ಚೀನಿ ವಾಸ್ತು ಶಾಸ್ತ್ರ (Vastu Tips) ಫೆಂಗ್ ಶೂಯಿ (Feng Shui) ಬಗ್ಗೆ ಎಲ್ಲರೂ ಕೇಳಿರಬಹುದು. ಈ ಫೆಂಗ್ ಶೂಯಿ ತತ್ತ್ವಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳುವುದರಿಂದ ಮನೆಗೆ ಧನಾತ್ಮಕ ಶಕ್ತಿಯನ್ನು (positive energy) ಆಕರ್ಷಿಸಲು ಸಾಧ್ಯವಿದೆ. ಇದರಿಂದ ಮನೆಯನ್ನು ಶಾಂತಿ, ನೆಮ್ಮದಿ, ಸಮೃದ್ಧಿಯ ತಾಣವನ್ನಾಗಿ ಮಾಡಬಹುದು.
ಫೆಂಗ್ ಶೂಯಿ ಪುರಾತನ ಚೀನಿ ಅಭ್ಯಾಸವಾಗಿದೆ. ವಾಸದ ಸ್ಥಳಗಳಲ್ಲಿ ಸಾಮರಸ್ಯ, ಸಮತೋಲನ ಮತ್ತು ಧನಾತ್ಮಕ ಶಕ್ತಿಯನ್ನು ರಚಿಸಲು ಇದು ಮಾರ್ಗದರ್ಶನವನ್ನು ನೀಡುತ್ತದೆ. ಇದನ್ನು ಸಾಮಾನ್ಯವಾಗಿ “ಚಿ” ಎಂದು ಕರೆಯಲಾಗುತ್ತದೆ.
ಮನೆ ಅಚ್ಚುಕಟ್ಟಾಗಿರಲಿ
ಮನೆಯಲ್ಲಿನ ಅಸ್ತವ್ಯಸ್ತತೆಯು ಸಕಾರಾತ್ಮಕ ಶಕ್ತಿಯ ಹರಿವನ್ನು ನಿರ್ಬಂಧಿಸುತ್ತದೆ. ಇದು ಮಾನಸಿಕ ಒತ್ತಡವನ್ನು ಉಂಟು ಮಾಡುತ್ತದೆ. ಮನೆ ಮಂದಿಯಲ್ಲಿ ಆತಂಕ ಮತ್ತು ಒತ್ತಡದ ಭಾವನೆಗಳಿಗೆ ಕಾರಣವಾಗುತ್ತದೆ.
ಮನೆಯಲ್ಲಿ ಅಗತ್ಯವಿರುವ ವಸ್ತುಗಳನ್ನು ಅಚ್ಚುಕಟ್ಟಾಗಿ ಇರಿಸಿ. ಹೆಚ್ಚು ಸಂತೋಷ ಕೊಡುವ ವಸ್ತುಗಳಿಗೆ ಮಾತ್ರ ಆದ್ಯತೆ ನೀಡಿ. ವಸ್ತುಗಳನ್ನು ಅಚ್ಚುಕಟ್ಟಾಗಿ ಇರಿಸಲು ಬುಟ್ಟಿ, ಕಪಾಟು ಮತ್ತು ಪೆಟ್ಟಿಗೆಗಳನ್ನು ಬಳಸಿ.
ನೈಸರ್ಗಿಕ ಅಂಶಗಳು ಸೇರಿರಲಿ
ನೈಸರ್ಗಿಕ ಅಂಶಗಳು ಮನೆಯಲ್ಲಿ ಶಾಂತ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ಮನೆಯಲ್ಲಿ ತಾಜಾತನವನ್ನು ತುಂಬುತ್ತದೆ. ನೈಸರ್ಗಿಕ ಅಂಶಗಳು ಚೈತನ್ಯವನ್ನು ಉತ್ತೇಜಿಸುತ್ತದೆ.
ಇದಕ್ಕಾಗಿ ಮನೆಯಲ್ಲಿ ಪೀಸ್ ಲಿಲ್ಲಿ, ಬಿದಿರು ಅಥವಾ ಮನಿ ಪ್ಲಾಂಟ್ ನಂತಹ ಒಳಾಂಗಣ ಸಸ್ಯಗಳನ್ನು ಇರಿಸಿ. ಇದು ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ವಾತಾವರಣವನ್ನು ಪ್ರಶಾಂತವಾಗಿ ಇರಿಸುತ್ತದೆ.
ಸಣ್ಣ ಕಾರಂಜಿ ಅಥವಾ ಅಕ್ವೇರಿಯಂ ಅನ್ನು ಇರಿಸುವುದು ಕೂಡ ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ. ಇನ್ನು ಮರದ ಪೀಠೋಪಕರಣಗಳು, ಕಲ್ಲಿನ ಅಲಂಕಾರಗಳು ಮತ್ತು ಸಾವಯವ ಬಟ್ಟೆಗಳು ಕೂಡ ಮನೆಯಲ್ಲಿ ಸಂತೋಷದ ವಾತಾವರಣವನ್ನು ಉಂಟು ಮಾಡುತ್ತದೆ.
ಪ್ರವೇಶ ದ್ವಾರ ಸ್ವಚ್ಛವಾಗಿರಲಿ
ಮನೆಯ ಪ್ರವೇಶದ್ವಾರವು ಶಕ್ತಿಯ ಹರಿವಿನ ಪ್ರಮುಖ ಕೇಂದ್ರವಾಗಿದೆ. ಹೀಗಾಗಿ ಇದನ್ನು ಆದಷ್ಟು ಸ್ವಚ್ಛವಾಗಿಡಿ: ನಿಯಮಿತವಾಗಿ ಗುಡಿಸಿ ಮತ್ತು ಕಸದಿಂದ ಮುಕ್ತವಾಗಿರಿಸಿ.
