Friday, 22nd November 2024

DK Shivakumar: ಕರಾವಳಿ ಜನರ ವಲಸೆ ತಪ್ಪಿಸಲು ವಿಶೇಷ ಯೋಜನೆ

DK Shivakumar

ಮುರುಡೇಶ್ವರ: ಈ ಹಿಂದೆ ಮೀನುಗಾರರಿಗೆ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಹಾನಿಯಾದರೆ ಪರಿಹಾರವಾಗಿ 6 ಲಕ್ಷ ರೂ. ನೀಡಲಾಗುತ್ತಿತ್ತು. ನಮ್ಮ ಸರ್ಕಾರ ರೂ. 8 ಲಕ್ಷಕ್ಕೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ರೂ. 10 ಲಕ್ಷಕ್ಕೆ ಏರಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಘೋಷಣೆ ಮಾಡಿದರು. ಮುರುಡೇಶ್ವರದಲ್ಲಿ ನಡೆದ ವಿಶ್ವ ಮೀನುಗಾರಿಕೆ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ವರ್ಷ ಮೀನುಗಾರರಿಗಾಗಿ 10 ಸಾವಿರ ಮನೆಗಳನ್ನು ನೀಡಲು ತೀರ್ಮಾನ ಮಾಡಿದ್ದೇವೆ. ಮಂಗಳೂರಿನಲ್ಲಿ 49 ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕೆ ಬಂದರು ಕಾಮಗಾರಿ ಪೂರ್ಣಗೊಂಡಿದೆ. ಸಮೀಕ್ಷೆ ಪ್ರಕಾರ 99% ಮೀನುಗಾರರು ಆರ್ಥಿಕವಾಗಿ ಹಿಂದುಳಿದಿದ್ದು, ಈ ಮೀನುಗಾರರ ರಕ್ಷಣೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಮೀನು ಮಾರಾಟ ಮಾಡಲು ತ್ರಿಚಕ್ರ ಎಲೆಕ್ಟ್ರಿಕ್ ವಾಹನ ಹಂಚಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Bengaluru News: ಭಾರತೀಯ ಮಾಧ್ಯಮದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ; ಡಾ. ಕೆ.ಪಿ. ಅಶ್ವಿನಿ ವಿಷಾದ

ಪ್ರವಾಸೋದ್ಯಮ ನೀತಿಯಲ್ಲಿ ಕರಾವಳಿಗೆ ವಿಶೇಷ ಆದ್ಯತೆ

ಈ ಕರಾವಳಿ ಭಾಗದಲ್ಲಿ ನೂತನ ಪ್ರವಾಸೋದ್ಯಮ ನೀತಿ ರೂಪಿಸಬೇಕು ಎಂದು ಸಚಿವ ಎಚ್.ಕೆ ಪಾಟೀಲ್ ಅವರಿಗೆ ಸಚಿವ ಸಂಪುಟ ಸಭೆಯಲ್ಲಿ ತಿಳಿಸಿದ್ದೇವೆ. ನೂತನ ಪ್ರವಾಸೋದ್ಯಮ ನೀತಿಯಲ್ಲಿ ಮಂಗಳೂರಿನಿಂದ ಕಾರವಾರದವರೆಗೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಲಹೆಗಳನ್ನು ಪಡೆದಿದ್ದೇವೆ. ಈ ಭಾಗದಲ್ಲಿ ಪಂಚತಾರಾ ಹೋಟೆಲ್‌ಗಳಿಲ್ಲ. ಈ ಬಗ್ಗೆಯೂ ಗಮನ ಹರಿಸಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಮ್ಮ ಕಾರ್ಯಕ್ರಮ ಜಾರಿ ಮಾಡುತ್ತೇವೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು. ಇಲ್ಲಿನ ಬಂದರುಗಳ ಅಭಿವೃದ್ಧಿ ಮಾಡಲಾಗುವುದು. ಕರಾವಳಿ ಭಾಗ ನಮ್ಮ ರಾಜ್ಯದ ಶಕ್ತಿ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ನೊಬೆಲ್ ಪ್ರಶಸ್ತಿ ವಿಜೇತ ಮೊಹಮದ್ ಯೂನಿಸ್ ಅವರು ಒಂದು ಮಾತು ಹೇಳಿದ್ದಾರೆ. ಒಬ್ಬ ವ್ಯಕ್ತಿಗೆ ಮೀನು ಕೊಟ್ಟರೆ ಅದು ಆತನಿಗೆ ಒಂದು ಹೊತ್ತಿನ ಊಟಕ್ಕೆ ಸಮ. ಆದರೆ ಅದೇ ವ್ಯಕ್ತಿಗೆ ಮೀನುಗಾರಿಕೆ ಹೇಳಿಕೊಟ್ಟರೆ ಅದು ಅವನ ಬದುಕಿಗೆ ಊಟ ಕಲ್ಪಿಸಿಕೊಡುವುದಕ್ಕೆ ಸಮ ಎಂದು. ಅದೇ ರೀತಿ ನಮ್ಮ ಸರ್ಕಾರ ಮೀನುಗಾರರ ಬದುಕು ಬದಲಾಯಿಸಿ, ಅವರ ಕಾಲ ಮೇಲೆ ಅವರು ಸ್ವಾವಲಂಬನೆ ಬದುಕುವಂತೆ ಮಾಡಲು ಕಾರ್ಯಕ್ರಮ ರೂಪಿಸುತ್ತಿದೆ. ಮೀನುಗಾರರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಬೆಲೆ ಏರಿಕೆ ಸಮಸ್ಯೆಗೆ ಗ್ಯಾರಂಟಿ ಯೋಜನೆಗಳಿಂದ ಪರಿಹಾರ

ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದ ಬಡ, ಮಧ್ಯಮ ವರ್ಗದ ಜನರ ಸಂಕಷ್ಟಕ್ಕೆ ಸ್ಪಂದಿಸಲು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಬಿಜೆಪಿ ಸ್ನೇಹಿತರು ಈ ಯೋಜನೆ ಬಗ್ಗೆ ಟೀಕೆ, ಅಪಪ್ರಚಾರ ಮಾಡುತ್ತಿದ್ದಾರೆ. ಆದರೂ ಮಧ್ಯಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ನಮ್ಮ ಮಾದರಿಯಲ್ಲಿ ಬಿಜೆಪಿ ಸರ್ಕಾರಗಳು ಯೋಜನೆ ರೂಪಿಸುತ್ತಿವೆ. ಆ ಮೂಲಕ ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ ಎಂದು ಬಿಜೆಪಿಯವರಿಗೂ ಅರ್ಥವಾಗಿದೆ. ನಮ್ಮ ಸರ್ಕಾರ 2 ಸಾವಿರ, ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 10 ಕೆ.ಜಿ ಅಕ್ಕಿ, ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುತ್ತಿದೆ. ಎಲ್ಲಾ ಪಕ್ಷದವರಿಗೂ ಈ ಯೋಜನೆ ಜಾರಿ ಮಾಡಿದ್ದೇವೆ. ಇದಕ್ಕಾಗಿ 56 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಇದರಿಂದ ಬಡ ಕುಟುಂಬಕ್ಕೆ ವಾರ್ಷಿಕವಾಗಿ ಸರಾಸರಿ 50 ಸಾವಿರದಷ್ಟು ಉಳಿತಾಯ ಮಾಡಲು ಮುಂದಾಗಿದೆ. ಆ ಮೂಲಕ ದೇಶಕ್ಕೆ ಕರ್ನಾಟಕ ಮಾದರಿ ಪರಿಚಯಿಸಿದ್ದೇವೆ ಎಂದರು.

ಹಂತಹಂತವಾಗಿ ಕಾರ್ಯಕ್ರಮಗಳು ಜಾರಿ

ಕರಾವಳಿ ಭಾಗದಲ್ಲಿ ಉತ್ತಮ ಪರಿಸರ, ಸಮುದ್ರ, ಕೌಶಲ್ಯಯುತ ಮಾನವ ಸಂಪನ್ಮೂಲವಿದ್ದು, ಈ ಭಾಗದ ಜನ ಉದ್ಯೋಗ ಅರಸಿ ಬೇರೆ ಕಡೆ ವಲಸೆ ಹೋಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಮುರುಡೇಶ್ವರದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಮೀನುಗಾರರು ಸೇರಿದಂತೆ ಕರಾವಳಿ ಭಾಗದ ಎಲ್ಲಾ ವರ್ಗದವರು ಉದ್ಯೋಗ ಹುಡುಕಿಕೊಂಡು ಬೇರೆ ರಾಜ್ಯ ಹಾಗೂ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿ ಉತ್ತಮ ಆಸ್ತಿ ಹೊಂದಿದ್ದರೂ ಅದನ್ನು ಮಾರಿಕೊಂಡು ಹೋಗುತ್ತಿದ್ದಾರೆ. ಈ ಭಾಗದಲ್ಲಿ ಅತ್ಯುತ್ತಮವಾದ ಸಂಪನ್ಮೂಲಗಳಿವೆ. ವಲಸೆ ತಪ್ಪಿಸಿ ಈ ಭಾಗದಲ್ಲೇ ಈ ಜನ ಬದುಕು ಕಟ್ಟಿಕೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದ್ದೇವೆ ಎಂದು ತಿಳಿಸಿದರು.

