ಸಿಡ್ನಿ: ನಾಯಕ ರೋಹಿತ್ ಶರ್ಮ(Rohit Sharma) ಅವರು ಮೊದಲ ಟೆಸ್ಟ್ನ 3ನೇ ದಿನದಾಟದ ವೇಳೆ ಭಾರತ(AUS vs IND) ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ. 2ನೇ ಮಗುವಿನ ಆಗಮನದ ಹಿನ್ನೆಲೆಯಲ್ಲಿ ಆಸೀಸ್ಗೆ ತಡವಾಗಿ ತೆರಳುವುದಾಗಿ ಬಿಸಿಸಿಐಗೆ ಮಾಹಿತಿ ನೀಡಿದ್ದರು. ಹೀಗಾಗಿ ಮೊದಲ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ನಾಯಕನಾಗಿದ್ದಾರೆ. ತಂಡ ಸೇರಲಿರುವ ರೋಹಿತ್ ಮೂರನೇ ದಿನದಾಟದ ವೇಳೆ ಭಾರತ ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ಕಾಣಿಸಲಿದ್ದಾರೆ ಎನ್ನಲಾಗಿದೆ.
ಮೊದಲ ಟೆಸ್ಟ್ ಪಂದ್ಯದ ಬಳಿಕ ಭಾರತ ಹೊನಲು ಬೆಳಕಿನ 2ನೇ ಟೆಸ್ಟ್ ಪಂದ್ಯ ಆಡಲಿದೆ. ಈ ಪಂದ್ಯಕ್ಕೆ 10 ದಿನಗಳ ಬಿಡುವು ಇರಲಿದೆ. ಡಿ.6ರಂದು ಅಡಿಲೇಡ್ನಲ್ಲಿ ಈ ಪಂದ್ಯ ನಡೆಯಲಿದೆ. ಪಂದ್ಯಕ್ಕೂ ಮುನ್ನ ಭಾರತ ತಂಡ ಆಸೀಸ್ ಪ್ರಧಾನ ಮಂತ್ರಿ ಇಲೆವೆನ್ ವಿರುದ್ಧ 3 ದಿನಗಳ ಅಹರ್ನಿಶಿ ಅಭ್ಯಾಸ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ರೋಹಿತ್ ಕಣಕ್ಕಿಳಿಯಲಿದ್ದಾರೆ. ದ್ವಿತೀಯ ಪಂದ್ಯದ ಬಳಿಕ ನಾಯಕತ್ವ ಕೂಡ ರೋಹಿತ್ ಹೆಗಲೇರಲಿದೆ.
ಅಂಪೈರ್ ತೀರ್ಪಿಗೆ ಭಾರೀ ಆಕ್ರೋಶ
ಭಾರತ ಮತ್ತು ಆಸ್ಟ್ರೇಲಿಯಾ(AUS vs IND) ವಿರುದ್ಧ ಒಂದು ಪರ್ತ್ನಲ್ಲಿ ಆರಂಭಗೊಂಡ ಮೊದಲ ಟೆಸ್ಟ್ನ ಮೊದಲ ದಿನವೇ ಅಂಪೈರ್ ತೀರ್ಮಾನವೊಂದು ಹೈಲೈಟ್ ಆಗಿದೆ. ಕೆ.ಎಲ್ ರಾಹುಲ್(KL Rahul) ಅವರಿಗೆ ಮೂರನೇ ಅಂಪೈರ್ ಔಟ್ ನೀಡಿದ್ದು ಇದೀಗ ವಿವಾದಕ್ಕೆ(controversial DRS review) ಕಾರಣವಾಗಿದೆ. ಅಂಪೈರ್ ಈ ಕೆಟ್ಟ ತೀರ್ಪಿನ ವಿರುದ್ಧ ರಾಬಿನ್ ಉತ್ತಪ್ಪ, ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ, ಸಂಜಯ್ ಮಾಂಜ್ರೇಕರ್ ಸೇರಿ ಹಲವರು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಈ ರೀತಿಯ ತಪ್ಪು ನಡೆಯುವುದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.
ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ ತಾಳ್ಮೆಯುತ ಬ್ಯಾಟಿಂಗ್ ನಡೆಸುವ ಮೂಲಕ ಕುಸಿದ ತಂಡಕ್ಕೆ ಆಸರೆಯಾಗಿದ್ದರು. 26 ರನ್ ಗಳಿಸಿದ್ದ ವೇಳೆ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಗ್ಲೌಸ್ ಸೇರಿತು. ಔಟ್ಗಾಗಿ ಆಸೀಸ್ ಆಟಗಾರರು ಮನವಿ ಮಾಡಿದರೂ ಮೈದಾನದ ಅಂಪೈರ್ ನಾಟೌಟ್ ಎಂದರು. ಈ ವೇಳೆ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಡಿಆರ್ಎಸ್ ಮನವಿ ಮಾಡಿದರು. ಟಿವಿ ಅಂಪೈರ್ ಪರಿಶೀಲನೆ ಮಾಡುವಾಗ ಅಲ್ಟ್ರಾ ಎಡ್ಜ್ನಲ್ಲಿ ಕೊಂಚ ಸ್ಪೈಕ್ ಕಾಣಿಸಿತ್ತು. ಆದರೆ ಇಲ್ಲಿ ಬ್ಯಾಟ್ ಚೆಂಡಿಗೆ ಬಡಿಯದೆ, ಪ್ಯಾಡ್ಗೆ ತಾಗಿದ್ದು ಸ್ಪಷ್ಟವಾಗಿತ್ತು. ಬ್ಯಾಟ್ನಿಂದ ಚೆಂಡು ದೂರದಲ್ಲಿ ಸಾಗುತ್ತಿರುವುದು ಗೋಚರಿಸಿದರೂ ಟಿವಿ ಅಂಪೈರ್ ಔಟ್ ತೀರ್ಮಾನ ಪ್ರಕಟಿಸಿದರು.