Friday, 22nd November 2024

Submarine: ನೌಕಾಪಡೆಯ ಜಲಾಂತರ್ಗಾಮಿ ಮೀನುಗಾರಿಕಾ ದೋಣಿಗೆ ಡಿಕ್ಕಿ; ಇಬ್ಬರು ಮೀನುಗಾರರು ಕಣ್ಮರೆ

submarine

ನವದೆಹಲಿ: 13 ಮಂದಿ ಸಿಬ್ಬಂದಿಗಳಿದ್ದ ಗೋವಾ ಮೀನುಗಾರಿಕೆ ದೋಣಿಯೊಂದು ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ(Submarine)ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಹಡಗಿನಲ್ಲಿದ್ದ ಇಬ್ಬರು ಮೀನುಗಾರರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ಭಾರತೀಯ ನೌಕಪಡೆಯು ಆರು ಹಡಗುಗಳು ಮತ್ತು ವಿಮಾನಗಳನ್ನು ಬೃಹತ್‌ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗೆಂದು ನಿಯೋಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿದ್ದು,ಈವರೆಗೂ 11 ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಇನ್ನುಳಿದ ಇಬ್ಬರು ಮೀನುಗಾರಿಕೆ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಗೋವಾ ಕರಾವಳಿಯಿಂದ 70 ನಾಟಿಕಲ್‌ ಮೈಲು ದೂರದಲ್ಲಿ ಸ್ಕಾರ್ಪೀನ್‌ ದರ್ಜೆಯ ಸಬ್‌ಮೆರಿನ್‌ ನೌಕೆಗೆ ಮೀನುಗಾರಿಕೆ ದೋಣಿ ಡಿಕ್ಕಿ ಹೊಡೆದಿದೆ ಎಂದು ರಕ್ಷಣಾ ಸಚಿವಾಲಯವು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. “ಉಳಿದ ಇಬ್ಬರು ಸಿಬ್ಬಂದಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಮಾರಿಟೈಮ್ ಪಾರುಗಾಣಿಕಾ ಸಮನ್ವಯ ಕೇಂದ್ರ ಮುಂಬೈ (ಎಂಆರ್‌ಸಿಸಿ) ಜೊತೆಗೆ ಸಮನ್ವಯಗೊಂಡು ಕಾರ್ಯಾಚರಣೆಯ ಕೆಲಸ ಮಾಡಲಾಗುತ್ತಿದೆ. ಇನ್ನು ಈ ದುರ್ಘಟನೆಗೆ ಕಾರಣ ಏನೆಂಬುದು ತಿಳಿದಿಲ್ಲ.

ಸ್ಕಾರ್ಪೀನ್-ಕ್ಲಾಸ್ ಸಬ್‌ಮೆರಿನ್ಸ್‌

ಸ್ಕಾರ್ಪೀನ್-ವರ್ಗದ ಸಬ್‌ಮೆರಿನ್ಸ್ ನೌಕೆಗಳು ಹಿಂದೂ ಮಹಾಸಾಗರದಲ್ಲಿನ ಭಾರತದ ನೌಕಾ ಶಕ್ತಿಯ ಪ್ರಮುಖ ಭಾಗವಾಗಿದೆ. ಯಾಕೆಂದರೆ ಅವುಗಳ ಸಹಾಯದಿಂದ ಜಲಾಂತರ್ಗಾಮಿ ವಿರೋಧಿ ಯುದ್ಧ, ಗುಪ್ತಚರ ಚಟುವಟಿಕೆ, ಗಣಿಗಾರಿಕೆ ಮತ್ತು ಪ್ರದೇಶದ ಕಣ್ಗಾವಲು ಸೇರಿದಂತೆ ಬಹುವಿಧದ ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದು. ಸ್ಕಾರ್ಪೀನ್-ವರ್ಗದ ಸಬ್‌ಮೆರಿನ್ಸ್‌ ನೌಕೆಗಳ ನಿರ್ಮಾಣಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ, ಅಕೌಸ್ಟಿಕ್ ಸೈಲೆನ್ಸಿಂಗ್ ತಂತ್ರಗಳು, ಕಡಿಮೆ ವಿಕಿರಣದ ಶಬ್ದ ಮಟ್ಟಗಳು, ಹೈಡ್ರೋ-ಡೈನಾಮಿಕ್ ಆಪ್ಟಿಮೈಸ್ಡ್ ಬಳಸಲಾಗಿದೆ. ನೀರಿನ ಅಡಿಯಲ್ಲಿ ಅಥವಾ ಮೇಲ್ಮೈಯಲ್ಲಿ ಟಾರ್ಪಿಡೊಗಳು ಮತ್ತು ಟ್ಯೂಬ್-ಲಾಂಚ್ಡ್ ಆಂಟಿ-ಶಿಪ್ ಕ್ಷಿಪಣಿಗಳೊಂದಿಗೆ ದಾಳಿಯನ್ನು ಮಾಡಬಹುದಾದ ಸಾಮರ್ಥ್ಯ ಹೊಂದಿದೆ.

ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ

ಪ್ರತ್ಯೇಕ ಪ್ರಕರಣವೊಂದರಲ್ಲಿ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ 37 ವರ್ಷದ ಮೀನುಗಾರ ಬುಧವಾರ ಸಂಜೆ ಯಾಂತ್ರೀಕೃತ ದೋಣಿಯಿಂದ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನಾಪತ್ತೆಯಾಗಿರುವ ಮೀನುಗಾರರ ಹೆಸರನ್ನು ಅಕ್ಕರೈಪೆಟ್ಟೈ ಮೂಲದ ಕೆ.ಷಣ್ಮುಗಂ (37) ಎಂದು ಪೊಲೀಸರು ತಿಳಿಸಿದ್ದಾರೆ.

ಷಣ್ಮುಗಂ ಅವರು ಮೀನುಗಾರರ ಗುಂಪಿನೊಂದಿಗೆ ನವೆಂಬರ್ 18 ರಂದು ಅಕ್ಕರೈಪೆಟ್ಟೈನಿಂದ ಯಾಂತ್ರೀಕೃತ ದೋಣಿಯಲ್ಲಿ ಪ್ರಯಾಣ ಬೆಳೆಸಿದರು ಎಂದು ಕರಾವಳಿ ಭದ್ರತಾ ಗುಂಪಿನ ಮೂಲಗಳು ತಿಳಿಸಿವೆ. ಮೀನುಗಾರರು ಬುಧವಾರ ಸಂಜೆ ಕೊಡಿಯಕರೈ ಆಗ್ನೇಯಕ್ಕೆ ಮೀನುಗಾರಿಕೆಯಲ್ಲಿ ತೊಡಗಿದ್ದರು ಎಂದು ಹೇಳಲಾಗಿದ್ದು, ಷಣ್ಮುಗಂ ದೋಣಿಯಿಂದ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣ: ಮಸೀದಿ ಅರ್ಜಿ ವಜಾ