ಕನ್ನಡ ಕಿರುತೆರೆ: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʼದೃಷ್ಟಿ ಬೊಟ್ಟುʼ (Drushti bottu) ವಿಭಿನ್ನ ಕಥಾ ಹಂದರವನ್ನಿಟ್ಟುಕೊಂಡು ತೆರೆಯ ಮೇಲೆ ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ʼಅಗ್ನಿಸಾಕ್ಷಿʼ ಧಾರಾವಾಹಿ ಖ್ಯಾತಿಯ ವಿಜಯ್ ಸೂರ್ಯ ದತ್ತಾ ಭಾಯ್ ಆಗಿ ಮಿಂಚುತ್ತಿದ್ದರೆ, ತನ್ನ ಸೌಂದರ್ಯವೇ ತನಗೆ ಶಾಪವಾಗಿರುವ ದೃಷ್ಟಿ ಪಾತ್ರವನ್ನು ಮೋಕ್ಷಿತಾ ನಿರ್ವಹಿಸುತ್ತಿದ್ದಾರೆ. ಸುಂದರವಾಗಿರುವ ಹುಡುಗಿಯರೆಂದರೆ ಉರಿದು ಬೀಳುವ ದತ್ತಾ ಯಾವಾಗಲೂ ಸುಂದರವಾಗಿರುವ ಹುಡುಗಿಯರನ್ನು ದ್ವೇಷಿಸುತ್ತಾನೆ. ಆದರೆ ಇದಕ್ಕೆ ಕಾರಣ ಏನು ಎಂಬ ವಿವರಗಳು ಇಷ್ಟು ದಿನ ನೋಡುಗರಿಗೆ ಗೊತ್ತಿರಲಿಲ್ಲ. ಈ ವಾರ ದತ್ತಾ ಭಾಯ್ ಹಳೇ ಲವ್ ಸ್ಟೋರಿ ಅನಾವರಣಗೊಳ್ಳಲಿದ್ದು, ಪ್ರೇಕ್ಷಕರು ದತ್ತಾ ಭಾಯ್ ಸೀಕ್ರೇಟ್ ತಿಳಿಯಲು ಕಾದು (Kannada Serial) ಕುಳಿತಿದ್ದಾರೆ.
ಇತ್ತೀಚಿನ ಎಪಿಸೋಡ್ಗಳಲ್ಲಿ ದತ್ತನಿಗೆ ಅವನ ತಾಯಿ ಅಬ್ಬಕ್ಕ ದೇವಿ ಇಂಪನಾ ಎಂಬ ಹುಡುಗಿಯೊಂದಿಗೆ ಮದುವೆ ಮಾಡಿಸುವ ತಯಾರಿ ನಡೆಸುತ್ತಿದ್ದಾರೆ. ಆದರೆ ಇಂಪನಾ – ತಿಲಕ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದು, ಆಕೆ ಅವನೊಂದಿಗೆ ಓಡಿ ಹೋಗುವ ಯೋಚನೆಯಲ್ಲಿದ್ದಾಳೆ. ಈ ನಡುವೆ ದತ್ತ ಮತ್ತು ದೃಷ್ಟಿ ನಡುವೆ ಯಜಮಾನ ಮತ್ತು ಮನೆ ಕೆಲಸದವಳು ಎಂಬ ರೇಖೆಯನ್ನು ಮೀರಿದ ಭಾಂದವ್ಯ ಮೂಡಿದ್ದು, ಅವರಿಬ್ಬರೂ ಹೆಚ್ಚು ಹತ್ತಿರವಾಗುತ್ತಿದ್ದಾರೆ. ಈ ನಡುವೆ ದತ್ತಾ ತನ್ನ ಬದುಕಿನ ಸೂಕ್ಷ್ಮ ವಿಚಾರಗಳನ್ನು ದೃಷ್ಟಿಯ ಬಳಿ ಹೇಳಿಕೊಳ್ಳುತ್ತಿದ್ದಾನೆ.
