ಡೆಹ್ರಾಡೂನ್: ಉತ್ತರಾಖಂಡ (Uttarakhand) ರಾಜ್ಯದ ಚಮೋಲಿ (Chamoli) ಜಿಲ್ಲೆಯಲ್ಲಿರುವ ಬದರಿನಾಥ ಹಿಂದುಗಳ ಅತಿ ಪ್ರಮುಖ ತೀರ್ಥಯಾತ್ರಾ (Badrinath Pilgrimage) ಕ್ಷೇತ್ರವಾಗಿದೆ. ಚಾರ್ ಧಾಮ್ ಗಳಲ್ಲಿ (Char Dham) ಒಂದಾಗಿರುವ ಬದರಿನಾಥವು ಗಢ್ವಾಲ್ ಹಿಮಾಲಯದಲ್ಲಿ (Garhwal Himalayas) ಅಲಕನಂದಾ (Alakananda) ನದಿ ದಂಡೆಯ ಮೇಲೆ ನರ ಮತ್ತು ನಾರಾಯಣ ಪರ್ವತಗಳ ನಡುವೆ ಇದೆ.
ಬದರಿನಾಥ ಕ್ಷೇತ್ರವು ವರ್ಷದಲ್ಲಿ ಆರು ತಿಂಗಳ ಕಾಲ ಮಾತ್ರ ಭಕ್ತರಿಗಾಗಿ ತೆರೆದಿರುತ್ತದೆ. ಉಳಿದ ಸಮಯ ಇದು ಪೂರ್ಣವಾಗಿ ಹಿಮದಲ್ಲಿ ಮುಚ್ಚಿರುತ್ತದೆ. ಬದರಿನಾಥ ಧಾಮದ ಬಾಗಿಲುಗಳು ತೆರೆದುಕೊಳ್ಳುತ್ತಿದ್ದಂತೆ ತೀರ್ಥಯಾತ್ರೆಯು ಪ್ರಾರಂಭವಾಗುತ್ತದೆ. ಈ ವೇಳೆ ನೂರಾರು ಸಾಧುಗಳು ಪಟ್ಟಣಕ್ಕೆ ಬರುತ್ತಾರೆ. ಭಕ್ತರು ನೀಡುವ ಭಕ್ತಿ, ಗೌರವದಿಂದ ಸಮರ್ಪಿಸುವ ಹಣ, ಬಟ್ಟೆ, ಉಡುಗೊರೆಗಳನ್ನು ದಕ್ಷಿಣೆಯಾಗಿ ಸ್ವೀಕರಿಸುತ್ತಾರೆ.
ಸುಮಾರು ಆರು ತಿಂಗಳ ಕಾಲ ಇಲ್ಲಿ ವಾಸ ಮಾಡುವ ಸಂತರು, ಋಷಿಗಳು ಬದರಿನಾಥ ಧಾಮದ ಮೆಟ್ಟಿಲುಗಳಿಂದ ವಿಜಯಲಕ್ಷ್ಮಿ ಚೌಕದವರೆಗೆ ವಿಸ್ತರಿಸಿರುವ ಆಸ್ತಾ ಪಥದಲ್ಲಿ ಕುಳಿತು ಭಕ್ತರಿಂದ ಭಿಕ್ಷೆ ಸಂಗ್ರಹಿಸುತ್ತಾರೆ. ಹೆಚ್ಚಿನವರು ಈ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿಗಳ ವರೆಗೆ ಸಂಪಾದಿಸುತ್ತಾರೆ. ಬದರಿನಾಥದ ಪಾಂಡ ಪಂಚಾಯತ್ ಅಧ್ಯಕ್ಷ ಪ್ರವೀಣ್ ಧ್ಯಾನಿ ಪ್ರಕಾರ, ಯಾತ್ರಾ ಋತುವಿನಲ್ಲಿ ಅನೇಕ ಸಾಧುಗಳು ಲಕ್ಷ ರೂ. ವರೆಗೆ ಹಣವನ್ನು ಭಿಕ್ಷೆಯಿಂದಲೇ ಪಡೆಯುತ್ತಾರೆ. ಇದನ್ನು ಕೆಲವರು ತಮ್ಮ ವಿಶ್ವಾಸಾರ್ಹ ಸಹವರ್ತಿಗಳ ಬಳಿ ಠೇವಣಿ ಮಾಡುತ್ತಾರೆ. ಇನ್ನು ಕೆಲವರು ಧಾಮ್‌ನ ಬಾಗಿಲು ಮುಚ್ಚುವವರೆಗೆ ಹಣವನ್ನು ತಮ್ಮಲ್ಲೇ ಇಟ್ಟುಕೊಂಡಿರುತ್ತಾರೆ.
