Friday, 22nd November 2024

IND vs AUS: 26 ರನ್‌ಗೆ ಔಟಾದರೂ ವಿಶೇಷ ದಾಖಲೆ ಬರೆದ ಕನ್ನಡಿಗ ಕೆಎಲ್‌ ರಾಹುಲ್‌!

KL Rahul completed 3,000 Test runs

ಪರ್ತ್‌: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯ ಮೊದಲನೇ ಪಂದ್ಯದಲ್ಲಿ ಕನ್ನಡಿಗ ಈ ಸಾಧನೆಗೆ ಭಾಜನರಾದರು. ಶುಕ್ರವಾರ ಇಲ್ಲಿನ ಆಪ್ಟಸ್‌ ಸ್ಟೇಡಿಯಂನಲ್ಲಿ ಆರಂಭವಾದ ಮೊದನೇ ಟೆಸ್ಟ್‌ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡದ ಇನಿಂಗ್ಸ್‌ ಆರಂಭಿಸಿದ ಕೆಎಲ್‌ ರಾಹುಲ್‌ 74 ಎಸೆತಗಳಲ್ಲಿ 26 ರನ್‌ಗಳನ್ನು ಗಳಿಸಿದರು.

ಉತ್ತಮ ಆರಂಭ ಪಡೆದು ಆಡುತ್ತಿದ್ದ ಕೆಎಲ್‌ ರಾಹುಲ್‌ ವಿವಾದಾತ್ಮಕ ತೀರ್ಪಿಗೆ ವಿಕೆಟ್‌ ಒಪ್ಪಿಸಬೇಕಾಯಿತು. ಅವರು, ಮಿಚೆಲ್‌ ಸ್ಟಾರ್ಕ್‌ ಅವರ ಎಸೆತದಲ್ಲಿ ಚೆಂಡು ಪ್ಯಾಡ್‌ಗೆ ತಾಗಿ ವಿಕೆಟ್‌ ಕೀಪರ್‌ ಅಲೆಕ್ಸ್‌ ಕೇರಿ ಅವರ ಗ್ಲೌಸ್‌ಗೆ ಸೇರಿತ್ತು. ಆದರೆ, ಫೀಲ್ಡ್‌ ಅಂಪೈರ್‌ ನಾಟ್‌ಔಟ್‌ ನೀಡಿದ್ದರು. ಆದರೆ, ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌ ಮೂರನೇ ಅಂಪೈರ್‌ ಮೊರೆ ಹೋಗಿದ್ದರು. ಟಿವಿ ಅಂಪೈರ್‌ ರಿಚರ್ಡ್‌ ಇಲ್ಲಿಂಗ್‌ವರ್ಥ್‌ ಅವರು ಚೆಂಡು ಬ್ಯಾಟ್‌ಗೆ ತಾಗಿದೆ ಎಂದು ಔಟ್‌ ತೀರ್ಪನ್ನು ಪರದೆ ಮೇಲೆ ಪ್ರಕಟಿಸಿದರು. ಈ ವೇಳೆ ಕೆಎಲ್‌ ರಾಹುಲ್‌ ಅಸಮಾಧಾನದೊಂದಿಗೆ ಪೆವಿಲಿಯನ್‌ಗೆ ಮರಳಿದರು.

