ್ಲಿ ಹ್ಯಾಟ್ರಿಕ್ ಟೆಸ್ಟ್ ಸರಣಿ ಗೆಲುವಿಗಾಗಿ ಟೀಮ್ ಇಂಡಿಯಾ ಎದುರು ನೋಡುತ್ತಿದೆ. ಆದರೆ, ಆಸ್ಟ್ರೇಲಿಯಾ ತಂಡ 2014-15ರ ಸಾಲಿನ ಬಳಿಕ ಭಾರತದ ಎದುರು ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಇದೀಗ ಆಸೀಸ್ ತವರು ಮಣ್ಣಿನಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕೆಂಬ ಗುರಿಯನ್ನು ಹೊಂದಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ತವರಿನಲ್ಲಿ ಇತೀಚೆಗೆ ನಡೆದಿದ್ದ ಎರಡು ಟೆಸ್ಟ್ ಸರಣಿಗಳಲ್ಲಿ ಸಿಹಿ-ಕಹಿ ಅನುಭವವನ್ನು ಪಡೆದಿತ್ತು. ಬಾಂಗ್ಲಾದೇಶ ಎದುರು ಟೆಸ್ಟ್ ಸರೆಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದರೆ, ನ್ಯೂಜಿಲೆಂಡ್ ವಿರುದ್ಧ 0-3 ಅಂತರದಲ್ಲಿ ಟೆಸ್ಟ್ ಸರಣಿಯಲ್ಲಿ ವೈಟ್‌ವಾಷ್ ಆಘಾತ ಅನಭವಿಸಿತ್ತು. ಈ ಸರಣಿಯಲ್ಲಿ ಭಾರತ ತಂಡದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇದರ ಪರಿಣಾಮ ಕಿವೀಸ್ ಎದುರು ಸೋಲು ಅನುಭವಿಸಿತ್ತು.
IND vs AUS: ಪರ್ತ್ ಟೆಸ್ಟ್‌ಗೆ ಮಳೆ ಭೀತಿ
ಟೆಸ್ಟ್ ಕ್ರಿಕೆಟ್‌ಗೆ ಮೆಕ್‌ಸ್ವೀನಿ ಪದಾರ್ಪಣೆ ಸಾಧ್ಯತೆ
ಕ್ಯಾಮೆರಾನ್ ಗ್ರೀನ್ ಗಾಯಕ್ಕೆ ತತ್ತಾಗಿದ್ದು, ನೇಥನ್ ಮೆಕ್‌ಸ್ವೀನಿ ಪರ್ತ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ತಂಡಕ್ಕೆ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವನ್ ಸ್ಮಿತ್ ಕೀ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ ಹಾಗೂ ಈ ಇಬ್ಬರೂ ತವರಿನಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಹಾಗೂ ಜಾಶ್ ಹೇಝಲ್‌ವುಡ್ ಕಾಣಿಸಿಕೊಳ್ಳಲಿದ್ದಾರೆ. ಪರ್ತ್‌ನಲ್ಲಿ ಆಸ್ಟ್ರೇಲಿಯಾ ತಂಡ ಅತ್ಯುತ್ತಮ ದಾಖಲೆಯನ್ನು ಹೊಂದಿದೆ.
Only one side will have their hands on it in the end #BorderGavaskarTrophy pic.twitter.com/XCv4S8n2iA
— cricket.com.au (@cricketcomau) November 21, 2024
ಯಶಸ್ವಿ ಜೈಸ್ವಾಲ್-ಕೆಎಲ್ ರಾಹುಲ್ ಓಪನರ್ಸ್?
ಮೊದಲನೇ ಟೆಸ್ಟ್ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಗಾಯಾಳು ಶುಭಮನ್ ಗಿಲ್ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯಶಸ್ವಿ ಜೈಸ್ವಾಲ್ ಅವರ ಜೊತೆ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಓಪನಿಂಗ್ ಸ್ಥಾನಕ್ಕೆ ಅಭಿಮನ್ಯು ಈಶ್ವರನ್ ಕೂಡ ಇದ್ದಾರೆ. ಆದರೆ, ಅನುಭವದ ಆಧಾರದ ಮೇಲೆ ಕನ್ನಡಿಗ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಮತ್ತೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್ ಆಡಬಹುದು. ಸೀಮ್ ಬೌಲಿಂಗ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ನೀಡಬಹುದು.
