Friday, 22nd November 2024

Vinod Tawde: ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ 100 ಕೋಟಿ ರೂ. ಗಳ ಮಾನನಷ್ಟ ಮೊಕದ್ದಮೆ!

Vinod Tawde Sends Rs 100 Crore Defamation Notice To Mallikarjuna Kharge, Rahul Gandhi, Shrinate

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳೆ ಹಣ ಹಂಚಲಾಗಿದೆ ಎಂದು ತಮ್ಮ ವಿರುದ್ಧ ಆರೋಪ ಮಾಡಿದ್ದ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ಮುಖಂಡ ರಾಹುಲ್‌ ಗಾಂಧಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವ್ಡೆ (Vinod Tawde) 100 ಕೋಟಿ ರೂ. ಳ ಮಾನನಷ್ಟ ಮೊಕದ್ದಮೆಯ ನೋಟಿಸ್‌ ಕಳುಹಿಸಿದ್ದಾರೆ. ಅಲ್ಲದೆ ಕಾಂಗ್ರೆಸ್‌ ನಾಯಕರು ತಮ್ಮ ಬಳಿ ಕ್ಷಮೆಯಾಚಿಸಬೇಕೆಂದು ಬಿಜೆಪಿ ಮುಖಂಡ ಆಗ್ರಹಿಸಿದ್ದಾರೆ.

“ತಾನು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದೇನೆ, ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ, ಆದರೆ ನಾನು ಎಂದಿಗೂ ಈ ರೀತಿ ಮಾಡಿಲ್ಲ. ಕಾಂಗ್ರೆಸ್ ನಾಯಕರು ನನಗೆ, ಪಕ್ಷಕ್ಕೆ ಮತ್ತು ನನ್ನ ನಾಯಕರಿಗೆ ಮಾನಹಾನಿ ಮಾಡಲು ಬಯಸಿದ್ದಾರೆ. ಆದ್ದರಿಂದ ಅವರು ಉದ್ದೇಶಪೂರ್ವಕವಾಗಿ ಮಾಧ್ಯಮಗಳು ಮತ್ತು ಜನರ ಮುಂದೆ ಈ ಸುಳ್ಳನ್ನು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ 100 ಕೋಟಿ ರೂ. ಗಳ ಮಾನನಷ್ಟ ಮೊಕದ್ದಮೆ ಕೇಸ್‌ ಹಾಕಿದ್ದೇನೆ,” ಎಂದು ವಿನೋದ್‌ ತಾವ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನವೆಂಬರ್ 19 ರಂದು ಮತದಾನದ ಹಿಂದಿನ ದಿನದಂದು ಮತದಾರರಿಗೆ 5 ಕೋಟಿ ರೂ. ಗಳನ್ನು ಹಂಚುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದೇನೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ವಕ್ತಾರರಾದ ಸುಪ್ರಿಯಾ ತನ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅವರು ನನ್ನ ಮತ್ತು ನನ್ನ ಪಕ್ಷದ ಮಾನಹಾನಿ ಮಾಡಲು ಬಯಸಿದ್ದಾರೆ. ನನ್ನ ಹಾಗೂ ಬಿಜೆಪಿಯ ಪ್ರತಿಷ್ಠೆಗೆ ಧಕ್ಕೆ ತಂದಿರುವ ಕಾರಣ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪಕ್ಷದ ವಕ್ತಾರ ಸುಪ್ರಿಯಾ ಶ್ರೀನತ್‌ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದೇನೆ,” ಎಂದು ತಾವ್ಡೆ ಹೇಳಿದ್ದಾರೆ.

24 ಗಂಟೆಗಳ ಒಳಗಾಗಿ ಕ್ಷಮೆ ಕೇಳಬೇಕು: ತಾವ್ಡೆ

“ನನ್ನ ಹಾಗೂ ಬಿಜೆಪಿ ಪಕ್ಷದ ವಿರುದ್ದ ಕಾಂಗ್ರೆಸ್‌ ನಾಯಕರು ಮಾಡಿರುವ ಆರೋಪ ಶುದ್ದ ಸುಳ್ಳು ಹಾಗೂ ಸತ್ಯಕ್ಕೆ ದೂರವಾದದ್ದು. ನಾನೊಬ್ಬ ರಾಷ್ಟ್ರೀಯ ಪಕ್ಷವೊಂದರ ಜವಾಬ್ದಾರಿಯುತ ಹುದ್ದೆಯಲ್ಲಿದ್ದೇನೆ ಹಾಗೂ ಈ ರೀತಿ ಯಾವುದೇ ಕಾನೂನು ಬಾಹಿರಿ ಚಟುವಟಿಕೆ ನಡೆಸಿಲ್ಲ. ಹಾಗಾಗಿ ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸುಪ್ರಿಯಾ ಅವರು ಮುಂದಿನ 24 ಗಂಟೆಗಳ ಒಳಗಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು,” ಎಂದು ವಿನೋದ್‌ ತಾವ್ಡೆ ಆಗ್ರಹಿಸಿದ್ದಾರೆ.

ರಾಹುಲ್‌ ಗಾಂಧಿ, ಖರ್ಗೆ ಮಾಡಿದ್ದ ಆರೋಪವೇನು?

“ಮೋದಿ ಜೀ ಯವರೇ, ಸಿಕ್ಕಿರುವ 5 ಕೋಟಿ ರೂ. ಗಳು ಇಷ್ಟೊಂದು ಸುರಕ್ಷಿತವಾಗಿ ಎಲ್ಲಿಂದ ಬಂದಿದೆ? ಸಾರ್ವಜನಿಕ ಹಣವನ್ನು ಲೂಟಿ ಮಾಡಿರುವುದು ಹಾಗೂ ಚುನಾವಣೆಯಲ್ಲಿ ಹಂಚಲು ತಂದಿರುವುದು ಯಾರು?, ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತಮ್ಮ ಎಕ್ಸ್‌ ಖಾತೆಯಲ್ಲಿ ಬಿಜೆಪಿ ವಿರುದ್ದ ಗಂಭೀರ ಆರೋಪ ಮಾಡಿದ್ದರು.

ಇದರ ಬೆನ್ನಲ್ಲೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಕೂಡ ಪಿಎಂ ಮೋದಿ ಹಾಗೂ ಬಿಜೆಪಿ ಪಕ್ಷದ ವಿರುದ್ದ ಗಂಭೀರ ಆರೋಪ ಮಾಡಿದ್ದರು. ಅವರು, “ಹಣದ ಶಕ್ತಿ ಮತ್ತು ತೋಳ್ಬಲದ ಮೂಲಕ ಮಹಾರಾಷ್ಟ್ರವನ್ನು ʻಸುರಕ್ಷಿತʼವನ್ನಾಗಿ ಹೋಗುತ್ತಿದ್ದೀರಾ? ಒಂದೆಡೆ ರಾಜ್ಯದ ಮಾಜಿ ಗೃಹ ಸಚಿವರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿದ್ದರೆ, ಮತ್ತೊಂದೆಡೆ ಬಿಜೆಪಿಯ ಹಿರಿಯ ನಾಯಕರೊಬ್ಬರು 5 ಕೋಟಿ ರೂ. ನಗದು ಹಣದೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ,” ಎಂದು ಖರ್ಗೆ ಎಕ್ಸ್‌ ಖಾತೆಯಲ್ಲಿ ಆರೋಪ ಮಾಡಿದ್ದರು.