ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ(AUS vs IND) ವಿರುದ್ಧ ಒಂದು ಪರ್ತ್ನಲ್ಲಿ ಆರಂಭಗೊಂಡ ಮೊದಲ ಟೆಸ್ಟ್ನ ಮೊದಲ ದಿನವೇ ಅಂಪೈರ್ ತೀರ್ಮಾನವೊಂದು ಹೈಲೈಟ್ ಆಗಿದೆ. ಸಂಕಷ್ಟದಲ್ಲಿ ತಂಡಕ್ಕೆ ಆಸರೆಯಾಗಿದ್ದ ಕೆ.ಎಲ್ ರಾಹುಲ್(KL Rahul) ಅವರಿಗೆ ಮೂರನೇ ಅಂಪೈರ್ ಔಟ್ ನೀಡಿದ್ದು ಇದೀಗ ವಿವಾದಕ್ಕೆ(controversial DRS review) ಕಾರಣವಾಗಿದೆ.
ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ ತಾಳ್ಮೆಯುತ ಬ್ಯಾಟಿಂಗ್ ನಡೆಸುವ ಮೂಲಕ ಕುಸಿದ ತಂಡಕ್ಕೆ ಆಸರೆಯಾಗಿದ್ದರು. 26 ರನ್ ಗಳಿಸಿದ್ದ ವೇಳೆ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಗ್ಲೌಸ್ ಸೇರಿತು. ಔಟ್ಗಾಗಿ ಆಸೀಸ್ ಆಟಗಾರರು ಮನವಿ ಮಾಡಿದರೂ ಮೈದಾನದ ಅಂಪೈರ್ ನಾಟೌಟ್ ಎಂದರು. ಈ ವೇಳೆ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಡಿಆರ್ಎಸ್ ಮನವಿ ಮಾಡಿದರು. ಟಿವಿ ಅಂಪೈರ್ ಪರಿಶೀಲನೆ ಮಾಡುವಾಗ ಅಲ್ಟ್ರಾ ಎಡ್ಜ್ನಲ್ಲಿ ಕೊಂಚ ಸ್ಪೈಕ್ ಕಾಣಿಸಿತ್ತು. ಆದರೆ ಇಲ್ಲಿ ಬ್ಯಾಟ್ ಚೆಂಡಿಗೆ ಬಡಿಯದೆ, ಪ್ಯಾಡ್ಗೆ ತಾಗಿದ್ದು ಸ್ಪಷ್ಟವಾಗಿತ್ತು. ಬ್ಯಾಟ್ನಿಂದ ಚೆಂಡು ದೂರದಲ್ಲಿ ಸಾಗುತ್ತಿರುವುದು ಗೋಚರಿಸಿದರೂ ಟಿವಿ ಅಂಪೈರ್ ಔಟ್ ತೀರ್ಮಾನ ಪ್ರಕಟಿಸಿದರು.
I think the sound came from bat touching pad pic.twitter.com/qtgQRDTVDV
— Abhishek (@be_mewadi) November 22, 2024
ಟಿವಿ ಅಂಪೈರ್ ರಿಚರ್ಡ್ ಇಲ್ಲಿಂಗ್ವರ್ತ್ ನಿರ್ಧಾರಕ್ಕೆ ಬ್ಯಾಟರ್ ರಾಹುಲ್ ಮಾತ್ರವಲ್ಲದೆ ಫೀಲ್ಡ್ ಅಂಪೈರ್ ಕೂಡ ಅಚ್ಚರಿಗೆ ಒಳಗಾದರು. ಇದೀಗ ರಾಹುಲ್ ಔಟ್ ನಿರ್ಧಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಂಪೈರ್ ರಿಚರ್ಡ್ ಇಲ್ಲಿಂಗ್ವರ್ತ್ ಹಿಡಿ ಶಾಪ ಹಾಕಲು ಆರಂಭಿಸಿದ್ದಾರೆ.
ಸದ್ಯ ಭಾರತ ಭೋಜನ ವಿರಾಮಕ್ಕೆ 51 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ರಿಷಭ್ ಪಂತ್ ಮತ್ತು ಜುರೇಲ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಜೈಸ್ವಾಲ್ ಮತ್ತು ಪಡಿಕ್ಕಲ್ ಶೂನ್ಯ ಸಂಪಾದಿಸಿದರೆ, ವಿರಾಟ್ ಕೊಹ್ಲಿ 5 ರನ್ಗೆ ಆಟ ಮುಗಿಸಿದರು.
ಭಾರತ ಪರ ನಿತೀಶ್ ಕುಮಾರ್ ರೆಡ್ಡಿ(Nitish Reddy) ಮತ್ತು ಹರ್ಷಿತ್ ರಾಣಾ(Harshit Rana) ಪದಾರ್ಪಣೆ ಮಾಡಿದರು. ಆಸೀಸ್ ಪರ ನಾಥನ್ ಮೆಕ್ಸ್ವೀನಿ ಚೊಚ್ಚಲ ಟೆಸ್ಟ್ ಕ್ಯಾಪ್ ಪಡೆದರು. ನಿತೀಶ್ ಇದುವರೆಗೆ ಆಂಧ್ರ ಪರ 23 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 1 ಶತಕ, 2 ಅರ್ಧಶತಕ ಬಾರಿಸಿದ್ದಾರೆ. ಜತೆಗೆ 56 ವಿಕೆಟ್ ಕಬಳಿಸಿದ್ದಾರೆ. ಅಕ್ಟೋಬರ್ನಲ್ಲಿ ನಡೆದಿದ್ದ ತವರಿನ ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಮೂರು ಪಂದ್ಯಗಳನ್ನಾಡಿ 90 ರನ್ ಮತ್ತು 3 ವಿಕೆಟ್ ಕಿತ್ತಿದ್ದರು. 1 ಅರ್ಧಶತಕ ಕೂಡ ಬಾರಿಸಿದ್ದರು. ಹರ್ಷಿತ್ ರಾಣಾ ಇದುವರೆಗೆ ದಿಲ್ಲಿ ಪರ 14 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಈ ವೇಳೆ 22 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್ನಲ್ಲಿ ಕೆಕೆಆರ್ ಪರವೂ ಮಿಂಚಿದ್ದರು.