Friday, 22nd November 2024

Gyanvapi case: ಜ್ಞಾನವಾಪಿ ಮಸೀದಿಯೊಳಗೆ ಶಿವಲಿಂಗ ಪತ್ತೆ ವಿಚಾರ; 14 ದಿನಗಳ ಗಡುವು.. ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ

gyanvapi

ನವದೆಹಲಿ: ಕಾಶಿ ವಿಶ್ವನಾಥ ಜ್ಞಾನವಾಪಿ ಮಸೀದಿ ವಿವಾದ ಪ್ರಕರಣ(Gyanvapi case)ಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌(Supreme Court) ಮಹತ್ವದ ಆದೇಶವನ್ನು ಹೊರಡಿಸಿದೆ. ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ. ಹಿಂದೂ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಸೂಚನೆ ನೀಡಲಾಗಿದೆ.

ಶಿವಲಿಂಗ ಸಿಕ್ಕಿದ್ದ ಕಾರಣಕ್ಕೆ ಅಲ್ಲಿ ಉತ್ಖನನ ನಡೆಸಬೇಕೆಂದು ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಜ್ಞಾನವಾಪಿ ನಿರ್ವಹಣಾ ಸಮಿತಿ ಹಾಗೂ ಭಾರತೀಯ ಪುರಾತತ್ವ ಇಲಾಖೆಗೆ ನೋಟೀಸ್‌ ನೀಡಿದೆ. ಆ ಪ್ರಕಾರ 14ದಿನಗಳೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಆದೇಶ ಹೊರಡಿಸಲಾಗಿದೆ. ಕಳೆದ ಬಾರಿ ಪುರಾತತ್ವ ಇಲಾಖೆಯ ವತಿಯಿಂದ ಮಸೀದಿಯ ವಜುಖಾನಾದಲ್ಲಿ ವಿಡಿಯೋಗ್ರಾಫಿಕ್‌ ಸಮೀಕ್ಷೆ ನಡೆಸಲಾಗಿತ್ತು. ಆಗ ವಜೂಖಾನದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಕೂಡಲೇ ಸಮೀಕ್ಷೆಗೆ ತಡೆಯಾಜ್ಞೆ ತರಲಾಗಿತ್ತು. ಬಳಿಕ ಮಸೀದಿಯ ಕೆಲವು ಭಾಗಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದಲ್ಲದೇ , ಕೋಣೆಗಳಿಗೆ ಬೀಗ ಹಾಕಲಾಗಿತ್ತು. ಆಗಿನಿಂದಲೂ ಜ್ಞಾನವಾಪಿ ಮಸೀದಿಯ ಸಂಪೂರ್ಣ ಸಮೀಕ್ಷೆ ನಡೆಯಬೇಕೆಂಬುದು ಹಿಂದೂಪರ ಸಂಘಟನೆಗಳ ಒತ್ತಾಯವಾಗಿದೆ.

ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್, “ಈ ವಿಷಯವನ್ನು ಹಿಂದೂ ಕಡೆಯಿಂದ ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ಯಲಾಗಿದೆ. ವಜುಖಾನದಲ್ಲಿರುವ ಶಿವಲಿಂಗವನ್ನು ಪುರಾತತ್ವ ಇಲಾಖೆಯಿಂದ ಇನ್ನೂ ಸರ್ವೆ ಮಾಡಿಲ್ಲ. ಇದರಿಂದ ಇದು ಶಿವಲಿಂಗವೋ ಅಥವಾ ಕಾರಂಜಿಯೋ ಎಂಬುದು ಸ್ಪಷ್ಟವಾಗುತ್ತದೆ. ಮುಸ್ಲಿಂ ಕಡೆಯವರು ಇದೊಂದು ಕಾರಂಜಿ ಎಂದು ಹೇಳಿಕೊಳ್ಳುತ್ತಾರೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.

ಜ್ಞಾನವಾಪಿಯ 12 ನೆಲಮಾಳಿಗೆಗಳ ಪೈಕಿ 8ರಲ್ಲಿ ಸಮೀಕ್ಷೆ ಆಗಿಲ್ಲ

ಎಎಸ್‌ಐ ಸಮೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಜ್ಞಾನವಾಪಿಯ 12 ನೆಲಮಾಳಿಗೆಗಳಲ್ಲಿ 8ರಲ್ಲಿ ಎಎಸ್‌ಐ ಸಮೀಕ್ಷೆ ಸಾಧ್ಯವಾಗಿಲ್ಲ. ಇದರೊಂದಿಗೆ, ಮುಖ್ಯ ಗುಮ್ಮಟದ ಕೆಳಗಿರುವ ಜ್ಯೋತಿರ್ಲಿಂಗವನ್ನು ಸಹ ಸಮೀಕ್ಷೆ ಮಾಡಲಾಗಿಲ್ಲ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ಇದರಲ್ಲಿ ಮುಸ್ಲಿಂ ಬಣಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಎರಡು ವಾರಗಳಲ್ಲಿ ಉತ್ತರವನ್ನು ಸಲ್ಲಿಸುವಂತೆ ಮುಸ್ಲಿಂ ಬಣಕ್ಕೆ ಸ್ಪಷ್ಟವಾಗಿ ತಿಳಿಸಲಾಗಿದೆ.

ಯಾವ ಪ್ರಕರಣದಲ್ಲಿ ನೋಟಿಸ್?

“ನಾವು ಮೇ 16, 2022 ರಂದು ವಜು ಖಾನಾ ಎಂದು ಕರೆಯಲ್ಪಡುವಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದೆವು. ಆದರೆ, ಅಂಜುಮನ್ ಆಡಳಿತ ಮಂಡಳಿ ಇದನ್ನು ನಿರಾಕರಿಸಿ ಕಾರಂಜಿ ಎಂದು ಹೇಳಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಎಸ್‌ಐ ಸಮೀಕ್ಷೆಗೆ ಒತ್ತಾಯಿಸಿದ್ದೆವು. ಈ ವಿಚಾರದಲ್ಲಿ ಈಗ ಮುಸ್ಲಿಂ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿದ್ದೇವೆ ಎಂದು ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.

14 ದಿನಗಳಲ್ಲಿ ನಿರ್ಧಾರ?

ಇದಲ್ಲದೆ, ಎರಡು ವಾರಗಳಲ್ಲಿ ಉತ್ತರವನ್ನು ಸಲ್ಲಿಸುವಂತೆ ಮುಸ್ಲಿಂ ಪಕ್ಷವನ್ನು ಕೇಳಲಾಗಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಂಕೀರ್ಣದಲ್ಲಿ ಶಿವಲಿಂಗವು ವಿಡಿಯೋಗ್ರಫಿ ಸಮೀಕ್ಷೆಯಲ್ಲಿ ಕಂಡುಬಂದಿದೆ. ಹೀಗಿರುವಾಗ ಈ ಬಗ್ಗೆ ಮುಸ್ಲಿಂ ಬಣ ಏನು ಹೇಳುತ್ತಾರೆಂದು ನೋಡಬೇಕಾಗಿದೆ.

ಈ ಸುದ್ದಿಯನ್ನೂ ಓದಿ: Supreme Court: ಪಟಾಕಿ ಮೇಲಿನ ನಿಷೇಧದ ಆದೇಶ ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲವೇಕೆ? ದಿಲ್ಲಿ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್‌