ಈ ವರ್ಷ 100 ಕಡೆ ಕಾಂಗ್ರೆಸ್ ಕಚೇರಿ

ನಮ್ಮ ಸರ್ಕಾರ ಇರುವಾಗಲೇ ಆದಷ್ಟು ಬೇಗ ಕಾಂಗ್ರೆಸ್ ಕಚೇರಿ ಕಟ್ಟಿಕೊಳ್ಳಿ ಸಧ್ಯದ ಪರಿಸ್ಥಿತಿ ನೋಡಿದರೆ ದುಃಖವಾಗುತ್ತಿದೆ ಎಂಬ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರ ಹೇಳಿಕೆ ಹಿಂದೆ ಬೇರೆ ಲೆಕ್ಕಾಚಾರ ಇದೆ. ಬಿಜೆಪಿ ಅವಧಿಯಲ್ಲಿ ಅವರಿಗೆ ಬೇಕಾದ ಸಂಸ್ಥೆಗಳಿಗೆ ಬೇಕಾದ ರೀತಿಯಲ್ಲಿ ಕಚೇರಿ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಈ ವರ್ಷ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನಡೆಸಿದ ಬೆಳಗಾವಿ ಅಧಿವೇಶನಕ್ಕೆ ಶತಮಾನೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನೂರು ಕಡೆಗಳಲ್ಲಿ ಪಕ್ಷದ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈ ವಿಚಾರವಾಗಿ ಪರಮೇಶ್ವರ್ ಅವರು ಮಾತನಾಡಿದ್ದಾರೆ ಎಂದು ತಿಳಿಸಿದರು.

ತಪ್ಪು ಮುಚ್ಚಿಕೊಳ್ಳಲು ನಮ್ಮ ಶಾಸಕರ ಮೇಲೆ ಆರೋಪ

ಕಾಂಗ್ರೆಸ್ ಶಾಸಕರೇ ತಮಗೆ ಹಣ ನೀಡುವಂತೆ ಸಿಎಂ ಬಳಿ ಬೇಡಿಕೆ ಇಡುತ್ತಿದ್ದಾರೆ ಎಂಬ ವಿಜಯೇಂದ್ರ ಅವರ ಆರೋಪದ ಬಗ್ಗೆ ಕೇಳಿದಾಗ, ವಿಜಯೇಂದ್ರ ಅವರು ತಮ್ಮ ಲೋಪ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಯತ್ನಾಳ್ ಅವರು ಸರ್ಕಾರ ಕೆಡವಿ ಸಿಎಂ ಆಗಲು ಒಂದು ಸಾವಿರ ಕೋಟಿ ಸಿದ್ಧಮಾಡಿಕೊಂಡಿದ್ದಾರೆ ಎಂದು ನೀಡಿರುವ ಹೇಳಿಕೆ ಬಗ್ಗೆ ಮಾತನಾಡಿಲ್ಲ. ವಿಜಯೇಂದ್ರ ಅವರು ತಮ್ಮದೇ ಕೇಂದ್ರ ಗೃಹಮಂತ್ರಿಗೆ ಪತ್ರ ಬರೆದು ಈ ಬಗ್ಗೆ ಇಡಿ, ಸಿಬಿಐನಿಂದ ತನಿಖೆ ಮಾಡಿಸಲಿ. ಇದೆಲ್ಲವನ್ನು ಮುಚ್ಚಿಕೊಳ್ಳಲು ವಿಜಯೇಂದ್ರ ಈ ರೀತಿ ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Heart Transplant Surgery: ಕೇವಲ 14 ತಿಂಗಳ ಕಂದಮ್ಮನಿಗೆ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ!

ವಿರೋಧ ಪಕ್ಷಗಳಿಂದ ನಮ್ಮ ಕಾರ್ಯಕ್ರಮದ ಬಗ್ಗೆ ಪ್ರಚಾರ

ಸರ್ಕಾರದಲ್ಲಿ ಹಣವಿಲ್ಲದೆ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ, ಯಾವುದೇ ಬಿಪಿಎಲ್, ಎಪಿಎಲ್ ಕಾರ್ಡ್ ರದ್ದು ಮಾಡಿಲ್ಲ. ಇನ್ನು ಎಂಟೂವರೆ ವರ್ಷ ನಮ್ಮ ಸರ್ಕಾರ ಆಡಳಿತ ಮಾಡಲಿದೆ. ಬಿಜೆಪಿಯವರು ಪ್ರತಿಭಟನೆ ಮಾಡಿ, ನಮ್ಮ ಸರ್ಕಾರ ಬಡವರಿಗೆ ಮಾಡುತ್ತಿರುವ ಸಹಾಯದ ಬಗ್ಗೆ ಪ್ರಚಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.