ಶಶಾಂಕಣ
ಶಶಿಧರ ಹಾಲಾಡಿ
ಕುಂಬಳಕಾಯಿ ಎಂದಾಕ್ಷಣ ನಮ್ಮ ಹಳ್ಳಿಯವರು ಕೇಳುವ ಮೊದಲ ಪ್ರಶ್ನೆ: ಬೂದುಗುಂಬಳವೋ, ಸಿಹಿ ಗುಂಬಳವೋ ಎಂದು. ಎರಡೂ ಪ್ರಭೇದದ ಕುಂಬಳಕಾಯಿಗಳು ಜನಪ್ರಿಯವಾಗಿರುವ, ಪರಿಚಿತವಾಗಿರುವ ಊರು ನಮ್ಮದು. ಬೂದುಗುಂಬಳ ಉದ್ದನೆಯದು, ಸಿಹಿಗುಂಬಳವು ದುಂಡನೆಯ ಗಾತ್ರ; ಸಿಹಿ ಗುಂಬಳವನ್ನು ಚೀನಿಗುಂಬಳ ಎಂದೂ ಕರೆಯುವುದುಂಟು. ಈ ವಿಚಾರವನ್ನು ಕೋಲಾರದ ಗೆಳೆಯರೊಬ್ಬರ ಬಳಿ ಹಂಚಿಕೊಂಡಾಗ, ಅವರಿಗೆ ತುಸು ಅಚ್ಚರಿ ಎನಿಸಿತು. ಏಕೆಂದರೆ, ಅವರ ಹಳ್ಳಿಯಲ್ಲಿ ಕುಂಬಳಕಾಯಿ ಎಂದರೆ, ಪ್ರಧಾನವಾಗಿ ಅದೊಂದೇ- ನಾವು ಸಿಹಿಗುಂಬಳ ಎಂದು ಕರೆಯುವ ಪ್ರಭೇದ. ತಮ್ಮ ಊರಿನಲ್ಲಿ ಅದರಿಂದ ನಾನಾ ರೀತಿಯ ತಿನಿಸುಗಳನ್ನು, ವ್ಯಂಜನಗಳನ್ನು ತಯಾರಿಸಿ ತಿನ್ನುತ್ತೇವೆ ಎಂದರು ಅವರು. ಎಲ್ಲಾ ಪ್ರದೇಶಗಳನ್ನು ಪರಿಗಣಿಸಿದರೆ, ಕೋಲಾರದ ಗೆಳೆಯರ ಮಾತಿಗೇ ಹೆಚ್ಚು ಬೆಲೆ; ದೂರದ ಯುರೋಪ್ ಮತ್ತು ಅಮೆರಿಕದಲ್ಲಿ ಹ್ಯಾಲೋವೀನ್ ಹಬ್ಬದ ಸಮಯದಲ್ಲಿ, ಗತಿಸಿದ ಹಿರಿಯರ ನೆನಪಿನಲ್ಲಿ ಅವರು ಕತ್ತರಿಸುವುದು, ಸಿಂಗರಿಸುವುದು ಸಹ ಸಿಹಿಗುಂಬಳದ ಪ್ರಭೇದಗಳನ್ನು!
ಇರಲಿ, ಮೊದಲಿಗೆ ಬೂದುಗುಂಬಳದ ವಿಚಾರಕ್ಕೆ ಬರೋಣ. ಮೈತುಂಬಾ ಬೂದಿ ಬಳಿದುಕೊಂಡಿರುವ ಈ ದೊಡ್ಡ ಗಾತ್ರದ ತರಕಾರಿಯು ನಮ್ಮ
ಹಳ್ಳಿಯ ಜನಪ್ರಿಯ ತರಕಾರಿಗಳಲ್ಲಿ ಒಂದು. ಪೇಟೆಯಲ್ಲಿ ಹುಟ್ಟಿ ಬೆಳೆದಿರುವ ಇಂದಿನ ಕೆಲವರಿಗೆ ಅಷ್ಟೊಂದು ನಿಖರವಾಗಿ ಗೊತ್ತಿಲ್ಲದ ಒಂದು ಅಂಶವಿದೆ- ಬೂದುಗುಂಬಳ ಕಾಯಿಯ ಮೇಲೆಲ್ಲಾ ಅದೆಷ್ಟು ದಟ್ಟವಾದ ಬೂದಿಯಂಥ ಪುಡಿ ಇರುತ್ತದೆಂದರೆ, ಗಿಡದಲ್ಲೇ ಇರುವಾಗ ಅದನ್ನು
ಮುಟ್ಟಿದರೆ ಮೈ, ಕೈ ಎಲ್ಲಾ ಬೂದಿಯಾಗುತ್ತದೆ!
