Friday, 22nd November 2024

Bypoll Result 2024: ನಾಳೆ ಉಪ ಚುನಾವಣೆ ಮತ ಎಣಿಕೆ: ಮದ್ಯ ಮಾರಾಟ ನಿಷೇಧ

Bypoll Result

ಬೆಂಗಳೂರು: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ (By election) ಮತ ಎಣಿಕೆ (Vote counting) ನವೆಂಬರ್ 23ರ ಶನಿವಾರ ನಡೆಯಲಿದೆ. ಈ ಚುನಾವಣಾ ಫಲಿತಾಂಶ (Bypoll Result 2024) ಕುತೂಹಲಕ್ಕೆ ಕಾರಣವಾಗಿದೆ. ಮತ ಎಣಿಕೆ ಹಿನ್ನಲೆಯಲ್ಲಿ ಮೂರೂ ವಿಧಾನಸಭಾ (Assembly) ಕ್ಷೇತ್ರಗಳಲ್ಲಿ ಪ್ರತಿಬಂಧಕಾಜ್ಞೆ ವಿಧಿಸಿ ಆದೇಶಿಸಲಾಗಿದ್ದು, ಮದ್ಯ ಮಾರಾಟ ನಿಷೇಧಿಸಲಾಗಿದೆ.

ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆದಿತ್ತು. ವಿಧಾನಸಭೆ ಉಪ ಚುನಾವಣೆಯ ಅಂಗವಾಗಿ ನವೆಂಬರ್ 23ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮುಕ್ತ ಹಾಗೂ ಶಾಂತಿಯುತ ಮತ ಎಣಿಕೆ ನಡೆಸುವ ನಿಟ್ಟಿನಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ, 1951ರ ಕಲಂ 135-ಸಿ ಹಾಗೂ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ನಿಯಮ 10-ಬಿ ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ನವೆಂಬರ್ 22ರ ಮಧ್ಯರಾತ್ರಿ 12 ಗಂಟೆಯಿಂದ ನವೆಂಬರ್ 24ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ.

ಮತ ಎಣಿಕೆ ಕೇಂದ್ರಕ್ಕೆ ಬರುವವರಿಗೆ ಈ ಕೆಳಗಿನ ಷರತ್ತುಗಳನ್ನು ವಿಧಿಸಲಾಗಿದೆ:

  • ಇಂಕ್ (ಮಸಿ), ನೀರು, ಬೆಂಕಿ ಪೊಟ್ಟಣ, ಲೈಟರ್ ಮತ್ತು ಇತರೆ ಅಪಾಯಕಾರಿ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು. ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ಅವುಗಳೊಂದಿಗೆ ತಿರುಗಾಡುವುದನ್ನು ನಿಷೇಧಿಸಲಾಗಿದೆ.
  • ಕಲ್ಲುಗಳನ್ನು, ಕ್ಷಾರಪಧಾರ್ಥ ಇಲ್ಲವೆ ಸ್ಪೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.
  • ಕಲ್ಲುಗಳನ್ನು ಮತ್ತು ಎಸೆಯುವಂಥ ವಸ್ತುಗಳನ್ನು ಎಸೆಯುವ ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
  • ಕಾರು, ಮೋಟಾರು ಬೈಕ್ ಮತ್ತು ಇತರೆ ವಾಹನಗಳಲ್ಲಿ ರ‍್ಯಾಲಿ ಆಯೋಜಿಸುವುದು. ವಿಜಯೋತ್ಸವಗಳನ್ನು ಆಚರಿಸುವುದು ಹಾಗೂ ಭೋಜನ ಕೂಟಗಳನ್ನು ಏರ್ಪಡಿಸುವುದು ನಿಷೇಧಿಸಲಾಗಿದೆ.
  • 5ಕ್ಕಿಂತ ಹೆಚ್ಚು ಜನರು ಗುಂಪುಗೂಡಿ ತಿರುಗಾಡುವಂತಿಲ್ಲ. ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಕುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿಯ ಪ್ರದರ್ಶನ ಮಾಡುವುದು ನಿಷೇಧಿಸಲಾಗಿದೆ. ಆದರೆ ಈ ಆದೇಶ ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Byelection: ಉಪಚುನಾವಣೆ: ರಂಗೇರಿದ ಚನ್ನಪಟ್ಟಣ ಕಣ