ಯಾದಗಿರಿ: ಖಾಲಿ ಹುದ್ದೆ ಭರ್ತಿ ವಿಚಾರವಾಗಿ ಕೆಡಿಪಿ ಸಭೆಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಮತ್ತು ಶಾಸಕ ಶರಣಗೌಡ ಕಂದಕೂರ ನಡುವೆ ಟಾಕ್ ಫೈಟ್ ನಡೆದಿದೆ. ಪಶುಸಂಗೋಪನೆ ಇಲಾಖೆಯ ಖಾಲಿ ಹುದ್ದೆ ಭರ್ತಿ ಮಾಡುವಂತೆ ಶಾಸಕ ಕಂದಕೂರ ಕೇಳಿದ ಹಿನ್ನೆಲೆಯಲ್ಲಿ ಸಚಿವ ದರ್ಶನಾಪುರ ಗರಂ ಅಗಿದ್ದು, ಕೆಡಿಪಿ ಸಭೆಯಲ್ಲಿ (Yadgir KDP Meeting) ಏನು ಚರ್ಚಿಸಬೇಕೋ, ಅದನ್ನು ಮಾತ್ರ ಚರ್ಚಿಸಬೇಕು ಎಂದು ಕಿಡಿಕಾರಿದ್ದಾರೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಶಾಸಕನ ಮಧ್ಯೆ ವಾಗ್ಯುದ್ಧ ನಡೆದಿದೆ.
ಕೆಡಿಪಿ ಸಭೆಯಲ್ಲಿ ಏನು ಚರ್ಚಿಸಬೇಕೋ, ಅದನ್ನು ಮಾತ್ರ ಚರ್ಚಿಸಬೇಕು. ಸರ್ಕಾರದಿಂದ ಜಿಲ್ಲೆಗೆ ಎಷ್ಟು ಅನುದಾನ ಬಂದಿದೆ? ಅನುದಾನ ಎಷ್ಟರ ಮಟ್ಟಿಗೆ ಬಳಕೆಯಾಗಿದೆ ಎಂಬುದರ ಬಗ್ಗೆ ಚರ್ಚೆ ಆಗಬೇಕು. ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕು ಎಂಬುದರ ಬಗ್ಗೆ ಮಾತುಕತೆ ನಡೆಯಬೇಕು. ಆದರೆ, ಖಾಲಿ ಹುದ್ದೆ ಬಗ್ಗೆ ಸದನದಲ್ಲಿ ಚರ್ಚಿಸಬೇಕು ಎಂದು ಸಚಿವ ದರ್ಶನಾಪುರ ಹೇಳಿದ್ದಾರೆ.
ಖಾಲಿ ಹುದ್ದೆಗಳ ಭರ್ತಿ ಬಗ್ಗೆ ಸಂಬಂಧಪಟ್ಟ ಇಲಾಖೆ ಸಚಿವರ ಬಳಿ ಹೋಗಿ ಚರ್ಚಿಸೋಣ. ಅಧಿಕಾರಿಗಳನ್ನು ಕೇಳಿದರೆ ಅವರೇನು ಹೇಳುತ್ತಾರೆ. ಸಚಿವರ ಬಳಿ ಹೋಗಿ ಎಷ್ಟು ಬೇಕೋ ಅಷ್ಟು ತಗೊಂಡು ಬನ್ನಿ, ನಾವು-ನೀವು ಸೇರಿ ಖಾಲಿ ಹುದ್ದೆ ಭರ್ತಿ ಬಗ್ಗೆ ಚರ್ಚಿಸೋಣ ಎಂದ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | DK Shivakumar: ಕರಾವಳಿ ಜನರ ವಲಸೆ ತಪ್ಪಿಸಲು ವಿಶೇಷ ಯೋಜನೆ
ಟೇಬಲ್ ಕೊರತೆ, ಜಿಲ್ಲಾಡಳಿತಕ್ಕೆ ತರಾಟೆ
ಕೆಡಿಪಿ ಸಭೆಯಲ್ಲಿ ಎಂಎಲ್ಎ, ಎಂಎಲ್ಸಿಗಳಿಗೆ ಟೇಬಲ್ ಕೊರತೆ ಉಂಟಾಗಿದ್ದರಿಂದ ಡಿಸಿ ಸುಶೀಲಾ ಅವರನ್ನು ಎಂಎಲ್‌ಸಿ ಬಿ.ಜಿ. ಪಾಟೀಲ್ ತರಾಟೆ ತೆಗೆದುಕೊಂಡರು. ಡಿಸಿಯರೇ ಮುಂದಿನ ಬಾರಿ ನಮಗೆ ಕೆಳಗೆ ಕುಳಿತುಕೊಳ್ಳಲು ಹೇಳಿ. ನಾವು ಒಂದು ಕಾಲು ಒಳಗೆ, ಹೊರಗೆ ಇಟ್ಟು ಕುಳಿತು ಸಾಕಾಗಿದೆ. ನೆಕ್ಸ್ಟ್ ಟೈಮ್ ಮೀಟಿಂಗ್‌ನಲ್ಲಿ ಕೆಳಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿ ಎಂದರು. ಬಳಿಕ ಅವರಿಗೆ ಟೇಬಲ್ ವ್ಯವಸ್ಥೆ ಮಾಡಲಾಗಿದೆ.