Friday, 22nd November 2024

Prajwal Revanna Case: ಪ್ರಜ್ವಲ್‌ ರೇವಣ್ಣಗೆ ಮತ್ತೆ ಹಿನ್ನಡೆ; 4ನೇ ಕೇಸ್‌ನಲ್ಲೂ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Prajwal Revanna Case

ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna Case) ಮತ್ತೆ ಹಿನ್ನಡೆಯಾಗಿದೆ. ಈ ಹಿಂದೆ ಮೂರು ಪ್ರಕರಣಗಳಲ್ಲಿ ಜಾಮೀನು ಅರ್ಜಿ ವಜಾಗೊಂಡಿತ್ತು. ಇದೀಗ ನಾಲ್ಕನೇ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ್ದು, ಇದರಿಂದ ಪ್ರಜ್ವಲ್‌ ರೇವಣ್ಣಗೆ ಸದ್ಯ ಜೈಲೇ ಗತಿಯಾಗಿದೆ.

ಪ್ರಜ್ವಲ್‌ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಶುಕ್ರವಾರ ಪ್ರಕಟಿಸಿದೆ. ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ, ಇತ್ತೀಚೆಗೆ 2,144 ಪುಟಗಳ ಚಾರ್ಜ್‌ ಶೀಟ್‌ ಸಲ್ಲಿಸಿತ್ತು.

ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ. ಹಾಲಿ ಪ್ರಕರಣದಲ್ಲಿ ಆರೋಪ ಪಟ್ಟಿಯನ್ನು ಪರಿಗಣಿಸಿಲ್ಲ, ದೂರನ್ನಷ್ಟೇ ಆಧರಿಸಿ ವಜಾ ಮಾಡಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ
2021ರಲ್ಲಿ ಬಿಸಿಎಂ ಹಾಸ್ಟೆಲ್‌ನಲ್ಲಿ ಬಾಲಕಿಯರಿಗೆ ಹಾಸ್ಟೆಲ್‌ ಸೌಲಭ್ಯ ಕಲ್ಪಿಸುವ ಕುರಿತು ಚರ್ಚಿಸಲು ಪ್ರಜ್ವಲ್‌ ಅವರ ಕಚೇರಿಗೆ ಸಂತ್ರಸ್ತೆ ತೆರಳಿದ್ದರು. ಬ್ಯುಸಿ ಇದ್ದಿದ್ದರಿಂದ ಮಾರನೆ ದಿನ ಬರುವಂತೆ ಪ್ರಜ್ವಲ್‌ ಸೂಚಿಸಿದ್ದರು. ಅದರಂತೆ ಮಾರನೇಯ ದಿನ ಸಂತ್ರಸ್ತೆ ತೆರಳಿದಾಗ ಆಕೆಗೆ ಗನ್‌ ತೋರಿಸಿ, ಬೆದರಿಸಿ ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಕೃತ್ಯವನ್ನು ಪ್ರಜ್ವಲ್‌ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಆನಂತರ ಹಲವು ಬಾರಿ ವಿಡಿಯೋ ಕರೆ ಮಾಡಿ ನಗ್ನವಾಗುವಂತೆ ಸೂಚಿಸಿ, ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದರು. ಈ ವಿಚಾರವನ್ನು ಬಹಿರಂಗಪಡಿಸಿದರೆ ವಿಡಿಯೊ ವೈರಲ್‌ ಮಾಡುವುದಾಗಿ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಸಂತ್ರಸ್ತೆ ದೂರು ನೀಡಿದ್ದರು.

ಸಂತ್ರಸ್ತೆಯು ಪ್ರಕರಣದ ಸಂಬಂಧ ಮೇ 1ರಂದು ವಿಶೇಷ ತನಿಖಾ ದಳ (ಎಸ್‌ಐಟಿ) ಮುಖ್ಯಸ್ಥರಿಗೆ ದೂರು ನೀಡಿದ್ದರು. ಹೀಗಾಗಿ ಬೆಂಗಳೂರಿನ ಸಿಐಡಿಯ ಸೈಬರ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 376(2)(ಎನ್‌), 506, 354-ಎ(1)(ii), 354-ಬಿ, 354-ಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66ಇ ಅಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಪ್ರಜ್ವಲ್‌ ನಿರೀಕ್ಷಣಾ ಜಾಮೀನು ಕೋರಿದ್ದರು.