ಚಿಮ್ಮುಹಲಗೆ
ರವೀ ಸಜಂಗದ್ದೆ
ಅದು 2024 ನವೆಂಬರ್ 16ರ ಮುಸ್ಸಂಜೆಯ ಸಮಯ. ಈಶಾನ್ಯ ಒಡಿಶಾದ ಕರಾವಳಿಯ ಸಮೀಪದ, ಭಾರತದ ರಕ್ಷಣಾ ವಲಯದ ಕ್ಷಿಪಣಿ
ಅಭಿವೃದ್ಧಿ ಮತ್ತು ಪರೀಕ್ಷಾ ಕೇಂದ್ರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನ ಲಾಂಚಿಂಗ್ ಕಾಂಪ್ಲೆಕ್ಸ್-4ರಲ್ಲಿರುವ ’land based mobile launcher’ ನಿಂದ ಭಾರತವು ತನ್ನ ಚೊಚ್ಚಲ ಹೈಪರ್ಸಾನಿಕ್ ಕ್ಷಿಪಣಿಯ ಪ್ರಯೋಗಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಪೂರೈಸಿದ ಸುಸಮಯವದು.
ಹೈದರಾಬಾದ್ನಲ್ಲಿನ ಡಾ.ಎಪಿಜೆ ಅಬ್ದುಲ್ ಕಲಾಂ ಮಿಸೈಲ್ ಕಾಂಪ್ಲೆಕ್ಸ್ನಲ್ಲಿರುವ ಪ್ರಯೋಗಾಲಯ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಪ್ರಯೋಗಾಲಯ ಮತ್ತು ಉದ್ಯಮ ಪಾಲುದಾರರು ಸೇರಿ ಅಭಿವೃದ್ಧಿಪಡಿಸಿ, ದೇಶದ ರಕ್ಷಣಾ ವಲಯಕ್ಕೆ ನೀಡಿದ
ಮತ್ತೊಂದು ವಿಶಿಷ್ಟ ಕೊಡುಗೆ ಈ ಹೈಪರ್ಸಾನಿಕ್ ಕ್ಷಿಪಣಿ. ಇದರ ಕುರಿತಾದ ಒಂದಷ್ಟು ಕುತೂಹಲಕರ ಮಾಹಿತಿ ಮತ್ತು ಅವಲೋಕನ ಇಲ್ಲಿದೆ: ಉಡಾವಣಾ ಸ್ಥಳದಿಂದ ೧,೫೦೦ ಕಿ.ಮೀ.ವರೆಗೆ ಸಾಗಬಲ್ಲ ಸಾಮರ್ಥ್ಯವನ್ನು ಈ ಹೈಪರ್ಸಾನಿಕ್ ಕ್ಷಿಪಣಿ ಹೊಂದಿದೆ. ಅಂದರೆ, ಚೀನಾಕ್ಕೆ ಹೊಂದಿಕೊಂಡಂತಿರುವ ಅರುಣಾಚಲ ಪ್ರದೇಶದ ‘ತವಾಂಗ್ ಏರ್ಬೇಸ್’ನಿಂದ ಈ ಕ್ಷಿಪಣಿಯನ್ನು ಉಡಾಯಿಸಿದರೆ, ಚೀನಾದ ಮಧ್ಯಭಾಗ ದಲ್ಲಿರುವ ಹೈಬೈ, ಉವೈ, ಲಾಂಝೋವ್, ತುರ್ಪಾನ್, ಅಕ್ಸು ನಗರಗಳವರೆಗೆ ಅದು ತಲುಪಬಲ್ಲದು. ಅಂದರೆ, ಚೀನಾದ ಅರ್ಧಭಾಗದವರೆಗೆ ತಲುಪುವ ಬೃಹತ್ ಸಾಮರ್ಥ್ಯ!