ಮನೆಯ ಪ್ರವೇಶ ದ್ವಾರದ ಅಲಂಕಾರದಲ್ಲಿ ಸಕಾರಾತ್ಮಕತೆಯನ್ನು ಪ್ರತಿಬಿಂಬಿಸುವ ಸಸ್ಯಗಳು, ಎಲೆಗಳು, ಹೂವುಗಳು ಅಥವಾ ಕಲಾಕೃತಿಗಳನ್ನು ಸೇರಿಸಿ. ಅಲ್ಲದೇ ಮನೆಯ ಪ್ರವೇಶ ದ್ವಾರವು ಪ್ರಕಾಶಮಾನವಾದ ಬೆಳಕನ್ನು ಹೊಂದಿರಲಿ. ಇದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಐದು ಅಂಶಗಳು ಸಮತೋಲನದಲ್ಲಿರಲಿ
ಫೆಂಗ್ ಶೂಯಿ ಐದು ಅಂಶಗಳ ನಡುವೆ ಸಾಮರಸ್ಯವನ್ನು ಒತ್ತಿಹೇಳುತ್ತದೆ. ಇದರಲ್ಲಿ ಮರ, ಬೆಂಕಿ, ಭೂಮಿ, ಲೋಹ ಮತ್ತು ನೀರು ಸೇರಿದೆ. ಈ ಐದು ಅಂಶಗಳಲ್ಲಿ ಪ್ರತಿಯೊಂದು ಅಂಶವು ವಿಭಿನ್ನ ಶಕ್ತಿಗಳನ್ನು ಪ್ರತಿನಿಧಿಸುತ್ತದೆ.
ಮನೆಯಲ್ಲಿ ಮರದ ತತ್ತ್ವಗಳನ್ನು ಪಡೆಯಲು ಮರದ ಪೀಠೋಪಕರಣಗಳು, ಸಸ್ಯಗಳು ಅಥವಾ ಹಸಿರು ಬಣ್ಣಗಳಿರಲಿ.
ಬೆಂಕಿಯ ತತ್ತ್ವಕ್ಕಾಗಿ ಮೇಣದಬತ್ತಿ, ದೀಪ ಅಥವಾ ಕೆಂಪು ಬಣ್ಣಗಳನ್ನು ಬಳಸಿ.
ಭೂಮಿಯ ತತ್ತ್ವಕ್ಕಾಗಿ ಸೆರಾಮಿಕ್ ಮಡಿಕೆಗಳು, ಹರಳುಗಳು ಅಥವಾ ಮಣ್ಣಿನ ಬಣ್ಣಗಳನ್ನು ಸೇರಿಸಿ.
ಲೋಹದ ತತ್ತ್ವಕ್ಕಾಗಿ ಲೋಹದ ಅಲಂಕಾರ, ಚೌಕಟ್ಟುಗಳು ಅಥವಾ ಬೆಳ್ಳಿಯ ಬಣ್ಣವನ್ನು ಬಳಸಿ.
ನೀರಿನ ತತ್ತ್ವಕ್ಕಾಗಿ ಕನ್ನಡಿ ಅಥವಾ ನೀರಿನ ವೈಶಿಷ್ಟ್ಯಗಳನ್ನು ಬಳಸಿ.
ಬಣ್ಣಗಳ ಬಳಕೆ
ಬಣ್ಣಗಳು ಮನೆಯನ್ನು ಶಕ್ತಿಯ ಕೇಂದ್ರವಾಗಿ ಮಾಡುತ್ತದೆ. ಪ್ರತಿಯೊಂದು ಬಣ್ಣವು ತನ್ನದೇ ಆದ ಕಂಪನ ಆವರ್ತನ ಮತ್ತು ಭಾವನಾತ್ಮಕ ಪ್ರಭಾವವನ್ನು ಹೊಂದಿದೆ.
Vastu Tips: ಉಪ್ಪಿನಿಂದ ದೂರ ಮಾಡಬಹುದು ಹಣದ ಸಮಸ್ಯೆ!
ಮನೆಯಲ್ಲಿ ಉಷ್ಣತೆ ಮತ್ತು ಶಕ್ತಿಯನ್ನು ಪ್ರೇರೇಪಿಸಲು ಬಯಸುವ ಪ್ರದೇಶಗಳಲ್ಲಿ ಕೆಂಪು, ಕಿತ್ತಳೆ ಮತ್ತು ಹಳದಿಗಳನ್ನು ಬಳಸಿ. ನೀಲಿ, ಹಸಿರು ಬಣ್ಣವನ್ನು ಮಲಗುವ ಕೋಣೆ ಅಥವಾ ಧ್ಯಾನ ಸ್ಥಳಗಳಲ್ಲಿ ಬಳಸಿ. ಇದು ಶಾಂತಿ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಪ್ರತಿ ಕೋಣೆಯಲ್ಲೂ ಮನಸ್ಸಿನ ಭಾವನೆಗಳಿಗೆ ಸೂಕ್ತವಾಗುವ ಬಣ್ಣಗಳ ಮಿಶ್ರಣವನ್ನು ಬಳಸಿ.