IND vs AUS: 150 ರನ್‌ಗೆ ಕುಸಿದ ಟೀಮ್‌ ಇಂಡಿಯಾ

3000 ಟೆಸ್ಟ್‌ ರನ್‌ಗಳನ್ನು ಪೂರ್ಣಗೊಳಿಸಿದ ಕನ್ನಡಿಗ

26 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರೂ ಕೆಎಲ್‌ ರಾಹುಲ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಿದರು. ಇಲ್ಲಿಯತನಕ 54 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಕೆಎಲ್‌ ರಾಹುಲ್‌, 33.78ರ ಸರಾಸರಿಯಲ್ಲಿ ಎಂಟು ಶತಕಗಳು ಹಾಗೂ 15 ಅರ್ಧಶತಕಗಳೊಂದಿಗೆ 3007 ರನ್‌ಗಳನ್ನು ಕಲೆ ಹಾಕಿದ್ದಾರೆ. ಇವರ ಗರಿಷ್ಠ ವೈಯಕ್ತಿಕ ಮೊತ್ತ 199 ರನ್‌ಗಳು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ನಲ್ಲಿ ಕೆಎಲ್‌ ರಾಹುಲ್‌ ಶತಕಗಳನ್ನು ಸಿಡಿಸಿರುವುದು ವಿಶೇಷವಾಗಿದೆ. ಆದರೆ, ಸ್ಥಿರ ಪ್ರದರ್ಶನದ ಕೊರತೆಯಿಂದ ಕೆಎಲ್‌ ರಾಹುಲ್‌ ಹೆಚ್ಚು ಟೆಸ್ಟ್‌ ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಗಿಲ್ಲ.

ಕೆಎಲ್‌ ರಾಹುಲ್‌ ಅವರು ಪ್ರಸಕ್ತ ವರ್ಷದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಅವರು ಈ ವರ್ಷ ಆಡಿದ ಆರು ಟೆಸ್ಟ್‌ ಪಂದ್ಯಗಳು ಹಾಗೂ 9 ಇನಿಂಗ್ಸ್‌ಗಳಿಂದ 32.50ರ ಸರಾಸರಿಯಲ್ಲಿ ಕೇವಲ 260 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಕನ್ನಡಿಗ ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ. 86 ರನ್‌ಗಳು ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

150 ರನ್‌ಗಳಿಗೆ ಭಾರತ ತಂಡ ಆಲ್‌ಔಟ್‌

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ 49.4 ಓವರ್‌ಗಳಿಗೆ ಕೇಚಲ 150 ರನ್‌ಗಳಿಗೆ ಆಲ್‌ಔಟ್‌ ಆಯಿತು. ಭಾರತ ತಂಡದ ಪರ ಡೆಬ್ಯೂಟಂಟ್‌ ನಿತೀಶ್‌ ಕುಮಾರ್‌ ನಿರ್ಣಾಯಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಅವರು ಆಡಿದ 59 ಎಸೆತಗಳಲ್ಲಿ ನಿರ್ಣಾಯಕ 41 ರನ್‌ಗಳನ್ನು ಕಲೆ ಹಾಕಿದರೆ, ರಿಷಭ್‌ ಪಂತ್‌ 37 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ಕೆಎಲ್‌ ರಾಹುಲ್‌ 26 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಇನ್ನು ಆಸ್ಟ್ರೇಲಿಯಾ ಪರ ಜಾಶ್‌ ಹೇಝಲ್‌ವುಡ್‌ 4 ವಿಕೆಟ್‌ ಪಡೆದರೆ, ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌ ಮತ್ತು ಮಿಚೆಲ್‌ ಮಾರ್ಷ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಿತ್ತರು.

ಆಸೀಸ್‌ಗೆ ಆರಂಭಿಕ ಆಘಾತ ನೀಡಿದ ಬುಮ್ರಾ

ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಜಸ್‌ಪ್ರೀತ್‌ ಬುಮ್ರಾ ಆರಂಭಿಕ ಆಘಾತ ನೀಡಿದರು. ಮೊದನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 27 ಓವರ್‌ಗಳಿಗೆ 67 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಜಸ್‌ಪ್ರೀತ್‌ ಬುಮ್ರಾ 4 ವಿಕೆಟ್‌ ಪಡೆದರೆ, ಮೊಹಮ್ಮದ್‌ ಸಿರಾಜ್‌ ಎರಡು ವಿಕೆಟ್‌ ಕಿತ್ತಿದ್ದಾರೆ. ಆಸ್ಟ್ರೇಲಿಯಾ ತಂಡ ಇನ್ನೂ 83 ರನ್‌ಗಳ ಹಿನ್ನಡೆಯಲ್ಲಿದೆ.