ನಿಲ್ಲಿಸಿದ ಸ್ಕೂಟಿ ಸೀಟ್ ಕೆಳಗೆ, ಬೈಕ್‍ನ ಎಂಜಿನೊಳಗೆ, ಕಾರಿನ ಸೀಟಿನಡಿಯಲ್ಲಿ ಹಾವುಗಳು(Snake in Train) ಕಂಡುಬಂದಂತಹ ಸಾಕಷ್ಟು ಘಟನೆಗಳು ಈ ಹಿಂದೆ ನಡೆದಿತ್ತು. ಇದೀಗ ಬಿಹಾರದಲ್ಲಿ ವರದಿಯಾದ ಘಟನೆಯಲ್ಲಿ, ಪ್ಯಾಸೆಂಜರ್ ರೈಲಿನ ಎಂಜಿನ್‍ನಲ್ಲಿ ಹಾವೊಂದು ಕಂಡುಬಂದಿತ್ತು. ಲೋಕೋ ಪೈಲಟ್ ಮತ್ತು ಅವರ ಸಹಾಯಕ ಎಂಜಿನ್‍ನಲ್ಲಿ ಹಾವನ್ನು ನೋಡಿದ ನಂತರ ರೈಲು ಬಿಟ್ಟು ಹೊರಗೆ ಓಡಿದ್ದಾರೆ. ಪಾಟ್ನಾ-ಗಯಾ ರೈಲನ್ನು ಚಾಲನೆ ಮಾಡುತ್ತಿದ್ದ ಸಂಜಯ್ ಕುಮಾರ್ ಅವರು ರೈಲಿನ ಎಂಜಿನ್‍ನಲ್ಲಿ ಹಾವನ್ನು ನೋಡಿ ಹೆದರಿ ರೈಲಿನಿಂದ ಜಿಗಿದು ಸುಮಾರು ಒಂದು ಗಂಟೆ ಕಾಲ ತರೆಗ್ನಾ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದರಂತೆ.
ಪಲಮು ಎಕ್ಸ್‌ಪ್ರೆಸ್ ರೈಲು ಬಿಹಾರದ ಹಳಿಗಳ ಮೂಲಕ ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ. ಪಾಟ್ನಾದಿಂದ ಹೊರಟ ರೈಲು ತನ್ನ ಅಂತಿಮ ಗಮ್ಯಸ್ಥಾನ ಬರ್ಕಾಕಾನಾ ಜಂಕ್ಷನ್ ಕಡೆಗೆ ಚಲಿಸುತ್ತಿದ್ದಾಗ ಚಾಲಕ ಕುಮಾರ್ ಎಂಜಿನ್ ಒಳಗೆ ಹಾವನ್ನು ಗಮನಿಸಿದ್ದಾರೆ. ವರದಿಯ ಪ್ರಕಾರ, ಘಟನೆಯ ಬಗ್ಗೆ ತಿಳಿದ ನಂತರ ರೈಲಿನಲ್ಲಿದ್ದ ಪ್ರಯಾಣಿಕರು ಕೂಡ ರೈಲಿನಿಂದ ಕೆಳಗೆ ಇಳಿದಿದ್ದಾರೆ.
ಕುಮಾರ್ ಎಂದಿನಂತೆ ರೈಲನ್ನು ಓಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಎಂಜಿನ್ ಅನ್ನು ನೋಡಿದಾಗ ಅಲ್ಲಿ ಅವರು ಹಾವನ್ನು ಕಂಡು ಒಮ್ಮೆಲೆ ಹೌಹಾರಿದ್ದಾರೆ. ತಕ್ಷಣ ಅವರು ರೈಲಿನಿಂದ ಕೆಳಗೆ ಇಳಿದು ಈ ಪ್ರಕರಣದ ಬಗ್ಗೆ ಹತ್ತಿರದ ಠಾಣೆಗೆ ಮಾಹಿತಿ ನೀಡಿದ್ದಾರೆ. ಮತ್ತು ಲೋಕೋ ಪೈಲಟ್ ಸಹಾಯಕ್ಕಾಗಿ ತರೆಗ್ನಾ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ, ಹಾವನ್ನು ರಕ್ಷಿಸುವವರೆಗೂ ರೈಲನ್ನು ಸ್ವಲ್ಪ ಕಾಲ ನಿಲ್ಲಿಸಬೇಕಾಯಿತು.
ಹಾವನ್ನು ರೈಲಿನಿಂದ ಹೊರಗೆ ಎಳೆಯಲು ಸುಮಾರು ಎರಡು ಗಂಟೆಗಳು ಬೇಕಾಯಿತು. ಈ ಅವಧಿಯಲ್ಲಿ, ರೈಲು ತರೆಗ್ನಾ ನಿಲ್ದಾಣದಲ್ಲೇ ನಿಂತಿತ್ತು ಎಂದು ವರದಿಯಾಗಿದೆ.