ಇನ್ನು, ಗುಜರಾತ್, ರಾಜಸ್ಥಾನ ಮತ್ತು ಪಂಜಾಬ್ನ ಏರ್ಬೇಸ್ ಗಳಿಂದ ಈ ಕ್ಷಿಪಣಿಯನ್ನು ಉಡಾಯಿಸಿದರೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಕಟ್ಟಕಡೆಯ ಭೂಪ್ರದೇಶದವರೆಗೂ ನುಗ್ಗಿ ಸಿಡಿಯಬಲ್ಲ ಸಾಮರ್ಥ್ಯ ಇದಕ್ಕಿದೆ! ಶಬ್ದವೇಗಕ್ಕಿಂತ ಐದು ಪಟ್ಟು ಹೆಚ್ಚು ವೇಗವಾಗಿ ಮುನ್ನುಗ್ಗುವ ಕ್ಷಿಪಣಿಗೆ ಹೈಪರ್ಸಾನಿಕ್ ಮಿಸೈಲ್ ಅಥವಾ ‘ಮ್ಯಾಚ್-೫’ ಎಂದು ಹೆಸರು. ಒಂದು ಸೆಕೆಂಡಿಗೆ ೧.೭೦ ಕಿ.ಮೀ. ವೇಗದಲ್ಲಿ, ಅಂದರೆ ಗಂಟೆಗೆ ೬,೧೭೪ ಕಿ.ಮೀ. ವೇಗದಲ್ಲಿ ಇದು ಚಲಿಸುತ್ತದೆ. ಈ ಅಂದಾಜಿನಲ್ಲಿ, ತನ್ನ ಸಾಮರ್ಥ್ಯವಾದ ೧,೫೦೦ ಕಿ.ಮೀ. ಗುರಿಯನ್ನು ತಲುಪಲು ಅದಕ್ಕೆ ತಗಲುವ ಸಮಯ ಹದಿನಾಲ್ಕು ಚಿಲ್ಲರೆ ನಿಮಿಷಗಳು. ಚೀನಾದ ಮಧ್ಯಭಾಗ ಅಥವಾ ಪಾಕಿಸ್ತಾನ/ಅಫ್ಘಾನಿಸ್ತಾನದ ತುದಿಯನ್ನು ತಲುಪಲು ಈ ಕ್ಷಿಪಣಿಗೆ ಹಿಡಿಯುವ ಸಮಯ, ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣದ ೧೦ನೇ ಪ್ಲಾಟ್ ಫಾರ್ಮ್ನಲ್ಲಿ ರೈಲು ಇಳಿದು, ಕೆಂಪೇಗೌಡ ಬಸ್ ನಿಲ್ದಾಣದ ೧೦ನೇ ಪ್ಲಾಟ್ ಫಾರ್ಮ್ಗೆ ನಡೆದು ಬರುವುದಕ್ಕೆ ಹಿಡಿಯುವಷ್ಟೇ ಹೊತ್ತು! Bigbasket, Zepto ಮುಂತಾದ Online Grocery Delivery App ಗಳಲ್ಲಿ ಆರ್ಡರ್ ಮಾಡಿದ ವಸ್ತುಗಳು ಮನೆಗೆ ತಲುಪುವುದರೊಳಗೆ ಶತ್ರುದೇಶದ ಮೇಲಿನ ಈ ಹೈಪರ್
ಸಾನಿಕ್ ಕ್ಷಿಪಣಿಯ ದಾಳಿ ಪೂರ್ಣಗೊಂಡಿರುತ್ತದೆ. ಏಕ್ ದಮ್ ಫಟಾಫಟ್!
