Monday, 25th November 2024

Bengaluru News: ಭಾರತೀಯ ಮಾಧ್ಯಮದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ; ಡಾ. ಕೆ.ಪಿ. ಅಶ್ವಿನಿ ವಿಷಾದ

Bengaluru News

ಬೆಂಗಳೂರು: ಮಾಧ್ಯಮಗಳಲ್ಲಿ ಮಹಿಳೆಯರ ಪ್ರಾತಿನಿಧ್ಯದ ಕೊರತೆ ಇನ್ನೂ ನೀಗಿಲ್ಲ ಎಂದು ವಿಶ್ವಸಂಸ್ಥೆಯ ವರ್ಣಭೇದ ನೀತಿ ಸದಸ್ಯೆ ಹಾಗೂ ಮಾನವ ಹಕ್ಕುಗಳ ತಜ್ಞೆ ಡಾ.ಕೆ.ಪಿ. ಅಶ್ವಿನಿ ಹೇಳಿದರು. ಕರ್ನಾಟಕ ಪತ್ರಕರ್ತೆಯರ ಸಂಘ ಗುರುವಾರ ನಗರದಲ್ಲಿ (Bengaluru News) ಆಯೋಜಿಸಿದ್ದ ನಾಗಮಣಿ ಎಸ್. ರಾವ್ ದತ್ತಿ ಉಪನ್ಯಾಸ ಹಾಗೂ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ‘ಮಾಧ್ಯಮದಲ್ಲಿ ಮಹಿಳಾ ಪ್ರಾಮುಖ್ಯತೆ ಮತ್ತು ಜವಾಬ್ದಾರಿ’ ವಿಷಯ ಕುರಿತು ಅವರು ಮಾತನಾಡಿದರು.

ಕಳೆದ ಮೂರು ದಶಕಗಳಲ್ಲಿ ಮಾಧ್ಯಮರಂಗ ವೇಗವಾಗಿ ಬೆಳೆದಿದೆ. ಆದರೆ, ಜಾಗತಿಕ ಮಟ್ಟದಲ್ಲಿ ಹೋಲಿಸಿದರೆ ಭಾರತೀಯ ಮಾಧ್ಯಮಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೃಪ್ತಿಕರವಾಗಿಲ್ಲ. ಅದರಲ್ಲೂ ಕೋವಿಡ್ ನಂತರದ ದಿನಗಳಲ್ಲಿ ಪತ್ರಕರ್ತೆಯರು ತಮ್ಮ ವೈಯಕ್ತಿಕ ಬದುಕು ಹಾಗೂ ವೃತ್ತಿ ಎರಡನ್ನೂ ನಿಭಾಯಿಸಲಾಗದೇ ಹೆಚ್ಚಿನ ಸಂಖ್ಯೆಯಲ್ಲಿ ವೃತ್ತಿಯನ್ನು ತೊರೆದಿರುವುದು ವಿಷಾದನೀಯ ಎಂದರು.

ಈ ಸುದ್ದಿಯನ್ನೂ ಓದಿ | Vishwavani Global Achievers Award: ಕರುನಾಡ ಸಾಧಕರಿಗೆ ಜಪಾನ್‌ ರಾಜಧಾನಿಯಲ್ಲಿ ನಾಳೆ ಸನ್ಮಾನ!

ಪತ್ರಕರ್ತೆಯರ ಮೇಲೆ ನಿರಂತರವಾಗಿ ಆನ್‌ಲೈನ್‌ನಲ್ಲಿ ದಾಳಿ ನಡೆಸಲಾಗುತ್ತಿದೆ. ಈ ಬಗ್ಗೆ ನಾನು ನಡೆಸಿದ ಅಧ್ಯಯನದಲ್ಲಿ ಶೇ. 60 ರಿಂದ 70 ರಷ್ಟು ಪತ್ರಕರ್ತೆಯರು ತಮ್ಮ ವರದಿ, ಲೇಖನಗಳ ಕಾರಣಕ್ಕಾಗಿ ಆನ್‌ಲೈನ್‌ನಲ್ಲಿ ದಾಳಿಗೊಳಗಾಗಿರುವ ಅಂಶ ಬಹಿರಂಗವಾಗಿದೆ. ಈಚೆಗಷ್ಟೇ ಡೇಟಿಂಗ್ ಆ್ಯಪ್ ಬಗ್ಗೆ ಬರೆದ ತಳಸಮುದಾಯದ ಪತ್ರಕರ್ತೆಯೊಬ್ಬರ ಮೇಲೂ ನಿರಂತರ ದಾಳಿ ನಡೆಸಲಾಗಿತ್ತು. ಆದರೆ, ಆಕೆ ಕಾರ್ಯ ನಿರ್ವಹಿಸುವ ಮಾಧ್ಯಮ ಸಂಸ್ಥೆ ಟ್ರೋಲ್ ಮಾಡುವವರಿಗೆ ಕಾನೂನು ಸಮರದ ಎಚ್ಚರಿಕೆ ನೀಡಿದ ಮೇಲಷ್ಟೇ ಅದು ನಿಂತಿತು. ಈ ರೀತಿಯ ಬೆಂಬಲದ ವಾತಾವರಣ ಎಲ್ಲ ಮಾಧ್ಯಮ ಸಂಸ್ಥೆಗಳಲ್ಲೂ ಇರಬೇಕು ಎಂದು ಅವರು ಆಶಿಸಿದರು.

