ಆಲಪ್ಪುಳ: ಸಾಕಿದ ಮೊಲ (Rabbit bite) ಕಚ್ಚಿತೆಂದು ರೇಬಿಸ್ ಲಸಿಕೆ (Rabies vaccine) ಪಡೆದ ಮಹಿಳೆಯೊಬ್ಬರು ಲಸಿಕೆಯ ಶಂಕಿತ ಅಡ್ಡಪರಿಣಾಮದಿಂದ ಕೇರಳದ ಆಲಪ್ಪುಳದಲ್ಲಿ (Rabies death) ಸಾವನ್ನಪ್ಪಿದ್ದಾರೆ. ಆಲಪ್ಪುಳ ತಕಳಿ ಕಲ್ಲೆಪುರದ ಸೋಮನ್ ಅವರ ಪತ್ನಿ ಶಾಂತಮ್ಮ (63) ಮೃತಪಟ್ಟವರು.
ತಮ್ಮ ಮನೆಯಲ್ಲಿ ಸಾಕಿದ್ದ ಮೊಲ ಕಚ್ಚಿದ್ದರಿಂದ ಶಾಂತಮ್ಮ ರೇಬೀಸ್ ಲಸಿಕೆ ಹಾಕಿಸಿಕೊಂಡಿದ್ದರು. ಇದಾದ ಬಳಿಕ ಅಸ್ವಸ್ಥರಾಗಿದ್ದರು. ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಲಸಿಕೆ ಪಡೆದ ಬಳಿಕ ಅಸ್ವಸ್ಥರಾದ ವೃದ್ಧೆ ಆಲಪ್ಪುಳ ವೈದ್ಯಕೀಯ ಕಾಲೇಜಿನ ತೀವ್ರ ನಿಗಾ ಘಟಕದಲ್ಲಿ ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದರು. ಇವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೂ ದಾಖಲಿಸಲಾಗಿತ್ತು. ಇಲ್ಲಿಂದ ಬಿಡುಗಡೆಯಾಗಿ ಮನೆಗೆ ಕರೆತರಲಾಗಿತ್ತು.
ಶಾಂತಮ್ಮ ಅವರ ಚಿಕಿತ್ಸೆಗಾಗಿ ಮನೆಯವರು ಆಸ್ಪತ್ರೆಯಲ್ಲಿದ್ದಾಗ ಮನೆಯಲ್ಲಿ ಇಲಿ ಹಿಡಿಯಲು ಇಲಿ ವಿಷ ಹಚ್ಚಿದ್ದ ತೆಂಗಿನಕಾಯಿ ತಿಂದು ಇವರ ಮೊಮ್ಮಗಳು ಸಾವನ್ನಪ್ಪಿದ್ದ ಘಟನೆಯೂ ನಡೆದಿತ್ತು. ಒಂದೇ ವಾರದ ಅಂತರದಲ್ಲಿ ಮನೆಯಲ್ಲಿ ಎರಡು ಸಾವುಗಳನ್ನು ಕಂಡು ಕುಟುಂಬ ಆಘಾತಗೊಂಡಿದೆ.
ಅಕ್ಟೋಬರ್ 21ರಂದು ಆಲಪ್ಪುಳ ವೈದ್ಯಕೀಯ ಕಾಲೇಜಿನಲ್ಲಿ ಶಾಂತಮ್ಮ ರೇಬಿಸ್ ವಿರೋಧಿ ಲಸಿಕೆ ಹಾಕಿಸಿಕೊಂಡಿದ್ದರು. ಲಸಿಕೆ ಪಡೆದ ಬಳಿಕವೇ ಅವರ ಆರೋಗ್ಯ ಹದಗೆಟ್ಟಿತ್ತು. ಲಸಿಕೆ ಪಡೆದ ಬಳಿಕ ಶಾಂತಮ್ಮ ಅವರ ದೇಹ ಸಂಪೂರ್ಣವಾಗಿ ನಿಶ್ಚಲವಾಗಿತ್ತು ಮತ್ತು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.
ಪರೀಕ್ಷಾ ಡೋಸ್ನಲ್ಲೇ ಅಲರ್ಜಿ ಕಾಣಿಸಿಕೊಂಡಿದ್ದರೂ ಮೂರು ಡೋಸ್ ಲಸಿಕೆಗಳನ್ನು ನೀಡಲಾಗಿತ್ತು. ಮೂರನೇ ಬಾರಿಗೆ ಲಸಿಕೆ ಪಡೆದ ಬಳಿಕ ಶಾಂತಮ್ಮ ಕುಸಿದು ಬಿದ್ದರು ಮತ್ತು ಅವರಲ್ಲಿ ಯಾವ ಚಲನೆಯೂ ಇದ್ದಿರಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಬಳಿಕ ವೆಂಟಿಲೇಟರ್ನಲ್ಲಿದ್ದ ಶಾಂತಮ್ಮ ಅವರನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು. ಲಸಿಕೆ ಪಡೆದ ಬಳಿಕ ಉಂಟಾಗುವ ಅಪರೂಪದ ಅಡ್ಡಪರಿಣಾಮದಿಂದಾಗಿ ಈ ಸ್ಥಿತಿ ಉಂಟಾಗಿರಬಹುದು ಎಂದು ವೈದ್ಯಕೀಯ ಕಾಲೇಜು ಅಧಿಕಾರಿಗಳು ವಿವರಿಸಿದ್ದರು.
ಪರೀಕ್ಷಾ ಡೋಸ್ನಲ್ಲಿ ಅಲರ್ಜಿ ಕಾಣಿಸಿಕೊಂಡಾಗಲೇ ಔಷಧ ನೀಡಲಾಗಿತ್ತು. ಆದರೆ ಲಸಿಕೆ ಪಡೆದಾಗ ಗಂಭೀರ ಸ್ಥಿತಿ ಉಂಟಾಯಿತು. ಕೆಲವೇ ಜನರಲ್ಲಿ ಈ ರೀತಿಯ ಘಟನೆಗಳು ವರದಿಯಾಗಿವೆ ಎಂದು ವೈದ್ಯಕೀಯ ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ. ಶಾಂತಮ್ಮ ಅವರ ಮಗಳು ಸೋನಿಯಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: World Rabies Day 2024: ಮಾರಕ ರೇಬೀಸ್ನಿಂದ ಪಾರಾಗಲು ಏನು ಮಾಡಬೇಕು?