ಎಂಬತ್ತರ ದಶಕದಲ್ಲಿ ಬಯಲುಸೀಮೆಯ ನನ್ನ ಕೆಲವು ಪರಿಚಿತರಿಗೆ ಬೂದುಗುಂಬಳದ ವಿಚಾರವಾಗಿ ಹೆಚ್ಚಿನ ಮಾಹಿತಿ ಇರಲಿಲ್ಲ; ಬೂದು ಗುಂಬಳದ ಸಾಂಬಾರು ನಮ್ಮೂರಲ್ಲಿ ಜನಪ್ರಿಯ’ ಎಂದು ಅರಸೀಕೆರೆಯ ಗೆಳೆಯರ ಬಳಿ ಹೇಳಿದಾಗ, ಅವರು ನಿಬ್ಬೆರಗಾದರು! ಅವರ
(ಅಂದಿನ) ತಿಳಿವಳಿಕೆಯ ಪ್ರಕಾರ, ಬೂದುಗುಂಬಳ ಇರುವುದು ಆಯುಧಪೂಜೆಯ ದಿನ ಕತ್ತರಿಸಲು ಅಥವಾ ಗೃಹಪ್ರವೇಶದ ಸಮಯದಲ್ಲಿ, ಮನೆಯ ಎಂಟೂ ದಿಕ್ಕುಗಳಲ್ಲಿ ಕುಂಕುಮದ ನೀರು ಸಹಿತ ಕತ್ತರಿಸಿ, ಮನೆಗೆ ‘ಬಲಿ’ ಕೊಡಲು ಮಾತ್ರ. ಈಚಿನ ದಿನಗಳಲ್ಲಿ, ಬೂದುಗುಂಬಳವು ನಗರ ಪ್ರದೇಶಗಳಲ್ಲೂ ತರಕಾರಿಯಾಗಿ, ಆರೋಗ್ಯ ಕಾಪಾಡುವ ಸಸ್ಯೋತ್ಪನ್ನವಾಗಿ ಸಾಕಷ್ಟು ಪರಿಚಿತಗೊಂಡಿದೆ.
ನಮ್ಮ ಹಳ್ಳಿಯಲ್ಲಿ ಬೂದುಗುಂಬಳದ ಹುಳಿ, ಪಲ್ಯ, ಪಳದ್ಯ, ಸಂಡಿಗೆಗಳು ಸಾಕಷ್ಟು ಜನಪ್ರಿಯ. ಶುಭಸಮಾರಂಭಗಳಿಗೆ ಮಾತ್ರ ಅದರ ಸಾಂಬಾರು ನಿಷಿದ್ಧ; ಬೇರೆಲ್ಲಾ ಸಂದರ್ಭಗಳಲ್ಲೂ ಸುಲಭವಾಗಿ ಒದಗಿ ಬರುವ ತರಕಾರಿ ಇದು. ‘ಬೂದುಗುಂಬಳದ ಸಾಂಬಾರನ್ನು ಶುಭ ಸಮಾರಂಭಗಳಲ್ಲಿ, ಹಬ್ಬದ ಸಮಯದಲ್ಲಿ ಏಕೆ ತಯಾರಿಸಬಾರದು, ಅದೂ ಒಂದು ತರಕಾರಿ ಅಲ್ಲವೆ?’ ಎಂಬ ತರಲೆ ಪ್ರಶ್ನೆ ಕೇಳಿದರೆ, ಹಿರಿಯರು ಮುಖವನ್ನು ಒಂದು ರೀತಿ ಸೊಟ್ಟಗೆ ಮಾಡುತ್ತಿದ್ದರು! ‘ಬೂದುಗುಂಬಳವನ್ನು ಬಲಿ ಕೊಡಲು ಉಪಯೋಗಿಸುವುದರಿಂದ, ಅದನ್ನು ಕತ್ತರಿಸುವುದು ಎಂದರೆ, ಮನುಷ್ಯನನ್ನೇ ಕತ್ತರಿಸಿದಂತೆ..’ ಎಂಬರ್ಥದ ಮಾತನ್ನು ಹೇಳಿ, ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸುತ್ತಿದ್ದರು. ಹಲವು ತಿಂಗಳುಗಳ ಕಾಲ ಕಾಯ್ದಿಟ್ಟುಕೊಂಡು ಉಪಯೋಗಿಸಬಹುದಾದ ತರಕಾರಿಯ ರೂಪದಲ್ಲಿ ಬೂದುಗುಂಬಳವನ್ನು ನಮ್ಮ ಹಳ್ಳಿಯವರು