ಮುಂಬೈ: ಸಂಗೀತ ಮಾಂತ್ರಿಕ ಎಆರ್ ರೆಹಮಾನ್ (AR Rahman) ಮತ್ತು ಅವರ ಪತ್ನಿ ಸಾಯಿರಾ ಬಾನು ನವೆಂಬರ್ 19, ಮಂಗಳವಾರ ಸಂಜೆ ತಾವು ಬೇರೆಯಾಗುವುದಾಗಿ ಘೋಷಿಸಿದ್ದರು. (AR Rahman Divorce) ಆ ಮೂಲಕ ಸುದೀರ್ಘ 29 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ್ದರು. ಈ ಜೋಡಿ ಬೇರೆಯಾಗುತ್ತಿದ್ದಂತೆ ಹಲವು ಊಹಾಪೋಹಗಳು ಹುಟ್ಟಿಕೊಂಡಿದ್ದವು. ರೆಹಮಾನ್ ಅವರ ತಂಡದ ಸದಸ್ಯೆ ಮೋಹೀನಿ ಡೇ (Mohini Dey) ಕೂಡ ಅದೇ ದಿನ ತನ್ನ ಗಂಡನಿಂದ ದೂರವಾಗುವುದಾಗಿ ಹೇಳಿದ್ದರು. ಇದು ಎಲ್ಲೆಡೆ ಸಂಚಲನ ಮೂಡಿಸಿತ್ತು. ಇದೀಗ ಊಹಾಪೋಹಗಳಿಗೆ ರೆಹಮಾನ್ ಪುತ್ರಿ (AR Rahman Daughter) ಸ್ಪಷ್ಟನೆ ನೀಡಿದ್ದಾರೆ.
ಎಆರ್ ರೆಹಮಾನ್ ಹಾಗೂ ಮೋಹಿನಿ ಡೇ ಇಬ್ಬರೂ ಒಂದೇ ದಿನ ತಮ್ಮ ವಿಚ್ಛೇದನವನ್ನು ಘೋಷಿಸಿದ್ದರು. ಇದರ ಬೆನ್ನಲ್ಲೆ ಹಲವರು ಸಂಗೀತ ದಿಗ್ಗಜನ ವಿರುದ್ದ ಗಂಭೀರ ಆರೋಪ ಮಾಡಿದ್ದರು. ಇದೀಗ ರೆಹಮಾನ್ ಪುತ್ರಿ ಎಲ್ಲ ವದಂತಿಗಳಿಗೆ ತರೆ ಎಳೆದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯನ್ನು ಹಂಚಿಕೊಂಡು ಆರೋಪ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.
ಸ್ಟೋರಿ ಹಾಕಿರುವ ಅವರು “ಯಾವಾಗಲೂ ನೆನಪಿಟ್ಟುಕೊಳ್ಳಿ ವದಂತಿಗಳನ್ನು ದ್ವೇಷಿಗಳು ಒಯ್ಯುತ್ತಾರೆ, ಮೂರ್ಖರು ಹರಡುತ್ತಾರೆ ಮತ್ತು ಮೂರ್ಖರು ಸ್ವೀಕರಿಸುತ್ತಾರೆ” ಪ್ರಾಮಾಣಿಕವಾಗಿ, ಜೀವನವನ್ನು ನಡೆಸಿ ಎಂದು ಬರೆದುಕೊಂಡಿದ್ದಾರೆ.
ಈ ಮೊದಲು ಸಾಯಿರಾ ಬಾನು ಅವರ ವಕೀಲೆ ವಂದನಾ ಶಾ ಯಾವುದೇ ವದಂತಿಗಳಿಗೆ ಕಿವಿ ಕೊಡಬೇಡಿ , ರೆಹಮಾನ್ ಹಾಗೂ ಸಾಯಿರಾ ಬಾನು ಇಬ್ಬರ ಒಪ್ಪಿಗೆಯ ಮೂಲಕ ವಿಚ್ಛೇದನ ಪಡೆದಿದ್ದಾರೆ. ಮೋಹಿನಿ ಡೇ ರೆಹಮಾನ್ ಅವರ ತಂಡದ ಸದಸ್ಯೇ ಅಷ್ಟೇ ಅವರಿಗೂ ಇವರಿಗೂ ಬೇರೆ ಯಾವುದೇ ಸಂಬಂಧವಿಲ್ಲ. ಖಾಸಗಿ ಕಾರಣದಿಂದಾಗಿ ರೆಹಮಾನ್ ಹಾಗೂ ಸಾಯಿರಾ ಬಾನು ವಿಚ್ಛೇದನ ಪಡೆದಿದ್ದಾರೆ ಎಂದು ಹೇಳಿದ್ದರು.
29ರ ಪ್ರಾಯದ ಮೋಹಿನಿ ಬಾಸ್ ಪ್ಲೇಯರ್ ಆಗಿದ್ದು, ಗಾನ್ ಬಾಂಗ್ಲಾ ವಿಂಡ್ ಆಫ್ ಚೇಂಜ್‌ನ ಭಾಗವಾಗಿದ್ದಾರೆ. ಅವರು ವಿಶ್ವಾದ್ಯಂತ 40 ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮದಲ್ಲಿ ರೆಹಮಾನ್ ಅವರೊಂದಿಗೆ ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗೆ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ ಮೋಹಿನಿ ಇನ್‌ಸ್ಟಾಗ್ರಾಂನಲ್ಲಿ ದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು.
“ಭಾರವಾದ ಹೃದಯದಲ್ಲಿ ನಾನು ಹಾಗೂ ಮಾರ್ಕ್ ಬೇರೆ ಬೇರೆ ಆಗುತ್ತಿರುವುದನ್ನು ಘೋಷಿಸುತ್ತಿದ್ದೇವೆ. ಮೊದಲನೆಯದಾಗಿ, ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಬದ್ಧತೆ ಎನ್ನುವಂತೆ ಇದು ನಮ್ಮ ನಡುವಿನ ಪರಸ್ಪರ ಒಪ್ಪಿಗೆಯ ನಿರ್ಧಾರವಾಗಿದೆ. ನಾವಿಬ್ಬರೂ ಅದ್ಭುತ ಸ್ನೇಹಿತರಾಗಿ ಮುಂದುವರಿಯಲಿದ್ದೇವೆ. ಆದರೆ, ನಾವು ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಬಯಸುತ್ತೇವೆ ಮತ್ತು ಪರಸ್ಪರ ಒಪ್ಪಂದದ ಮೂಲಕ ಬೇರ್ಪಡುವುದು ಮುಂದುವರಿಯಲು ಉತ್ತಮ ಮಾರ್ಗವಾಗಿದೆ ಎಂದು ನಾವಿಬ್ಬರೂ ನಿರ್ಧರಿಸಿದ್ದೇವೆ,” ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ವೈರಲ್ ಆದ ಮೇಲೆ ಕೆಲವು ಊಹಾಪೋಹಗಳು ಎದ್ದಿದ್ದವು.
ಇದನ್ನೂ ಓದಿ : AR Rahman : ವಿಚ್ಚೇದನದ ನಂತರ ಎ ಆರ್ ರೆಹಮಾನ್ ಮೊದಲ ಪೋಸ್ಟ್… ಫ್ಯಾನ್ಸ್ ದಿಲ್ ಖುಷ್!