ಕೆಲವು ಭಕ್ತರು ಇವರಿಗೆ ಉದಾರವಾಗಿ ಭಿಕ್ಷೆಯನ್ನು ನೀಡುತ್ತಾರೆ. ಅವರು ನೀಡುವ ಭಿಕ್ಷೆಯು ಅವರ ಪಾಪಗಳಿಂದ ಮುಕ್ತರನ್ನಾಗಿಸುತ್ತದೆ ಎನ್ನುವ ನಂಬಿಕೆ ಇದೆ. ಭಗವಾನ್ ವಿಷ್ಣುವು ಇಲ್ಲಿ ಧ್ಯಾನಸ್ಥ ಭಂಗಿಯಲ್ಲಿದ್ದು, ಹೀಗಾಗಿ ಇಲ್ಲಿ ಧ್ಯಾನ ಮತ್ತು ದಾನವು ಅಪಾರ ಮಹತ್ವವನ್ನು ಹೊಂದಿದೆ ಎನ್ನುತ್ತಾರೆ ಧ್ಯಾನಿ.
ಬದರಿನಾಥ ಯಾತ್ರೆ ಮುಕ್ತಾಯವಾದಾಗ ಸಾಧುಗಳು ತಮ್ಮ ಗಳಿಕೆಯನ್ನು ಹೊತ್ತುಕೊಂಡು ತಮ್ಮ ಆಶ್ರಮ ಅಥವಾ ಬಯಲು ಸೀಮೆಯ ಹಳ್ಳಿಗಳಿಗೆ ಹೋಗುತ್ತಾರೆ. ಕೆಲವರು ತಮ್ಮ ವೈಯಕ್ತಿಕ ಅಗತ್ಯಗಳಿಗಾಗಿ ಅಥವಾ ಆಫ್ ಸೀಸನ್‌ನಲ್ಲಿ ತಮ್ಮ ವೈಯಕ್ತಿಕ ಖರ್ಚಿಗಾಗಿ ಆ ಹಣವನ್ನು ಬಳಸಿದರೆ, ಇನ್ನು ಕೆಲವರು ಅದನ್ನು ತಮ್ಮ ಸ್ಥಳೀಯ ಹಳ್ಳಿಗಳಲ್ಲಿ ಆಸ್ತಿ ಅಥವಾ ಕೃಷಿ ಭೂಮಿಯಲ್ಲಿ ಹೂಡಿಕೆ ಮಾಡುತ್ತಾರೆ.
ಈ ಪ್ರದೇಶದಲ್ಲಿ ಸಾಧುಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಭಕ್ತರು ನೀಡುವ ದೇಣಿಗೆಯಿಂದಲೇ ಅವರು ಆರ್ಥಿಕವಾಗಿ ಲಾಭ ಪಡೆಯುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯ ಅಧಿಕಾರಿಯೊಬ್ಬರು. ಇಲ್ಲಿಗೆ ಬರುವ ಸಾಧುಗಳಲ್ಲಿ ಹೆಚ್ಚಿನವರು ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಿಂದ ಬಂದವರು. ಬಾಲ್ಯದಲ್ಲೇ ಪ್ರಾಪಂಚಿಕ ಜೀವನವನ್ನು ತ್ಯಜಿಸಿ ಹಿಮಾಲಯಕ್ಕೆ ತೆರಳಿ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ದಶಕಗಳಿಂದ ಅವರು ದೂರದ ಹಳ್ಳಿ, ಪಟ್ಟಣಗಳಲ್ಲಿ ಸಂಚರಿಸಿರುತ್ತಾರೆ. ಬದರಿನಾಥ ಮತ್ತು ಕೇದಾರನಾಥದ ಪೂಜ್ಯ ದೇವಾಲಯಗಳಿಗೆ ಆಗಮಿಸುವ ಮೊದಲು ಧರ್ಮಗ್ರಂಥ ಮತ್ತು ಧ್ಯಾನ ಅಭ್ಯಾಸಗಳನ್ನು ಕಲಿತಿರುತ್ತಾರೆ.
ಇವರಲ್ಲಿ ಕೆಲವರು ಈಗ ಬ್ಯಾಂಕ್ ಖಾತೆ, ಮೊಬೈಲ್ ಫೋನ್ ಮತ್ತು ವಾಹನಗಳನ್ನು ಹೊಂದಿದ್ದಾರೆ. ಕೆಲವರು ತಮ್ಮ ಸ್ಥಳೀಯ ಹಳ್ಳಿಗಳಲ್ಲಿ ಸಣ್ಣ ಆಶ್ರಮಗಳನ್ನು ನಿರ್ಮಿಸಲು ತಮ್ಮ ಗಳಿಕೆಯನ್ನು ಬಳಸಿದ್ದಾರೆ. ಕುತೂಹಲವೆಂದರೆ ಕೆಲವು ಸಾಧುಗಳು ತಮ್ಮ ಸ್ಥಳೀಯ ಹಳ್ಳಿಗಳಲ್ಲಿ ಆಸ್ತಿಯನ್ನು ಖರೀದಿಸಲು ಈ ಹಣವನ್ನು ಬಳಸುತ್ತಾರೆ. ಅಂತಹ ಒಬ್ಬ ಸಾಧು ಸ್ವಾಮಿ ರಮಾನಂದ್. ಅವರು ಹರೆಯದಲ್ಲಿ ಪಂಜಾಬ್‌ನ ತಮ್ಮ ಹಳ್ಳಿಯನ್ನು ತೊರೆದಿದ್ದರು. ಕೆಲವು ಸಾಧುಗಳಿಗೆ ಈ ಹಣ ಅವರ ತೀರ್ಥಯಾತ್ರೆಯ ಸಮಯದಲ್ಲಿ ಬಳಕೆಯಾಗುತ್ತದೆ ಎನ್ನುತ್ತಾರೆ ಬದರಿನಾಥದ ಸ್ಥಳೀಯರೊಬ್ಬರು.