ನೋಡುತ್ತಿದ್ದರು; ಮನೆ ಹಿಂದಿನ ಹಟ್ಟಿ ಕೊಟ್ಟಿಗೆಯಲ್ಲೋ, ಬಚ್ಚಲು ಮನೆಯಲ್ಲೋ ತೊಲೆಗಳಿಗೆ ಹಗ್ಗದಿಂದ ನೇತುಹಾಕಿದ್ದ ಹತ್ತಾರು ಬೂದುಗುಂಬಳಗಳ ದೃಶ್ಯ ತೀರಾ ಸಾಮಾನ್ಯ. ಚೆನ್ನಾಗಿ ಬಲಿತ ಬೂದುಗುಂಬಳವನ್ನು ಆ ರೀತಿ ನೇತುಹಾಕಿಟ್ಟರೆ, ಮೂರು ನಾಲ್ಕು ತಿಂಗಳು ಕೆಡದೇ ಉಳಿಯುತ್ತದೆ; ಬೇಸಗೆಯಲ್ಲಿ ಬೆಳೆದ ಬೂದುಗುಂಬಳಗಳನ್ನು ಈ ರೀತಿ ಕಾಪಿಟ್ಟುಕೊಂಡು, ಮಳೆಗಾಲದಲ್ಲಿ ತರಕಾರಿಯಾಗಿ ಉಪಯೋಗಿಸುವ ಪದ್ಧತಿ.
ಬೂದುಗುಂಬಳದ ಬೀಜಗಳನ್ನು ನೆಲಕ್ಕೆ ಊರಿ, ಗಿಡ ಮಾಡಿ, ಮೊಳದುದ್ದದ ಕಾಯಿಗಳನ್ನು ಬೆಳೆಸುವುದು ನಮ್ಮ ಅಮ್ಮಮ್ಮನ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಮನೆ ಎದುರಿನ ಅಗೇಡಿಯಲ್ಲಿ ದೀಪಾವಳಿಯ ಸಮಯದಲ್ಲಿ ಮೊದಲ ಬೆಳೆಯ ಕೊಯ್ಲು ಆದ ನಂತರ, ಎರಡನೆಯ ಬತ್ತದ ಬೆಳೆಗಾಗಿ ಉಳುಮೆ ಮಾಡಿಸುವಾಗಲೇ, ಒಂದು ಮೂಲೆಯಲ್ಲಿ ಹತ್ತಿಪ್ಪತ್ತು ಅಡಿ ಉದ್ದದ, ಎರಡು ಅಡಿ ಅಗಲದ ಜಾಗವನ್ನು ಪ್ರತ್ಯೇಕ ವಾಗಿಡುವಂತೆ ಹೇಳುತ್ತಿದ್ದರು. ಹಿಂದಿನ ವರ್ಷ ತರಕಾರಿಯಾಗಿ ಉಪಯೋಗಿಸಿದ, ಚೆನ್ನಾಗಿ ಬಲಿತ ಬೂದುಗುಂಬಳ ಕಾಯಿಯ ಬೀಜಗಳನ್ನು ಒಣಗಿಸಿಟ್ಟಿದ್ದು, ಮನೆಯ ಹತ್ತಿರವೇ ಬಿತ್ತಿ, ಗಿಡ ಮಾಡಿ, ಅವು ಸುಮಾರು ಅರ್ಧ ಅಡಿಯಷ್ಟು ಎತ್ತರಕ್ಕೆ ಬೆಳೆದ ನಂತರ, ಕಿತ್ತು ತಂದು, ಗದ್ದೆಯ ಮೂಲೆಯಲ್ಲಿ ಅದಕ್ಕೆಂದೇ ಕಾಯ್ದಿರಿಸಿದ್ದ ಜಾಗದಲ್ಲಿ ನೆಡುತ್ತಿದ್ದರು. ಆ ಪುಟಾಣಿ ಗಿಡದ ತುದಿಯಲ್ಲಿ ದಾರದಂಥ ರಚನೆಯಲ್ಲಿ ಸಣ್ಣ ಸುರುಳಿ ಕಂಡ ಕೂಡಲೆ, ಅದು ಸುತ್ತಿಕೊಳ್ಳಲು ಅನುಕೂಲವಾಗುವಂತೆ, ಒಣಗಿದ ಕೋಲು, ಅಡರುಗಳನ್ನು ಗಿಡಗಳ ಪಕ್ಕದಲ್ಲಿ ಊರಿ, ಗಿಡ ಮೇಲಕ್ಕೆ ಹಬ್ಬಲು ಅನುವು ಮಾಡಿಕೊಡುತ್ತಿದ್ದರು.