ಪಿಚ್ ರಿಪೋರ್ಟ್
ಮೊದಲನೇ ಟೆಸ್ಟ್ ಪಂದ್ಯ ನಡೆಯುವ ಪರ್ತ್‌ನ ಆಪ್ಟಸ್ ಸ್ಟೇಡಿಯಂನ ಪಿಚ್ ವೇಗದ ಬೌಲಿಂಗ್‌ಗೆ ನೆರವು ನೀಡಲಿದೆ. ಪಿಚ್ ಮೇಲೆ ಹುಲ್ಲು ಬೆಳೆಸಿದ್ದು, ಫಾಸ್ಟ್ ಬೌಲರ್‌ಗಳ ವೇಗ ಮತ್ತು ಬೌನ್ಸ್‌ಗೆ ನೆರವು ನೀಡಲಿದೆ. ಅದರಲ್ಲಿಯೂ ಹೊಸ ಚೆಂಡಿನಲ್ಲಿ ಬ್ಯಾಟಿಂಗ್ ಕಠಿಣವಾಗಿರಲಿದೆ. ಇದರ ಜೊತೆಗೆ ಚೆಂಡು ಹಳೆಯದಾಗುತ್ತಿದ್ದಂತೆ ಸ್ಪಿನ್ನರ್‌ಗಳು ಕೂಡ ಈ ಪಿಚ್‌ನಲ್ಲಿ ಪ್ರಾಬಲ್ಯ ಮೆರೆಯಬಹುದು. ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಬಹುದು.
IND vs AUS: ಮೂರನೇ ಕ್ರಮಾಂಕಕ್ಕೆ ಪಡಿಕ್ಕಲ್ ಫಿಕ್ಸ್
ಮುಖಾಮುಖಿ ದಾಖಲೆ
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇಲ್ಲಿಯವರೆಗೂ 107 ಟೆಸ್ಟ್ ಪಂದ್ಯಗಳಲ್ಲಿ ಕಾದಾಟ ನಡೆಸಿವೆ. ಇದರಲ್ಲಿ ಭಾರತ ತಂಡ 32 ರಲ್ಲಿ ಗೆಲುವು ಪಡೆದಿದ್ದರೆ, ಆಸ್ಟ್ರೇಲಿಯಾ ತಂಡ 45 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ. ಇದರಲ್ಲಿ 29 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದ್ದು, ಒಂದು ಪಂದ್ಯ ಫಲಿತಾಂಶವಿಲ್ಲದೆ ಮುಗಿದಿದೆ. ಆದರೆ, ಪ್ರಸ್ತುತ ಆಸ್ಟ್ರೇಲಿಯಾ ತಂಡದ ಬೌಲಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದ್ದು, ಪರ್ತ್ ಟೆಸ್ಟ್ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಆಸ್ಟ್ರೇಲಿಯಾ
ಉಸ್ಮಾನ್ ಖವಾಜ, ನೇಥನ್ ಮೆಕ್‌ಸ್ವೀನಿ, ಮಾರ್ನಸ್ ಲಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕೇರಿ (ವಿ.ಕೀ), ನೇಥನ್ ಲಯಾನ್, ಪ್ಯಾಟ್ ಕಮಿನ್ಸ್ (ನಾಯಕ), ಜಾಶ ಹೇಝಲ್‌ವುಡ್, ಮಿಚೆಲ್ ಸ್ಟಾರ್ಕ್
ಭಾರತ
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ), ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ (ನಾಯಕ)
Turn your eyes to the West 👀@LouisDBCameron brings you the #RunwayReport from Perth ahead of the first Test of the Border Gavaskar Trophy @Qantas | #AUSvIND pic.twitter.com/KFt49w8LeS
— cricket.com.au (@cricketcomau) November 21, 2024
ಪಂದ್ಯದ ವಿವರ
ಭಾರತ vs ಆಸ್ಟ್ರೇಲಿಯಾ
ಮೊದಲನೇ ಟೆಸ್ಟ್ ಪಂದ್ಯ
ದಿನಾಂಕ: ನವೆಂಬರ್ 22, 2024
ಸಮಯ: ಬೆಳಗ್ಗೆ 07: 50 ( ಭಾರತೀಯ ಕಾಲಮಾನ)
ಸ್ಥಳ: ಆಪ್ಟಸ್ ಸ್ಟೇಡಿಯಂ, ಪರ್ತ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಡಿಸ್ನಿ ಹಾಟ್‌ಸ್ಟಾರ್