ನವದೆಹಲಿ: ಟೀಂ ಇಂಡಿಯಾ ದಿಗ್ಗಜ, ಸಿಡಿಲ ಮರಿ ಖ್ಯಾತಿಯ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ತಂದೆಯಂತೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಮೇಘಾಲಯ ವಿರುದ್ದ ನಡೆದ ಕೂಚ್ ಬೆಹಾರ್ ಟ್ರೋಫಿ ಅಂಡರ್-19 ಪಂದ್ಯದಲ್ಲಿ ಡೆಲ್ಲಿ ತಂಡದ ಪರ 229 ಎಸೆತಗಳಲ್ಲಿ ಅಜೇಯ 200 ರನ್ ಬಾರಿಸಿ ಮಿಂಚಿದ್ದಾರೆ. 17 ವರ್ಷದ ಆರ್ಯವೀರ್ ಸಾಧನೆಗೆ ಟೀಮ್ ಇಂಡಿಯಾದ ಹಲವು ಮಾಜಿ ಆಟಗಾರರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಂದೆಯಂತೆ ಮುಂದೊಂದು ದಿನ ಟೀಮ್ ಇಂಡಿಯಾದಲ್ಲಿ ಅಬ್ಬರಿಸಲಿ ಎಂದು ಸೆಹ್ವಾಗ್ ಅಭಿಮಾನಿಗಳು ಹಾರೈಸಿದ್ದಾರೆ.
ಸೆಹವಾಗ್ ಅವರು 14 ವರ್ಷದ ಕ್ರಿಕೆಟ್ ಬಾಳ್ವೆಯಲ್ಲಿ 17,000 ಸಾವಿರಕ್ಕೂ ಅಧಿಕ ಅಂತಾರಾಷ್ಟ್ರಿಯ ರನ್ ಬಾರಿಸಿದ್ದಾರೆ. ಭಾರತ ಪರ ಟೆಸ್ಟ್ನಲ್ಲಿ ತ್ರಿಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಯೂ ಇವರದ್ದಾಗಿದೆ. ಸಚಿನ್ ಬಳಿಕ ಏಕದಿನದಲ್ಲಿ ದ್ವಿಶತಕ ಬಾರಿಸಿದ ದ್ವಿತೀಯ ಆಟಗಾರನೂ ಹೌದು. ಒಟ್ಟು 251 ಏಕದಿನ ಪಂದ್ಯ ಆಡಿ 8273 ರನ್ ಬಾರಿಸಿದ್ದಾರೆ. 15 ಶತಕ, 1 ದ್ವಿಶತಕ ಮತ್ತು 38 ಅರ್ಧಶತಕ ಬಾರಿಸಿದ್ದಾರೆ. ಟೆಸ್ಟ್ನಲ್ಲಿ 8586 ರನ್, 23 ಶತಕ 6 ದ್ವಿಶತಕ 2 ತ್ರಿಶತಕ ಬಾರಿಸಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮೊದಲ ಬಾರಿ ನಾಯಕನಾಗಿ ಮುನ್ನಡೆಸಿದ ಕೀರ್ತಿಯೂ ಇವರದ್ದಾಗಿದೆ. 19 ಟಿ20 ಪಂದ್ಯಗಳಿಂದ 394 ರನ್ ಬಾರಿಸಿದ್ದಾರೆ. ಐಪಿಎಲ್ನಲ್ಲಿಯೂ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ 2728 ರನ್ ಬಾರಿಸಿದ್ದಾರೆ. 2 ಶತಕ ಕೂಡ ಒಳಗೊಂಡಿದೆ.
ಜೂಲನ್ ಗೋಸ್ವಾಮಿಗೆ ವಿಶೇಷ ಗೌರವ
ಭಾರತ ಮಹಿಳಾ ತಂಡದ ದಿಗ್ಗಜ ಆಟಗಾರ್ತಿ, ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಗೌರವಾರ್ಥ ಐತಿಹಾಸಿಕ ಈಡನ್ ಗಾರ್ಡನ್ಸ್‌ನ ‘ಬಿ’ ಬ್ಲಾಕ್‌ಗೆ ಅವರ ಹೆಸರಿಡಲು ಬಂಗಾಲ ಕ್ರಿಕೆಟ್ ಅಸೋಸಿಯೇಶನ್ (ಸಿಎಬಿ) ಪ್ರಸ್ತಾವ ಸಲ್ಲಿಸಿದೆ. ಈ ಬಗ್ಗೆ ಸಿಎಬಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಸಿಎಬಿ ಒಪ್ಪಿಗೆ ಸೂಚಿಸಿದ್ದು ಮುಂದಿನ ವರ್ಷದ ಜನವರಿಯಲ್ಲಿ ನಡೆಯುವ ಭಾರತ- ಇಂಗ್ಲೆಂಡ್ ನಡುವಣ ಟಿ20 ಪಂದ್ಯದ ವೇಳೆ ಹೆಸರನ್ನು ಅನಾವರಣ ಮಾಡಲಾಗುತ್ತದೆ ಎಂದು ಸಿಎಬಿ ತಿಳಿಸಿದೆ.