ಸಾಲಾಗಿ ನೆಟ್ಟ ಹತ್ತಾರು ಗಿಡಗಳು ಹಬ್ಬಿಕೊಳ್ಳಲು ಆಸರೆಗಾಗಿ, 3 ಅಡಿ ಎತ್ತರದ ಪುಟ್ಟ ಚಪ್ಪರವನ್ನೂ ಮಾಡುತ್ತಿದ್ದುದುಂಟು. ಬೇಸಗೆ ಸಮಯದಲ್ಲಿ ನಾಟಿ ಮಾಡಿದ ಗಿಡಗಳು, ಅಗೇಡಿಯ ಒಣಗಿದ ನೆಲದ ಮೇಲೆಯೇ ಹಬ್ಬುತ್ತವೆ. ಬೂದುಗುಂಬಳ ಕಾಯಿಯ ಗಾತ್ರ, ನಿಜಕ್ಕೂ ಈ ಪ್ರಕೃತಿಯ ಒಂದು ಅಚ್ಚರಿ. ಬಳುಕುವ ದೇಹದ, ಬೆರಳು ದಪ್ಪದ ಬಳ್ಳಿಯೊಂದರಲ್ಲಿ, ಸುಮಾರು 2 ಅಡಿ ಉದ್ದ, ಒಂದು ಅಡಿ ದಪ್ಪದ ಕುಂಬಳಕಾಯಿ
ಬಿಡುವುದನ್ನು ಕಂಡಾಗ, ಪ್ರಕೃತಿಯ ವೈಚಿತ್ರ್ಯ, ವೈರುಧ್ಯಗಳ ಕುರಿತು ವಿಸ್ಮಯಪಡಲೇಬೇಕು!
ಯಕಶ್ಚಿತ್ ಬಳ್ಳಿಯೊಂದರಲ್ಲಿ, ಅಷ್ಟು ದೊಡ್ಡ ಗಾತ್ರದ, 15 ಕಿಲೋ ತೂಕದ ಕುಂಬಳಕಾಯಿ ಬೆಳೆಯಬೇಕಾದರೆ, ಆ ಪುಟ್ಟ ಬಳ್ಳಿಯ ಕ್ರತುಶಕ್ತಿ
ಎಷ್ಟು ಪ್ರಬಲವಾಗಿರಬೇಕು, ಅಲ್ಲವೆ? ಬೂದುಗುಂಬಳದ ದೊಡ್ಡ ಗಾತ್ರದ ಎಲೆಗಳು ತ್ವರಿತ ದ್ಯುತಿಸಂಶ್ಲೇಷಣೆಗೆ, ಆಹಾರದ ಉತ್ಪಾದನೆಗೆ
ಅನುಕೂಲ ಮಾಡಿಕೊಡಬಹುದು, ನಿಜ; ಆದರೆ, ದೊಡ್ಡ ಗಾತ್ರದ ಎಲೆ ಇದ್ದಾಕ್ಷಣ, ದೊಡ್ಡ ಗಾತ್ರದ ಕಾಯಿಗಳನ್ನು ಬಿಡಲೇಬೇಕೆಂದಿಲ್ಲವಲ್ಲ! ಚಪ್ಪರದ ಮೇಲೆ ಹಬ್ಬಿಕೊಂಡ ಬಳ್ಳಿಯಿಂದ ಜೋತಾಡುವ ದೊಡ್ಡ ಗಾತ್ರದ ಬೂದುಗುಂಬಳ ಕಾಯಿಗಳನ್ನು ಕಂಡಾಗಲೂ ಇದೇ ರೀತಿಯ ವಿಸ್ಮಯವುಂಟಾಗುತ್ತದೆ. ಗದ್ದೆಮೂಲೆಯ ಜಾಗದಲ್ಲಿ ಬೇಗಬೇಗನೆ ಬೆಳೆಯುವ ಕುಂಬಳ ಬಳ್ಳಿಯಲ್ಲಿ ಹಳದಿ ಬಣ್ಣದ ಹೂವುಗಳು, ಪುಟ್ಟ ಹೀಚು ಆಗಿ, ನೋಡ ನೋಡುತ್ತಿದ್ದಂತೆಯೇ, ದಪ್ಪನೆಯ ಕಾಯಿಗಳು ಬೆಳೆಯತೊಡಗುತ್ತವೆ. ಆ ಕಾಯಿಯ ಮೈಮೇಲಿನ ಬೂದಿಯ ಪದರ ಎಷ್ಟು ದಟ್ಟವಾಗಿರುತ್ತದೆಂದರೆ, ಮುಟ್ಟಿದರೆ ಕೈ ತುಂಬಾ ಬೂದಿಯ ಲೇಪನ! ಜತೆಗೆ, ಸೂಕ್ಷ್ಮವಾದ ಮುಳ್ಳಿನಂಥ ರಚನೆಗಳೂ ಅದರ ಮೇಲಿದ್ದು, ಅಂಗೈಗೆ ಚುಚ್ಚಿ ನವೆಯನ್ನುಂಟುಮಾಡಬಹುದು.
ಬೂದುಗುಂಬಳದಿಂದ ತಯಾರಿಸುವ ಹುಳಿ ಅಥವಾ ಸಾಂಬಾರಿನ ರುಚಿ ಉತ್ತಮ, ಉತ್ಕೃಷ್ಟ. ಬಣ್ಣದ ಸೌತೆಕಾಯಿಯ ಹುಳಿಯ ರುಚಿಗೆ ಹೋಲಿ ಸಬಹುದು. ಆದರೆ ನಮ್ಮ ಹಳ್ಳಿಯವರು ಬೂದುಗುಂಬಳ ಹುಳಿಗೆ ತಲೆತಲಾಂತರದ ಪದ್ಧತಿಯಂತೆ ಸ್ವಲ್ಪ ಬೆಲ್ಲ ಹಾಕುವುದರಿಂದಾಗಿ ಅದರ ರುಚಿ ಕಡುತ್ತದೆ ಎಂದೇ ನನ್ನ ಅಭಿಪ್ರಾಯ. ಬೂದುಗುಂಬಳಕಾಯಿಯನ್ನು ತೆಳ್ಳಗೆ ಹೆಚ್ಚಿ ತಯಾರಿಸುವ ಪಳದ್ಯ ಅಥವಾ ಮಜ್ಜಿಗೆ ಹುಳಿಯೂ ಒಂದು ಗುಣಮಟ್ಟದ ವ್ಯಂಜನ. ತರಕಾರಿಗೆ ಬರವಿದ್ದ ಸಮಯದಲ್ಲಿ ನಮ್ಮ ಅಮ್ಮಮ್ಮನು, ಇದರಿಂದ ಪಲ್ಯವನ್ನೂ ತಯಾರಿಸುವುದುಂಟು. ಆದರೆ,
ಅದರ ರುಚಿ ಅಷ್ಟಕ್ಕಷ್ಟೆ. ಬೂದುಗುಂಬಳ ಕಾಯಿ ಸಿಪ್ಪೆಯಿಂದ ಚಟ್ನಿ, ತಂಬುಳಿ ಮೊದಲಾದ ವ್ಯಂಜನಗಳನ್ನೂ ತಯಾರಿಸುವವರು ನಮ್ಮ ಹಳ್ಳಿಯ ಲ್ಲಿದ್ದಾರೆ!