ಈ ಯಶಸ್ಸಿನಿಂದಾಗಿ ಆಧುನಿಕ ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯ ಮೇಲ್ದರ್ಜೆಗೇರಿದೆ ಮತ್ತು ಪ್ರಪಂಚದಲ್ಲಿ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಹೊಂದಿರುವ ಅಮೆರಿಕ, ರಷ್ಯಾ, ಚೀನಾದಂಥ ರಾಷ್ಟ್ರಗಳ ಸಾಲಿಗೆ ಈಗ ಭಾರತವೂ ಸೇರಿದಂತಾಗಿದೆ. ತೀವ್ರ ವೇಗ, ಕುಶಲತೆ ಮತ್ತು ಕಡಿಮೆ ಎತ್ತರದಲ್ಲಿ ಹಾರುವ ಸಾಮರ್ಥ್ಯವಿರುವ ಇಂಥ ಕ್ಷಿಪಣಿಗಳನ್ನು ಪತ್ತೆಹಚ್ಚಲು, ಪ್ರತಿಬಂಧಿಸಲು ಮತ್ತು ದಾಳಿಯಿಂದ ಹಿಮ್ಮೆಟ್ಟಿಸಿ ನಾಶಗೊಳಿಸಲು ಎದುರಾಳಿ ದೇಶಗಳಿಗೆ ಕಷ್ಟ. ಒಂದೊಮ್ಮೆ ಹಾಗೆ ಈ ಕ್ಷಿಪಣಿಯ ಪತ್ತೆಯಾದರೂ ಅದು ಒಂದಷ್ಟು ತಡವಾಗಿ ಆಗುತ್ತದೆ ಎನ್ನುವುದು ವರದಿ. ಯುದ್ಧದಲ್ಲಿ, ಕ್ಷಿಪಣಿ ದಾಳಿಯ ಸಂದರ್ಭದಲ್ಲಿ ಶತ್ರುವಿನ ನಡೆ ಮತ್ತು ಆಕ್ರಮಣ ತಡವಾದಾಗ, ಪತ್ತೆಯಾಗುವುದರ ಮತ್ತು
ಪತ್ತೆಯಾಗದೇ ಇರುವುದರ ಫಲಿತಾಂಶ ಒಂದೇ- ಅದುವೇ ಅಪಾರ ಹಾನಿ.
ಗಾಳಿಯನ್ನು ಸೀಳಿಕೊಂಡು ಅತಿವೇಗವಾಗಿ ಚಲಿಸುವ ಈ ಕ್ಷಿಪಣಿ, ಭಯಂಕರ ಬಿಸಿಯನ್ನು ಉತ್ಪತ್ತಿ ಮಾಡುತ್ತದೆ. ಹೀಗೆ ಬಿಸಿಯಾದ ಗಾಳಿಯನ್ನು ಪರಿಶೀಲಿಸಿ, ಹೈಪರ್ಸಾನಿಕ್ ದಾಳಿ ನಡೆಯುತ್ತಿದೆ ಎಂದು ಗುರುತಿಸಿ-ದಾಖಲಿಸಿ, ಪ್ರತ್ಯುತ್ತರ ಕೊಡಲು ಸೂಚಿಸುವ ಯಾವುದೇ ತಂತ್ರಜ್ಞಾನವು
ಅಽಕೃತವಾಗಿ ಯಾವ ದೇಶದ ರಕ್ಷಣಾ ವ್ಯವಸ್ಥೆಯಲ್ಲೂ ಇಲ್ಲ! ಹಾಗಾಗಿ, ಈ ಕ್ಷಿಪಣಿಯ ಗುರಿ ಹಾಗೂ ದಾಳಿ ಅತ್ಯಂತ ನಿಖರ ಮತ್ತು ಮಾಡುವ ಹಾನಿಯು ನಿರೀಕ್ಷಿಸಲಾಗದಷ್ಟು. ಸಾಂಪ್ರದಾಯಿಕ ಮತ್ತು ಆಧುನಿಕ ಸಿಡಿತಲೆಗಳನ್ನು ಹೊತ್ತೊಯ್ಯುವುದರ ಜತೆಗೆ, ಹಾರಾಟದ ವೇಳೆಯಲ್ಲಿ ಆಜ್ಞಾನುಸಾರ, ತ್ವರಿತವಾಗಿ ಮತ್ತು ನಿಖರವಾಗಿ ಪಥ ಬದಲಿಸುವ ಸಾಮರ್ಥ್ಯ ಈ ಹೈಪರ್ಸಾನಿಕ್ ಕ್ಷಿಪಣಿಗಿದೆ. ಭೂಸೇನೆ-ವಾಯುಪಡೆ-ನೌಕಾದಳ ಹೀಗೆ ಮೂರೂ ಸೇನಾಪಡೆಗಳಿಗೆ ಅನುಕೂಲವಾಗುವಂತೆ ಈ ಕ್ಷಿಪಣಿಯನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸ ಲಾಗಿದೆಯಂತೆ! ಈ ಹೈಪರ್ಸಾನಿಕ್ ಕ್ಷಿಪಣಿಗಳಲ್ಲಿ ‘ಹೈಪರ್ಸಾನಿಕ್ ಗ್ಲೈಡ್ ವೆಹಿಕಲ್ಸ್’ (HGVs) ಮತ್ತು ‘ಹೈಪರ್ಸಾನಿಕ್ ಕ್ರೂಸ್ ಮಿಸೈಲ್ಸ್’ (HCVs) ಎಂಬುದಾಗಿ ಎರಡು ವಿಧ. ವನ್ನು ಕ್ಷಿಪಣಿ ಉಡಾವಣಾ ಸಾಧನ ಅಥವಾ ವಾಹಕದ ಸಹಾಯದಿಂದ, ಏರ್ಬೇಸ್/ಯುದ್ಧನೌಕೆಯಿಂದ ಉಡಾಯಿಸಲಾಗುತ್ತದೆ. ನಿಗದಿತ ಎತ್ತರ ತಲುಪಿದ ನಂತರ ಕ್ಷಿಪಣಿಯು ತನ್ನ ಗುರಿಯತ್ತ ಮುನ್ನುಗ್ಗುತ್ತದೆ.