ಪರ್ತಕರ್ತೆಯರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ವಿವಿಧ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತೆಯರಾದ ಆರ್. ಪೂರ್ಣಿಮಾ, ಎಚ್.ಎಲ್. ಸೀತಾದೇವಿ, ಎಚ್.ಎನ್. ಆರತಿ, ಶಾಂತಕುಮಾರಿ ಕೆ., ಭಾರತಿ ಹೆಗಡೆ, ರಶ್ಮಿ ಎಸ್., ಮಂಜುಳಾ ಕಿರುಗಾವಲು, ಮಂಜುಳಾ ಹುಲಿಕುಂಟೆ. ಡಾ. ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತ ವಿ.ಟಿ. ರಾಜಶೇಖರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ದತ್ತಿನಿಧಿ ಸ್ಥಾಪಕಿ ನಾಗಮಣಿ ಎಸ್.ರಾವ್, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯುದ್ಧಭೂಮಿಯಲ್ಲಿ ಪತ್ರಕರ್ತೆಯರು

ಪ್ಯಾಲಿಸ್ಟೀನ್‌ನಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತೆಯರ ಪಾಡು ಕಷ್ಟಕರವಾದದ್ದು. ಗಾಜಾ ಸಂಘರ್ಷದಲ್ಲಿ ಸುಮಾರು 13 ಪತ್ರಕರ್ತೆಯರ ಹತ್ಯೆಯಾಗಿದೆ. ಅಲ್ಲಿ ಮಾಧ್ಯಮಗಳನ್ನು ಬ್ಯಾನ್ ಮಾಡಲಾಗಿದೆ. ಅಲ್ ಜಜೀರಾ ಸುದ್ದಿಸಂಸ್ಥೆಯನ್ನು ಕೇವಲ ಹತ್ತುನಿಮಿಷದಲ್ಲಿ ಬಂದ್ ಮಾಡಿಸಲಾಯಿತು. ಆದರೆ, ಅಲ್ಲಿನ ಪತ್ರಕರ್ತೆಯರು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಬಿತ್ತರಿಸತೊಡಗಿದ್ದಾರೆ ಎಂದು ಡಾ. ಕೆ.ಪಿ. ಅಶ್ವಿನಿ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Heart Transplant Surgery: ಕೇವಲ 14 ತಿಂಗಳ ಕಂದಮ್ಮನಿಗೆ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ!

ಪಕ್ಕದಲ್ಲೇ ಬಾಂಬ್, ಷೆಲ್ಗಳು ಸಿಡಿಯುತ್ತಿದ್ದರೂ ಧೃತಿಗೆಡದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿ ಕನಿಷ್ಠ ಶೌಚಾಲಯವೂ ಇಲ್ಲ. ಆ ಪತ್ರಕರ್ತೆಯರಿಗೆ ಪುಟ್ಟ ಮಕ್ಕಳಿದ್ದಾರೆ. ಆದರೂ ಯುದ್ಧಭೂಮಿಯಲ್ಲಿ ಅವರು ವರದಿಗಾರಿಕೆ ಬಿಟ್ಟಿಲ್ಲ. ಜಗತ್ತಿನ ದೊಡ್ಡ ಮಾಧ್ಯಮ ಸಂಸ್ಥೆಗಳು ತಮ್ಮ ಸುದ್ದಿಯ ಮೂಲಕ್ಕಾಗಿ ಈ ಪತ್ರಕರ್ತೆಯರನ್ನೇ ನೆಚ್ಚಿಕೊಂಡಿವೆ. ಇದು ಹೆಮ್ಮೆಯ ಸಂಗತಿ ಎಂದು ಅವರು ತಿಳಿಸಿದರು.