ಈಚಿನ ದಶಕಗಳಲ್ಲಿ, ಬೂದುಗುಂಬಳವು ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ ಎಂಬ ಪ್ರಚಾರ ಪಡೆದಿದೆ- ಇದರ ರಸ ಅಥವಾ ಜ್ಯೂಸ್ ಕುಡಿದರೆ ಹೊಟ್ಟೆ ಉರಿ, ಹುಳಿ ತೇಗು ಸಮಸ್ಯೆ ಪರಿಹಾರವಾಗಬಹುದಂತೆ. ಬೂದುಗುಂಬಳದ ಬೀಜದಲ್ಲೂ ಔಷಧಿಯ ಗುಣಗಳನ್ನು ಹುಡುಕಿ, ಪ್ರಚುರಪಡಿಸಿದ್ದು ಕಂಡು ಬೆರಗಾದೆ! ಬೂದುಗುಂಬಳದಿಂದ ತಯಾರಿಸುವ ಹಲ್ವದ ರುಚಿ ಯಾರು ತಾನೆ ನೋಡಿಲ್ಲ! ಆ ಕಾಯಿಯನ್ನು ತುರಿದು ತಯಾರಿಸುವ ಹಲ್ವವು ಶುಭಕಾರ್ಯಗಳ ಅಡುಗೆಯಲ್ಲೂ ಪ್ರವೇಶಪಡೆದಿದೆ! ಇದನ್ನು ಕೂಷ್ಮಾಂಡ ಹಲ್ವ ಎಂದೂ ಪ್ರಸಿದ್ಧಗೊಳಿಸಿದ್ದಾರೆ.
ಬೂದುಗುಂಬಳಕ್ಕೆ ಇರುವ ‘ಕೂಷ್ಮಾಂಡ’ ಎಂಬ ಹೆಸರಿನ ನಿಷ್ಪನ್ನವನ್ನು ಹುಡುಕುತ್ತಾ ಹೋದರೆ, ಪುರಾಣದ ಕಥೆಗಳು ಒಂದೊಂದಾಗಿ ಹೊರ ಬಂದಾವು! ಸಂಡಿಗೆ ತಯಾರಿಯಲ್ಲೂ ಬೂದುಗುಂಬಳದ ಉಪಯೋಗವಿದೆ: ಉದ್ದು ಮತ್ತು ಬೂದುಗುಂಬಳವನ್ನು ಅರೆದು, ಸಂಡಿಗೆ ತಯಾರಿಸಿ ಡಬಹುದು. ಉತ್ತರ ಭಾರತದಲ್ಲಿ ತಯಾರಿಸುವ ಸಿಹಿಯಾದ ಮುರಬ್ಬಕ್ಕೆ ಬೂದುಗುಂಬಳವೇ ಪ್ರಧಾನ ದ್ರವ್ಯ. ಆದರೆ, ವಾಹನ ಪೂಜೆ ಮಾಡುವಾಗ, ಬೂದುಗುಂಬಳಗಳನ್ನು ಅಕರಾಳ ವಿಕರಾಳವಾಗಿ ಕತ್ತರಿಸಿ, ವಾಹನದ ಮುಂದೆ ಇಡುವ ಪದ್ಧತಿಯು, ಬೇರೊಂದೇ ಕಥನಲೋಕದ ಅನಾವರಣ ಮಾಡಬಲ್ಲದು!