ರಾಜಸ್ಥಾನದ ಸಾಧು ಸ್ವಾಮಿ ಹರಿ ಓಂ ಅವರು ತಮ್ಮ ಕಥೆಯನ್ನು ಹೇಳಿಕೊಳ್ಳುವುದು ಹೀಗೆ.. ನಾನು 12 ವರ್ಷದವನಾಗಿದ್ದಾಗ ನನ್ನ ಮನೆಯನ್ನು ತೊರೆದಿದ್ದೇನೆ. ಬದರಿನಾಥಕ್ಕೆ ಬರುವ ಮೊದಲು ಮಥುರಾ, ವಾರಣಾಸಿ ಮತ್ತು ಹರಿದ್ವಾರದಲ್ಲಿ ಅಲೆದಾಡಿದೆ. ನನಗೆ ಹೆಚ್ಚು ಹಣದ ಅಗತ್ಯವಿಲ್ಲ. ಧ್ಯಾನ ಮಾಡಲು ಒಂದು ಸ್ಥಳ, ಬದುಕಲು ಆಹಾರ ಇಷ್ಟಿದ್ದರೆ ಸಾಕು. ಬದರಿನಾಥ ಧಾಮವನ್ನು ಮುಚ್ಚಿದಾಗ ಕಠಿಣ ಚಳಿಗಾಲವನ್ನು ಎದುರಿಸಲು ಇಲ್ಲಿ ಸಂಗ್ರಹವಾಗುವ ಹಣ ಸಹಾಯ ಮಾಡುತ್ತದೆ.
ಕೆಲವು ಸಾಧುಗಳು ತಮ್ಮ ಗಳಿಕೆಯನ್ನು ತಮ್ಮ ಸ್ಥಳೀಯ ಹಳ್ಳಿಗಳಲ್ಲಿ ಆಸ್ತಿಯಲ್ಲಿ ಹೂಡಿಕೆ ಮಾಡಲು ಬಳಸುತ್ತಾರೆ. ಎಲ್ಲಾ ಸಂತರು ಗುಹೆಗಳಲ್ಲಿ ವಾಸಿಸುವುದಿಲ್ಲ ಎನ್ನುತ್ತಾರೆ ಸ್ವಾಮಿ ಹರಿ ಓಂ. ಸಾಧುಗಳೆಂದರೆ ತ್ಯಾಗ ಎನ್ನುವ ನಂಬಿಕೆ ಇದೆ. ಆದರೆ ಇವರ ಸಂಪತ್ತಿನ ಕ್ರೋಢೀಕರಣ ಅನೇಕ ಯಾತ್ರಿಕರಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ನಾವೂ ಮನುಷ್ಯರು. ನಮ್ಮ ವೃದ್ಧಾಪ್ಯಕ್ಕಾಗಿ ನಾವು ಗುಡಿಸಲು ಕಟ್ಟಲು ಒಂದು ಸಣ್ಣ ಭೂಮಿಯನ್ನು ಖರೀದಿಸಿದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುತ್ತಾರೆ ಅವರು.
ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಇಲ್ಲಿನ ದೇವಾಲಯಗಳು ತಮ್ಮ ಬಾಗಿಲು ಮುಚ್ಚುತ್ತವೆ. ಸಾಧುಗಳು ಸದ್ದಿಲ್ಲದೆ ಚದುರಿಹೋಗುತ್ತಾರೆ. ಕೆಲವರು ದೂರದ ಗುಹೆ, ಗುಡಿಸಲುಗಳಿಗೆ ತೆರಳುತ್ತಾರೆ. ಇನ್ನು ಕೆಲವರು ಬಯಲು ಪ್ರದೇಶಗಳಿಗೆ ಹೋಗುತ್ತಾರೆ. ಆಗ ಅವರ ಚೀಲಗಳು ನಾಣ್ಯ, ನೋಟುಗಳಿಂದ ತುಂಬಿರುತ್ತದೆ. ಸಾಧುಗಳ ಜೀವನ ಆಧ್ಯಾತ್ಮಿಕ ಪಯಣದಲ್ಲಿ ಬದುಕುವ ಹೋರಾಟವಾಗಿ ಮುಂದುವರಿದಿದೆ.