ಎದುರಾಳಿಯ ಪ್ರತಿರೋಧ ಮತ್ತು ಪ್ರತಿದಾಳಿಯನ್ನು ತಪ್ಪಿಸಲು ಈ ಕ್ಷಿಪಣಿಯು ಕುಶಲತೆಯಿಂದ ಪಥ ಬದಲಿಸುತ್ತಾ ಚಲಿಸುತ್ತದೆ. ಇಷ್ಟೆಲ್ಲಾ ವೈಶಿಷ್ಟ್ಯಗಳಿರುವ ‘ಹೈಪರ್ಸಾನಿಕ್ ಕ್ಷಿಪಣಿ’ ಭಾರತದ ರಕ್ಷಣಾ ವಲಯದ ಪಾಲಿಗೆ ಮಹಾರಾಣಿ!
ಈ ಕ್ಷಿಪಣಿಯ ಸಂಶೋಧನೆ, ನಿರ್ಮಾಣ, ತಂತ್ರಜ್ಞಾನದ ಅಭಿವೃದ್ಧಿ ಮುಂತಾದವು ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳದ್ದು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ವಿಜ್ಞಾನಿಗಳ ನಿರಂತರ ಮತ್ತು ಸಾಂಕ ಪ್ರಯತ್ನ, ಅವಿರತ ಪರಿಶ್ರಮ ಈ ಸಾಧನೆಯ ಬಹುಮುಖ್ಯ ಅಂಶಗಳು. ಜತೆಗೆ, ದೇಶದ ರಕ್ಷಣೆಯ ಮತ್ತು ಸಂಬಂಧಿತ ತಂತ್ರಜ್ಞಾನ, ಶಸ್ತ್ರಾಸ್ತ್ರಗಳ ವಿಷಯ ಬಂದಾಗ ಈಗಿನ ಕೇಂದ್ರ ಸರಕಾರವು ಅತೀವ ಕಾಳಜಿ ಮತ್ತು ಆಸಕ್ತಿ ವಹಿಸುತ್ತಿರುವುದನ್ನು, ಪ್ರಾಮುಖ್ಯ ನೀಡುತ್ತಿರುವುದನ್ನು ಇಲ್ಲಿ ನೆನೆಯಲೇಬೇಕು. ಈ ವಿಷಯದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಗೆ ಬೇಕಾದ ಸರ್ವ ಸಹಕಾರವನ್ನೂ ಕೇಂದ್ರ ಸರಕಾರ ನೀಡುತ್ತ ಬಂದಿರುವುದರಿಂದಲೇ ರಕ್ಷಣಾ ವಲಯದಲ್ಲಿ ಇಷ್ಟು ಪ್ರಗತಿ ದಾಖಲಾಗಿದೆ ಎನ್ನಲಡ್ಡಿಯಿಲ್ಲ.
