Saturday, 23rd November 2024

Pradeep Eshwar: ಪರಿಶ್ರಮದ ಜತೆಗೆ ಸ್ಪಷ್ಟತೆಯಿದ್ದವರಷ್ಟೇ ಜೀವನದಲ್ಲಿ ಮುಂದೆ ಬರುತ್ತಾರೆ : ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ : ವಿದ್ಯಾರ್ಥಿಗಳೇ ಆಗಿರಲಿ, ಯುವಕರೇ ಆಗಿರಲಿ ತಾನು ಏನಾಗಬೇಕು ಎಂಬ ಬಗ್ಗೆ ಸ್ಪಷ್ಟತೆಯಿಟ್ಟುಕೊಂಡು ಪರಿಶ್ರಮದ ಜತೆಗೆ ಗುರುಗಳ ಮಾರ್ಗದರ್ಶನವಿದ್ದರೆ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ನಗರದ ಹೊರವಲಯ ವಿಷ್ಣುಪ್ರಿಯ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಗ್ರಾಜುಯೇಷನ್ ಡೇ ಮತ್ತು ಪ್ರರ‍್ಸ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಸುಖವನ್ನು ಅಪೇಕ್ಷಿಸಿದರೆ  ಸಾಧಕರ ಸಾಲಿನಲ್ಲಿ ನಿಲ್ಲಲ್ಲು ಸಾಧ್ಯವಾಗುವುದಿಲ್ಲ. ಶೈಕ್ಷಣಿಕ ಜೀವನ ಹೂವಿನ ಹಾಸಿಗೆಯಂತಲ್ಲ, ಬದಲಿಗೆ ಮುಳ್ಳಿನ ಹಾದಿಯಂತಿರುತ್ತದೆ.ಯಾರು ಇಂತಹ ಕಠಿಣ ಹಾದಿಯನ್ನು ಯಶಸ್ವಿಯಾಗಿ ಕ್ರಮಿಸಿ ಮುಂದೆ ಸಾಗುತ್ತಾರೋ ಅವರಿಗೆ ಮಾತ್ರ ಗೋಲ್ಡ್ನ್ ಲೈಫ್ ದೊರೆಯಲಿದೆ ಎಂದರು.

ವಿದ್ಯಾರ್ಥಿಗಳೇ ಉನ್ನತ ಶಿಕ್ಷಣದ ನಂತರ ಉದ್ಯೋಗ ಹುಡುಕಿಕೊಂಡು ಕಂಪನಿಗಳ ಬಳಿ ಉದ್ಯೋಗಕ್ಕೆ ಅಲೆಯದೆ ಸ್ವಯಂ ಉದ್ಯೋಗ ಕೈಗೊಂಡು ಉಧ್ಯಮಪತಿಗಳಾಗಲು ಗುರಿಯಿಟ್ಟುಕೊಳ್ಳಿ.ನನ್ನಂತೆ ಹಳ್ಳಿಯಿಂದ ಬಂದು ನಗರ ಸೇರಿ ಸಂಸ್ಥೆಯನ್ನು ಕಟ್ಟಿದಂತೆ ನೀವೂ ಕೂಡ ಮಾಡಲು ಸಾಧ್ಯವಿದೆ. ನೀವೇ ನಾಲ್ಕು ಮಂದಿಗೆ ಉದ್ಯೋಗ ಕೊಟ್ಟಾಗ ಸಿಗುವ ನೆಮ್ಮದಿ ಕೆಲಸ ಮಾಡಿದಾಗ ದೊರೆಯುವುದಿಲ್ಲ.ಈ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ ಎಂದರು.

ಮಕ್ಕಳೇ ಅಪ್ಪ ಅಮ್ಮನ ಕಷ್ಟವನ್ನು ಅರ್ಥಮಾಡಿಕೊಂಡು ಅವರಿಗೆ ಗೌರವ ಬರುವ ಹಾಗೆ ನಡೆದುಕೊಳ್ಳಿ.ಪೋಷಕರ  ಪರಿಶ್ರಮ ಗೌರವಿಸುವುದು ಭಾರತೀಯ ಸಂಸ್ಕೃತಿಯಾಗಿದೆ. ಕಾಲೇಜು ಶಿಕ್ಷಣ ಮುಗಿಯುತ್ತಿದ್ದಂತೆ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳಿವೆ. ಪ್ರೀತಿ ಪ್ರೇಮದಲ್ಲಿ ಬಿದ್ದು ಭವಿಷ್ಯ ಹಾಳು ಮಾಡಿಕೊಳ್ಳದೆ,ಸಮಾಜಕ್ಕೆ ಆದರ್ಶವಾಗುವ ಹಾಗೆ ಬದುಕುವುದು ಕಲಿಯಿರಿ.ನಾನು ಪರಿಶ್ರಮ ಅಕಾಡೆಮಿಯಲ್ಲಿ ದುಡಿದ ನನ್ನ ಸ್ವಂತ ಸಂಪಾದನೆಯಲ್ಲಿ ಬಡಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದೇನೆ.ಇದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದರು.

ಅಪ್ಪ ಹೆಣ್ಣು ಮಕ್ಕಳನ್ನು ಸದಾಕಾಲ ಗಾಡಿಯಲ್ಲಿ ಮುಂದೆ ಕೂಡಿಸಿಕೊಂಡೇ ಜಗತ್ತನ್ನು ಕಾಣಿಸಿದರೆ ಮದುವೆಯಾದ ಮೇಲೆ ಗಂಡ ಹಿಂದೆ ಕೂರಿಸಿಕೊಂಡು ನೀನು ಯಾವಾಗಲೂ ನನ್ನ ಹಿಂದೆಯೇ ಇರಬೇಕು ಎಂದು ಭಾವಿಸುತ್ತಾರೆ.ಇದನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಮುಂದೆ ಮುನ್ನಡೆಯುವುದನ್ನು ಕಲಿಯಬೇಕು.ಪ್ರೀತಿಯಲ್ಲಿ ವಿಫಲವಾದ ತಕ್ಷಣ ಜೀವನ ಹಾಳುಮಾಡಿಕೊಳ್ಳುವ ಮೂಲಕ ತಂದೆತಾಯಿಗಳಿಗೆ ನೋವು ಕೊಡಬೇಡಿ. ಪ್ರೀತಿಸಿ ಮಧುವೆಯಾಗುವವರ ಸಂಖ್ಯೆ ಕಡಿಮೆ,ಕೈಕೊಡುವವರ ಸಂಖ್ಯೆಯೇ ಅಧಿಕ.ಈಸತ್ಯವನ್ನು ಮನಗಂಡು ಯಾವ ಬದುಕು ಬೇಕೋ ಬೇಕೋ ಅದನ್ನು ಆರಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ನಟರಾಜ್, ಕಾರ್ಯಕಾರಿ ನಿರ್ದೇಶಕ ರಕ್ಷಿತ್‌ರೆಡ್ಡಿ,ಸಂಸ್ಥೆಯ ಅಧ್ಯಕ್ಷ ರಾಮಚಂದ್ರರೆಡ್ಡಿ, ಕಾರ್ಯದರ್ಶಿ ಶ್ಯಾಮಲಾರೆಡ್ಡಿ ಬೋದಕ ಬೋದಕೇತರ ಸಿಬ್ಬಂದಿ ಇದ್ದರು.