ದೃಷ್ಟಿ – ದತ್ತನ ಬಾಂಧವ್ಯ:
ದೃಷ್ಟಿ ಹಾಗೂ ಆಕೆಯ ಕುಟುಂಬವನ್ನು ಇನ್ಸ್ಪೆಕ್ಟರ್ ಉಳ್ಳಾಗಡ್ಡಿಯಿಂದ ಕಾಪಾಡಿದ ನಂತರ ದೃಷ್ಟಿಗೆ ದತ್ತನ ಮೇಲೆ ಹೇಳಲಾಗದ ಭಾವನೆ ಹುಟ್ಟಿಕೊಂಡಿದೆ. ಅವರಿಬ್ಬರೂ ಹೆಚ್ಚು ಹತ್ತಿರವಾಗುತ್ತಿದ್ದು, ಈ ವಾರದ ಸಂಚಿಕೆಯಲ್ಲಿ ದತ್ತ ತಾನೇಕೆ ಸುಂದರವಾದ ಹುಡುಗಿಯರನ್ನು ದ್ವೇಷಿಸುತ್ತೇನೆ ಎಂಬ ರಹಸ್ಯವನ್ನು ದೃಷ್ಟಿಯ ಬಳಿ ಹಂಚಿಕೊಳ್ಳುತ್ತಾನೆ. ತನ್ನ ಹಳೆಯ ಪ್ರೀತಿಯ ಬಗ್ಗೆ, ಅದರ ಸಂಕಟಗಳ ಬಗ್ಗೆ, ಪ್ರೇಮ ವೈಫಲ್ಯ ತನ್ನ ಬದುಕಿನ ದಿಕ್ಕು ಬದಲಾಯಿಸಿದ ಬಗ್ಗೆ, ತಾನು ಯಾಕೆ ಸುಂದರವಾಗಿರುವ ಹುಡುಗಿಯರ ಬಗ್ಗೆ ತಿರಸ್ಕಾರ ಬೆಳೆಸಿಕೊಂಡೆ ಎಂಬುದರ ಬಗ್ಗೆ, ಎಲ್ಲಕ್ಕಿಂತ ಹೆಚ್ಚಾಗಿ ದತ್ತಾತ್ರೇಯ ಪಾಟೀಲ್ ಎಂಬ ಶಾಂತ ಸ್ವಭಾವದ ತಾನು ದತ್ತ ಭಾಯ್ ಆಗಿ ಬದಲಾಗಿ – ರೌಡಿ ಬದುಕನ್ನು ತನ್ನದಾಗಿಸಿಕೊಂಡೆ ಎಂದು ಹೇಳುತ್ತಾನೆ. ಈ ಸೋಮವಾರದಿಂದ ದತ್ತನ ಹಳೆ ಜೀವನ ತೆರೆದು ಕೊಳ್ಳಲಿದೆ.
ಈ ಎಲ್ಲಾ ತಿರುವುಗಳ ನಡುವೆ ದೃಷ್ಟಿ ತನ್ನ ಪ್ರೀತಿಯನ್ನು ದತ್ತನಿಗೆ ತಿಳಿಸುತ್ತಾಳಾ? ಇಲ್ಲಾ ದತ್ತ ತಾಯಿ ಮೆಚ್ಚಿದ ಇಂಪನಾಳನ್ನು ಮದುವೆ ಆಗ್ತಾನಾ? ದತ್ತನ ಬದುಕನ್ನು ನಾಶ ಮಾಡಬೇಕು ಅಂದು ಕೋಂಡಿರುವ ಅಕ್ಕ ಶರಾವತಿ ಫ್ಲಾನ್ ಸಕ್ಸ್ಸ್ ಆಗುತ್ತಾ ? ದತ್ತನ ಹಳೆ ಹುಡುಗಿ ಯಾರು , ಎಲ್ಲಿದ್ದಾಳೆ ಎಂಬ ಪ್ರಶ್ನೆಗಳಿಗೆ ಉತ್ತರ ಈ ವಾರ ಸಿಗಲಿದೆ.
ಇದನ್ನೂ ಓದಿ : Richest Television Star: ಕಿರುತೆರೆ ಶ್ರೀಮಂತ ಸ್ಟಾರ್ ಇವರೇ! ಈ ಸೆಲೆಬ್ರಿಟಿಯ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