ಒಟ್ಟಾರೆ ಹೇಳುವುದಾದರೆ, ಹೈಪರ್ಸಾನಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗದ ಮೂಲಕ ಭಾರತವು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಮಹತ್ತರ ಮತ್ತು ಉತ್ಕೃಷ್ಟ ಸಾಧನೆಯು ನಮ್ಮ ದೇಶವನ್ನು ವಿಶಿಷ್ಟ-ನಿರ್ಣಾಯಕ- ಸುಧಾರಿತ ಮಿಲಿಟರಿ ತಂತ್ರಜ್ಞಾನಗಳನ್ನು ಹೊಂದಿರುವ ಆಯ್ದ ಗಣ್ಯರಾಷ್ಟ್ರಗಳ ಗುಂಪಿಗೆ (Elite group of nations) ಸೇರಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ. ಈ ಹೇಳಿಕೆ ಯಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಪರೀಕ್ಷಾರ್ಥ ನಡೆದ ಈ ಕ್ಷಿಪಣಿಯ ಹಾರಾಟದ ದತ್ತಾಂಶವನ್ನು ಡಿಆರ್ಡಿಒ ಸಂಗ್ರಹಿಸಿ ವಿಶ್ಲೇಷಣೆ ಮಾಡಿದೆ. ಪೂರ್ವ ನಿರ್ಧಾರಿತ ಯೋಜನೆಯಂತೆಯೇ ವಿವಿಧ ಚಲನೆಗಳು ನಿಖರ ವಾಗಿ ದಾಖಲಾಗಿವೆ. ಈ ಯಶಸ್ವಿ ಪ್ರಯೋಗವು ಚೀನಾ ಮತ್ತು ಪಾಕಿಸ್ತಾನಕ್ಕೆ ನೇರ ಮತ್ತು ಖಡಕ್ ಸಂದೇಶವನ್ನು ಕಳುಹಿಸಿ ಒಂದಷ್ಟು ನಡುಕ ಹುಟ್ಟಿಸಿದೆ! ‘ಮೇಕ್ ಇನ್ ಇಂಡಿಯಾ’ ಯೋಜನೆಯ ಮತ್ತೊಂದು ಗರಿಮೆ ಇದು.
ಕಲಾಂ ಮಿಸೈಲ್ ಕಾಂಪ್ಲೆಕ್ಸ್ನ ಪ್ರಯೋಗಾಲಯಗಳು, ಡಿಆರ್ ಡಿಒ ಪ್ರಯೋಗಾಲಯ ಮತ್ತು ಇತರ ಕೈಗಾರಿಕಾ ಪಾಲುದಾರ ಸಂಸ್ಥೆಗಳು ಜತೆಗೂಡಿ ದೇಶೀಯವಾಗಿ ಈ ಕ್ಷಿಪಣಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ಡಿಆರ್ಡಿಒ ಬಿಡುಗಡೆ ಮಾಡಿರುವ ಅಧಿಕೃತ ವಿಡಿಯೋದಲ್ಲಿ, ಕತ್ತಲಿನ ಆಕಾಶದಲ್ಲಿ ತೆಳ್ಳಗಿನ ಕ್ಷಿಪಣಿಯೊಂದು ವೇಗವಾಗಿ ಮುನ್ನುಗ್ಗಿ ನಂತರ ಸ್ಪೋಟಿಸುವ ಮತ್ತು ಸ್ಪೋಟದ ನಂತರ ಅಗ್ನಿಜ್ವಾಲೆ ಉಲ್ಬಣ ಗೊಂಡು ವಿಶಾಲವಾಗಿ ಪಸರಿಸುವ ದೃಶ್ಯವಿದ್ದು ಆಸಕ್ತರು ಇದನ್ನು ಕಣ್ತುಂಬಿಕೊಳ್ಳಬಹುದು.
