ಪಣಜಿ: ಗೋವಾದಲ್ಲಿ ನಡೆದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (Goa Film Festival) ಸಂದರ್ಭ ಪ್ರಸಾರ ಭಾರತಿ (Prasar Bharati) ತನ್ನ OTT ಪ್ಲಾಟ್ಫಾರ್ಮ್ ‘ವೇವ್ಸ್’ (Waves OTT) ಅನ್ನು ಅನಾವರಣಗೊಳಿಸಿದೆ. ಇದರೊಂದಿಗೆ ಭಾರತದ ಜನಪ್ರಿಯ ಸರ್ಕಾರಿ ಪ್ರಸಾರ ಸಂಸ್ಥೆ ದೂರದರ್ಶನ ಒಟಿಟಿ ವ್ಯಾಪ್ತಿಗೆ ಕಾಲಿಟ್ಟಿದೆ.
ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ಗುರುವಾರ ಗೋವಾದಲ್ಲಿ ನಡೆದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ವಾಹಿನಿ ಪ್ರಸಾರ ಭಾರತಿಯ OTT ಪ್ಲಾಟ್ಫಾರ್ಮ್ ‘ವೇವ್ಸ್’ ಅನ್ನು ಅನಾವರಣ ಮಾಡಿದರು. ರಾಮಾಯಣ, ಮಹಾಭಾರತದಂತಹ ಕ್ಲಾಸಿಕ್ ಕಾರ್ಯಕ್ರಮಗಳ ಜೊತೆಗೆ ಸುದ್ದಿ, ಸಾಕ್ಷ್ಯಚಿತ್ರಗಳು ಮತ್ತು ಹಲವಾರು ಭಾಷೆಗಳ ಕಾರ್ಯಕ್ರಮಗಳನ್ನು ಇದು ಒಳಗೊಂಡಿದೆ.
ಪಿಐಬಿ ಹೇಳಿಕೆಯ ಪ್ರಕಾರ, ಡಿಡಿಯಲ್ಲಿ ಪ್ರಸಾರವಾದ ಕ್ಲಾಸಿಕ್ ಕಂಟೆಂಟ್ಗಳು, ಸಮಕಾಲೀನ ಕಾರ್ಯಕ್ರಗಳ ಸಮೃದ್ಧ ಮಿಶ್ರಣವನ್ನು ಒಟಿಟಿ ಒಳಗೊಂಡಿರಲಿದೆ. ಆಧುನಿಕ ಡಿಜಿಟಲ್ ಟ್ರೆಂಡ್ಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಡಿಡಿಯ ಹಳೆಯ ಸೀರಿಯಲ್ಗಳನ್ನು ಪುನರುಜ್ಜೀವನಗೊಳಿಸುವ ಗುರಿಯನ್ನೂ ಇದು ಹೊಂದಿದೆ. ವೇವ್ಸ್ ಒಟಿಟಿಯಲ್ಲಿ ಡಿಡಿಯಲ್ಲಿ ಪ್ರಸಾರವಾಗಿ ದಾಖಲೆ ಬರೆದಿದ್ದ ರಾಮಾಯಣ, ಮಹಾಭಾರತ, ಶಕ್ತಿಮಾನ್ ಹಾಗೂ ಹಮ್ ಲೋಗ್ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.
ಅದರೊಂದಿಗೆ ನ್ಯೂಸ್, ಡಾಕ್ಯುಮೆಂಟರಿಗಳು ಹಾಗೂ ಸ್ಥಳೀಯ ವಿಚಾರಗಳನ್ನೂ ಒಟಿಟಿ ನೀಡಲಿದೆ. ಹಿಂದಿ, ಇಂಗ್ಲಿಷ್, ಬೆಂಗಾಲಿ, ಮರಾಠಿ, ಕನ್ನಡ, ಮಲಯಾಳಂ, ತೆಲುಗು, ತಮಿಳು, ಗುಜರಾತಿ, ಪಂಜಾಬಿ, ಅಸ್ಸಾಮಿ ಮುಂತಾದ 12ಕ್ಕೂ ಹೆಚ್ಚು ಭಾಷೆಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಒಳಗೊಂಡ ಕಥೆಗಳೊಂದಿಗೆ ‘ವೇವ್ಸ್’ OTT ಆಗಿ ಈ ವಲಯಕ್ಕೆ ಕಾಲಿಟ್ಟಿದೆ.
10 ಜಾನರ್ಗಳ ಇನ್ಫೋಎಂಟರ್ಟೇನ್ಮೆಂಟ್, ಅದರೊಂದಿಗೆ ವಿಡಿಯೋ ಆನ್ ಡಿಮಾಂಡ್, ಫ್ರೀ ಟು ಪ್ಲೇ ಗೇಮಿಂಗ್, ರೇಡಿಯೋ ಸ್ಟ್ರೀಮಿಂಗ್, ಲೈವ್ ಟಿವಿ ಸ್ಟ್ರೀಮಿಂಗ್, 65 ಲೈವ್ ಚಾನೆಲ್ಗಳು, ಹಲವಾರು ಆಪ್ ಇಂಟಿಗ್ರೇಷನ್ಗಳು, ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮೂಲಕ ಆನ್ಲೈನ್ ಶಾಪಿಂಗ್ ಬೆಂಬಲಿತ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಕೂಡ ಇದರಲ್ಲಿ ಇರಲಿದೆ.
ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ಟಿಐಐ), ಅನ್ನಪೂರ್ಣ ಮತ್ತು ಎಎಎಫ್ಟಿಯಂತಹ ಚಲನಚಿತ್ರ ಮತ್ತು ಮಾಧ್ಯಮ ಕಾಲೇಜುಗಳ ವಿದ್ಯಾರ್ಥಿ ಪದವಿ ಚಲನಚಿತ್ರಗಳಿಗೆ ಇದು ತನ್ನ ಪೋರ್ಟಲ್ ಅನ್ನು ತೆರೆದಿದೆ. ವೇದಿಕೆಯಲ್ಲಿ ಅಯೋಧ್ಯೆಯಿಂದ ಪ್ರಭು ಶ್ರೀರಾಮ್ ಲಲ್ಲಾ ಆರತಿ ಲೈವ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಮನ್ ಕಿ ಬಾತ್ನಂತಹ ಲೈವ್ ಈವೆಂಟ್ಗಳಿ ಇರಲಿವೆ. ಆನಿಮೇಷನ್ ಕಾರ್ಯಕ್ರಮಗಳಾದ ಡಾಗ್ಗಿ ಅಡ್ವೆಂಚರ್, ಛೋಟಾ ಭೀಮ್, ತೆನಾಲಿರಾಮ್, ಅಕ್ಬರ್ ಬೀರ್ಬಲ್ ಮತ್ತು ಕೃಷ್ಣ ಜಂಪ್, ಫ್ರೂಟ್ ಚೆಫ್, ರಾಮ್ ದಿ ಯೋಧ, ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಂತಹ ಆಟಗಳನ್ನು ಸಹ ಹೊಂದಿದೆ.
ಇದನ್ನೂ ಓದಿ: ದೂರದರ್ಶನಕ್ಕೆ ಹೊಸ ಕೇಸರಿ ಬಣ್ಣದ ಲೋಗೋ: ವ್ಯಾಪಕ ಟೀಕೆ