‘ಬಲಿ’ ಕೊಡುವ ರೀತಿಯಲ್ಲಿ ಕತ್ತರಿಸಿ, ಅದರ ಬಿಳಿಯಾದ ತಿರುಳಿನಲ್ಲಿ ಕುಂಕುಮದ ನೀರನ್ನು ಮಿಶ್ರಣ ಮಾಡಿ, ಕೆಂಪನೆ ಬಣ್ಣವನ್ನು ಪ್ರದರ್ಶಿಸುವ ರೀತಿಯನ್ನು ಕಂಡಾಗ, ನೆನಪಾಗುವುದು ಪ್ರಾಣಿಗಳ ಬಲಿ! ಹೊಸ ಮನೆಯ ಪ್ರವೇಶಕ್ಕೂ ಮೊದಲು ಮಾಡುವ ಪೂಜೆಯ ಸಮಯದಲ್ಲೂ, ಮನೆಯ ಸುತ್ತ ಎಂಟೂ ದಿಕ್ಕಿನಲ್ಲಿ, ಕೆಂಪನೆಯ ನೀರು ಸಿಂಪಡಿಸಿಕೊಂಡ ಬೂದುಗುಂಬಳಕಾಯಿಯ ‘ಬಲಿ’ಯು, ಬಹು ಹಿಂದೆ ಇದ್ದ ಅದಾವುದೋ ‘ಬಲಿ’ಯ ನೆನಪಿನಲ್ಲೇ ಮುಂದುವರಿದಿರಬೇಕು! ಹಿಂದಿನ ದಶಕಗಳಲ್ಲಿ ಅಣೆಕಟ್ಟು, ಸೇತುವೆಗಳನ್ನು ನಿರ್ಮಿಸುವಾಗ, ಮನುಷ್ಯರನ್ನು ಬಲಿಕೊಡು ತ್ತಿದ್ದರು ಎಂಬ ಕಥೆಗಳು ನೆನಪಾಗಿ, ಅಂಥ ಬಲಿಯ ಪರ್ಯಾಯ ರೂಪದಲ್ಲಿ ಬೂದುಗುಂಬಳವನ್ನು ಕತ್ತರಿಸುವ ಪದ್ಧತಿ ಮುಂದುವರಿದಿರಬೇಕು.
ದುಂಡನೆಯ, ನಯವಾದ ಮೇಲ್ಮೈಯ, ತುಸು ಬಣ್ಣವನ್ನೂ ಹೊಂದಿರಬಹುದಾದ ಸಿಹಿ ಗುಂಬಳವು ನಮ್ಮ ಹಳ್ಳಿಯಲ್ಲಿ ಸಾಕಷ್ಟು ಪರಿಚಿತವೇ;
ಆದರೆ, ಅದರ ಸಿಹಿ ರುಚಿಯಿಂದಾಗಿ, ಅದರಿಂದ ತಯಾರಿಸಿದ ಹುಳಿ ಮೊದಲಾದ ವ್ಯಂಜನಗಳೂ ಸಿಹಿಯಾಗುವುದುಂಟು. ಆದ್ದರಿಂದ, ಹುಳಿ,
ಸಾಂಬಾರು ತಯಾರಿಸಲು ಅದು ಅಷ್ಟೊಂದು ಸೂಕ್ತವಲ್ಲ ಎಂಬ ಭಾವನೆಯಿದೆ. ಅದರ ಪಲ್ಯ ಮಾತ್ರ ಸಾಕಷ್ಟು ಜನಪ್ರಿಯ. ಕೋಲಾರ,
ಆಂಧ್ರಪ್ರದೇಶದ ಕಡೆ ಸಿಹಿಗುಂಬಳವು ‘ಸಿಹಿ’ಯ ಸಂಕೇತ- ಶುಭ ಸಂದರ್ಭಗಳಲ್ಲಿ ಅದರ ಕಾಯಿಯನ್ನು ಪರಸ್ಪರ ವಿನಿಮಯಮಾಡಿಕೊಳ್ಳು
ವುದುಂಟು. ಸಿಹಿಗುಂಬಳದಿಂದ ತಯಾರಿಸಿದ ವ್ಯಂಜನಗಳು ಅಲ್ಲಿ ಸಾಕಷ್ಟು ಪರಿಚಿತ. ಬಿಸಿಲಿನ ದಿನಗಳಲ್ಲೂ ಚೆನ್ನಾಗಿ ಬೆಳೆಯುವ ಸಿಹಿಗುಂಬಳವು, ಹಿಂದಿನ ಕಾಲದಲ್ಲಿ ಒಣ ಪ್ರದೇಶಗಳ ಜನರ ಹಸಿವು ನೀಗಲು ಸಹಕರಿಸಿರಬೇಕು.