ಈ ಯಶಸ್ವಿ ಪರೀಕ್ಷಾರ್ಥ ಉಡ್ಡಯನದ ಸಮಯದಲ್ಲಿ ‘ಡಿಆರ್ಡಿಒ’ದ ಹಿರಿಯ ವಿಜ್ಞಾನಿಗಳು ಮತ್ತು ಸೇನಾಪಡೆಯ ಅಧಿಕಾರಿಗಳು ಉಪಸ್ಥಿತರಿದ್ದು ಪರಸ್ಪರ ಸಂತೋಷ ಹಂಚಿಕೊಂಡರು. ಸುರಕ್ಷತೆ ಮತ್ತು ಗೌಪ್ಯತೆಯ ದೃಷ್ಟಿಯಿಂದ ಹೆಚ್ಚಿನ ವಿವರಗಳನ್ನು ನೀಡಲಾಗಿಲ್ಲ. ಅಲ್ಲಿಗೆ ನಮ್ಮ ದೇಶದ
ರಕ್ಷಣಾ ವಿಭಾಗ ಮತ್ತಷ್ಟು ಸಮೃದ್ಧ-ಸಶಕ್ತ-ಸುರಕ್ಷಿತ ಎಂದಾಯಿತು! ಆದಷ್ಟು ಬೇಗ ಒಂದಷ್ಟು ಹೈಪರ್ಸಾನಿಕ್ ಕ್ಷಿಪಣಿಗಳು ದೇಶದ ಶಸ್ತ್ರಾಸ್ತ್ರ ಖಜಾನೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿ.
ಸೇನೆಯ ಪ್ರತಿ ಕ್ಷಿಪಣಿಗೂ ನಾಮಕರಣ ಆಗುತ್ತದೆ. ‘ಶಸ್ತ್ರಾಸ್ತ್ರಗಳ ಮಹಾರಾಣಿ’ ಎನಿಸಿರುವ ಈ ಕ್ಷಿಪಣಿಗೆ, ‘ಕಿತ್ತೂರು ರಾಣಿ ಚೆನ್ನಮ್ಮ’, ‘ಝಾನ್ಸಿ ರಾಣಿ ಲಕ್ಷ್ಮೀಬಾಯಿ’, ‘ಒನಕೆ ಓಬವ್ವ’ ಮುಂತಾದ ಹೋರಾಟಗಾರ್ತಿಯರ ಹೆಸರು ಇಟ್ಟರೆ ಈ ಸಂಭ್ರಮಕ್ಕೆ ಕಳಶವಿಟ್ಟಂತೆ. ಹೆಸರಿಗೆ ತಕ್ಕಂತೆ ಈ ಕ್ಷಿಪಣಿ ಮುಂದಿನ ದಿನಗಳಲ್ಲಿ ಶತ್ರುಗಳ ಎದೆಯಲ್ಲಿ ಭಯ ಮತ್ತು ಚಿಂತೆ ಹುಟ್ಟಿಸುವಂತಾಗಲಿ ಎಂಬುದು ಈ ಆಶಯಕ್ಕೆ ಕಾರಣ. ಶತ್ರುದೇಶವನ್ನು ಹಣಿಯುವ-ಮಣಿಸುವ ಈ ‘ಶಬ್ದಾತೀತ ಕ್ಷಿಪಣಿ’ಯ ಪರೀಕ್ಷೆಯನ್ನು ಭಾರತ ನಡೆಸಿದ್ದು ಪ್ರಪಂಚದಾದ್ಯಂತ ಒಂದಷ್ಟು ಸದ್ದು ಮಾಡುತ್ತಿದೆ. ಶತ್ರುವು ನಿಶ್ಶಬ್ದವಾಗಿ ಮುದುರಿ ಮೂಲೆ ಸೇರುವಂತೆ ಮಾಡುವ ಸಾಮರ್ಥ್ಯ ಹೊಂದಿರುವ ಈ ಹೈಪರ್ಸಾನಿಕ್ ಕ್ಷಿಪಣಿ ನಮ್ಮ ದೇಶದ ಬೆಲೆ ಕಟ್ಟಲಾಗದ ರಕ್ಷಣಾ ‘ಆಸ್ತಿ’.
(ಲೇಖಕರು ಸಾಫ್ಟ್ ವೇರ್ ಉದ್ಯೋಗಿ ಮತ್ತು ಪ್ರಸಕ್ತ ವಿದ್ಯಮಾನಗಳ ವೀಕ್ಷಕರು)
ಇದನ್ನೂ ಓದಿ: #NRavikumar