ಪರ್ತ್: ಆಸ್ಟ್ರೇಲಿಯಾ(IND vs AUS) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಕಳಪೆ ಬ್ಯಾಟಿಂಗ್ ನಡೆಸಿದ ಭಾರತ ತಂಡ ಭರ್ತಿ 150 ರನ್ಗೆ ಕುಸಿದಿದೆ. ಆಸೀಸ್ ವೇಗಿಗಳಾದ ಜೋಶ್ ಹ್ಯಾಜಲ್ವುಡ್(4), ಮಿಚೆಲ್ ಸ್ಟಾರ್ಕ್(2) ಮತ್ತು ಪ್ಯಾಟ್ ಕಮಿನ್ಸ್(2) ಜಿದ್ದಿಗೆ ಬಿದ್ದವರಂತೆ ಬೌಲಿಂಗ್ ದಾಳಿ ನಡೆಸಿ ಭಾರತೀಯ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಯಶಸ್ಸು ಕಂಡರು.
ಭಾರತದ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದವರೆಂದರೆ, ರಾಹುಲ್(26), ರಿಷಭ್ ಪಂತ್(37) ಮತ್ತು ಪದಾರ್ಪಣ ಪಂದ್ಯವನ್ನಾಡಿದ ನಿತೀಶ್ ಕುಮಾರ್ ರೆಡ್ಡಿ ಮಾತ್ರ. ಉಳಿದ ಬ್ಯಾಟರ್ಗಳು ಸಂಪೂರ್ಣ ವಿಫಲರಾದರು. ಯಶಸ್ವಿ ಜೈಸ್ವಾಲ್ ಮತ್ತು ಕರ್ನಾಟಕದ ಬ್ಯಾಟರ್ ದೇವದತ್ತ ಪಡಿಕ್ಕಲ್ ಶೂನ್ಯ ಸಂಕಟ ಎದುರಿಸಿದರು. ಅದರಲ್ಲೂ ಪಡಿಕ್ಕಲ್ 23 ಎಸೆತ ಎದುರಿಸಿ ಒಂದೂ ರನ್ ಗಳಿಸಲು ಸಾಧ್ಯವಾಗದ ಕಾರಣ ಅವರನ್ನು ನೆಟ್ಟಿಗರು ಟ್ರೋಲ್ ಕೂಡ ಮಾಡಲಾರಂಭಿಸಿದ್ದಾರೆ. ಶುಭಮನ್ ಗಿಲ್ ಬೆರಳಿನ ಗಾಯದಿಂದ ಅಲಭ್ಯರಾದ ಕಾರಣ ಪಡಿಕ್ಕಲ್ ಆಡುವ ಅವಕಾಶ ಪಡೆದಿದ್ದರು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದರು.
ತವರಿನ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲೂ ತಮ್ಮ ವೈಫಲ್ಯವನ್ನು ಮುಂದುವರಿಸಿದರು. ಕೇವಲ 5 ರನ್ಗೆ ವಿಕೆಟ್ ಕಳೆದುಕೊಂಡರು. ಧ್ರುವ್ ಜುರೆಲ್ 11 ರನ್ಗೆ ವಿಕೆಟ್ ಕಳೆದುಕೊಂಡರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಆಸೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ತಾಳ್ಮೆಯಿಂದ ಬ್ಯಾಟಿಂಗ್ ನಡೆಸುತ್ತಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಮೂರನೇ ಅಂಪೈರ್ ಔಟ್ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. 74 ಎಸೆತ ಎದುರಿಸಿದ ರಾಹುಲ್ 26 ರನ್ ಗಳಿಸಿದರು. ಕೆಟ್ಟ ತೀರ್ಪಿನ ವಿರುದ್ಧ ರಾಬಿನ್ ಉತ್ತಪ್ಪ, ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ, ಸಂಜಯ್ ಮಾಂಜ್ರೇಕರ್ ಸೇರಿ ಹಲವರು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಪಂತ್-ನಿತೀಶ್ ಆಸರೆ
ರಾಹುಲ್ ವಿಕೆಟ್ ಪತನ ಬಳಿಕ 7ನೇ ವಿಕೆಟ್ಗೆ ಜತೆಯಾದ ರಿಷಭ್ ಪಂತ್ ಮತ್ತು ಚೊಚ್ಚಲ ಪಂದ್ಯವನ್ನಾಡುತ್ತಿರುವ ನಿತೀಶ್ ರೆಡ್ಡಿ ಸಣ್ಣ ಬ್ಯಾಟಿಂಗ್ ಹೋರಾಟವೊಂದನ್ನು ನಡೆಸಿ 48 ರನ್ ಒಟ್ಟುಗೂಡಿಸಿದರು. ಪಂತ್ ವಿಕೆಟ್ ಬಿದ್ದೊಡನೆ ಮತ್ತೆ ಭಾರತ ಕುಸಿತ ಕಂಡಿತು. ಅಂತಿಮವಾಗಿ ಪಂತ್ 37 ರನ್ ಬಾರಿಸಿದರೆ, ನಿತೀಶ್ ರೆಡ್ಡಿ 41 ರನ್ ಬಾರಿಸಿದರು. ನಿತೀಶ್ ಅವರದ್ದೇ ತಂಡದ ಪರ ದಾಖಲಾದ ಗರಿಷ್ಠ ಮೊತ್ತ.
ಆಸ್ಟ್ರೇಲಿಯಾ ಪರ ಜೋಶ್ ಹ್ಯಾಜಲ್ವುಡ್ 29 ರನ್ಗೆ 4 ವಿಕೆಟ್ ಕಿತ್ತರೆ, ನಾಯಕ ಪ್ಯಾಟ್ ಕಮಿನ್, ಮಿಚೆಲ್ ಸ್ಟಾರ್ಕ್ ಮತ್ತು ಆಲ್ರೌಂಡರ್ ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಪಡೆದರು. ಎಲ್ಲ ವಿಕೆಟ್ಗಳು ವೇಗಿಗಳ ಪಾಲಾಯಿತು.