ಸಿಹಿಗುಂಬಳದ ಕುರಿತು ಇರುವ ಒಂದು ವಿಶಿಷ್ಟ ನೆನಪಿನೊಂದಿಗೆ, ಈ ಬರಹವನ್ನು ಮುಗಿಸಬಹುದೇನೊ! ನಮ್ಮ ಮನೆ ಎದುರಿನ ಅಗೇಡಿಯ ಒಂದು ಮೂಲೆಯಲ್ಲಿ ಬೆಳೆಯುವ ಬೂದುಗುಂಬಳಗಳ ಗಿಡದ ಜತೆಯಲ್ಲೇ, ಸಿಹಿಗುಂಬಳದ ಗಿಡಗಳನ್ನೂ ಬೆಳೆಸುತ್ತಿದ್ದರು. ನೋಡಲು ಬಹುಮಟ್ಟಿಗೆ ಒಂದೇ ರೀತಿಯ ಬಳ್ಳಿಗಳು; ದುಂಡನೆಯ ಕಾಯಿ ಬಿಟ್ಟಾಗ, ಇದು ಸಿಹಿಗುಂಬಳದ ಗಿಡ ಎಂದು ಸ್ಪಷ್ಟವಾಗುತ್ತದೆ.
ಅದರ ಕಾಯಿಯಷ್ಟೇ ಪ್ರಾಮುಖ್ಯ ಅದರ ಹೂವಿಗೆ, ಅದರಲ್ಲೂ ಗಂಡು ಹೂವಿಗೆ! ಕಾರಣ, ಸಿಹಿಗುಂಬಳದ ಹೂವಿನಿಂದ ನಮ್ಮ ಅಮ್ಮಮ್ಮ,
ದೋಸೆ ತಯಾರಿಸುತ್ತಿದ್ದರು! ಗಾತ್ರದಲ್ಲಿ ತುಸು ದೊಡ್ಡದಾಗಿರುವ ಸಿಹಿಗುಂಬಳ ಹೂವನ್ನು ಕತ್ತರಿಸಿ, ದೋಸೆ ಮಾಡಿದರೆ ಮಕ್ಕಳಿಗೆ ತಿನ್ನಲು ಬಲುರುಚಿ! ಸಿಹಿಗುಂಬಳ ಹೂವಿನ ದೋಸೆಯ ರೆಸಿಪಿ ಸರಳ- ಒಣ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಚೆನ್ನಾಗಿ ರುಬ್ಬಿದ ಅಕ್ಕಿ ಹಿಟ್ಟಿಗೆ, ಈ ಹೂವುಗಳನ್ನು ಸಣ್ಣದಾಗಿ ಹೆಚ್ಚಿ ಮಿಶ್ರಣ ಮಾಡಬೇಕು. ದೋಸೆ ಕಾವಲಿಗೆ ಹದವಾಗಿ ಎಣ್ಣೆ ಸವರಿ, ಈ ಹಿಟ್ಟನ್ನು ಹರಡಿ ಬೇಯಿಸಬೇಕು.
ದೋಸೆ ಬೆಂದ ನಂತರ, ಮಗಚುವ ಕೈ ಸಹಾಯದಿಂದ ದೋಸೆಯನ್ನು ಇಡಿಯಾಗಿ ಎಬ್ಬಿಸಲು ತುಸು ಕೌಶಲ ಅಗತ್ಯ. ಸಿಹಿಗುಂಬಳ ಹೂವಿನ ದೋಸೆಯನ್ನು ನಾನು ಹಲವು ಬಾರಿ ತಿಂದಿದ್ದುಂಟು. ಆದರೆ, ಈಚಿನ ಹಲವು ದಶಕಗಳಿಂದ ಅದನ್ನು ತಿನ್ನುವ ಅವಕಾಶವಾಗಿಲ್ಲ; ಅಷ್ಟೇಕೆ ಕಂಡೇ ಇಲ್ಲ. ಏಕೆಂದರೆ, ಸಿಹಿಗುಂಬಳ ಹೂವಿನ ದೋಸೆಯನ್ನು ತಯಾರಿಸುವ ಪರಿಪಾಠವು ನಮ್ಮ ಹಳ್ಳಿಯಿಂದ ಕಣ್ಮರೆಯಾಗಿದೆ! ಒಂದಷ್ಟು ಸಿಹಿಗುಂಬಳ ಹೂವು ಸಿಕ್ಕರೆ, ಈ ಹಳೆಯ ತಿನಿಸನ್ನು ‘ಹೊಸರುಚಿ’ಯಾಗಿ ಪ್ರಯೋಗಿಸುವ ಆಸೆ ಈಗಲೂ ಇದೆ.
ಇದನ್ನೂ ಓದಿ: Shashidhara Halady Column: ಸಮನ್ವಯದ ಕೊರತೆಯೇ ಇದಕ್ಕೆ ಕಾರಣವೇ ?