Saturday, 23rd November 2024

Sukma Encounter: ನಕ್ಸಲೀಯರನ್ನು ಕೊಂದು ಡ್ಯಾನ್ಸ್‌ ಮಾಡಿದ ಸೈನಿಕರು! ವಿಡಿಯೊ

Sukma Encounter: Guns In Hand, Soldiers Dance To Celebrate Killing Of Naxals In Sukma Encounter-Watch

ನವದೆಹಲಿ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಕನಿಷ್ಠ 10 ಮಂದಿ ನಕ್ಸಲರನ್ನು ಎನ್‌ಕೌಂಟರ್‌ನಲ್ಲಿ (Sukma Encounter) ಹತ್ಯೆ ಮಾಡಿದ ಬಳಿಕ ಭದ್ರತಾ ಪಡೆಗಳು ನೃತ್ಯ ಮಾಡಿದ ಘಟನೆ ಶುಕ್ರವಾರ ನಡೆದಿದೆ. ಸ್ಥಳೀಯ ಹಾಡೊಂದಕ್ಕೆ ಭದ್ರತಾ ಪಡೆಗಳು ಡ್ಯಾನ್ಸ್‌ ಮಾಡುವ ಮೂಲಕ ನಕ್ಸಲರನ್ನು ಹತ್ಯೆಯನ್ನು ಸಂಭ್ರಮಿಸಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಭೆಜ್ಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆದಿತ್ತು. ಈ ವೇಳೆ ನಡೆದಿದ್ದ ಎನ್‌ಕೌಂಟರ್‌ನಲ್ಲಿ 10 ಮಂದಿ ನಕ್ಸಲೀಯರು ಹತ್ಯೆ ಮಾಡಲಾಗಿತ್ತು. ಆ ಮೂಲಕ ಭದ್ರತಾ ಪಡೆಗಳು ಸ್ಥಳದಿಂದ ಮೂರು ಸ್ವಯಂಚಾಲಿತ ರೈಫಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಒಡಿಶಾ ಮೂಲಕ ಹಲವು ನಕ್ಸಲೀಯರು ಛತ್ತೀಸ್‌ಗಢ ಪ್ರವೇಶಿಸುತ್ತಿದ್ದಾರೆ ಎಂಬ ಮಾಹಿತಿ ಯೋಧರಿಗೆ ಸಿಕ್ಕಿತ್ತು. ನಕ್ಸಲೀಯರನ್ನು ಸುತ್ತುವರಿಯಲು ಡಿಆರ್‌ಜಿ ತಂಡ ಹೊರಟಿತ್ತು. ಎರಡೂ ಕಡೆಯಿಂದ ನೂರಾರು ಸುತ್ತಿನ ಗುಂಡಿನ ಚಕಮಕಿ ನಡೆದಿತ್ತು ಹಾಗೂ ಹಲವು ಸ್ವಯಂಚಾಲಿತ ಶಸ್ತ್ರಾಸ್ತ್ರಗಳೂ ಪತ್ತೆಯಾಗಿವೆ.
ಈ ಎನ್‌ಕೌಂಟರ್ ಕೊರಾಜುಗುಡ, ದಾಂಟೆಸ್‌ಪುರಂ, ನಗರಂ, ಭಂಡಾರ್‌ಪದರ್‌ನ ಅರಣ್ಯ-ಗುಡ್ಡಗಳಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ವೇಳೆ ನಕ್ಸಲೀಯರು ಯೋಧರ ಮೇಲೆ ದಾಳಿ ನಡೆಸಿದ್ದರು. ಸೈನಿಕರು ಕೂಡ ಪ್ರತಿದಾಳಿ ನಡೆಸಿದ್ದರು. ಬಹಳ ಹೊತ್ತು ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿತ್ತು ಎಂದು ಐಜಿಪಿ ಸುಂದರರಾಜ್ ಮಾಹಿತಿ ನೀಡಿದ್ದಾರೆ.

ಡಿಆರ್‌ಜಿ ಸೈನಿಕರು ನೃತ್ಯದ ಮೂಲದ ಸಂಭ್ರಮ

ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 10 ಮಂದಿ ನಕ್ಸಲೀಯರನ್ನು ಕೊಂದ ಡಿಆರ್‌ಜಿ (ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್) ಯೋಧರು ನೃತ್ಯದ ಮೂಲಕ ಸಂಭ್ರಮಿಸಿದ್ದಾರೆ. ಜಗ್ದಲ್‌ಪುರದ ಪೊಲೀಸ್ ಸಮನ್ವಯ ಕೇಂದ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸ್ತಾರ್ ರೇಂಜ್ ಐಜಿ ಸುಂದರರಾಜ್ ಪಿ, “ಹತ್ಯೆಯಾದ ಮಾವೋವಾದಿಗಳನ್ನು ಗುರುತಿಸಿದ ನಂತರ ಅವರು ಯಾವ ಪಕ್ಷ ಅಥವಾ ಪ್ರದೇಶ ಸಮಿತಿಗೆ ಸೇರಿದವರು ಎಂಬುದು ಸ್ಪಷ್ಟವಾಗುತ್ತದೆ. ಬೆಳಗ್ಗೆಯಿಂದಲೇ ಯೋಧರೊಂದಿಗೆ ಹಲವು ಬಾರಿ ಎನ್‌ಕೌಂಟರ್‌ಗಳು ನಡೆದಿವೆ. ಎರಡು ದಿನಗಳ ಹಿಂದೆ ಒಡಿಶಾದಲ್ಲಿ ನಡೆದ ಎನ್‌ಕೌಂಟರ್‌ಗೂ ಈ ಘಟನೆಗೂ ಸಂಬಂಧವಿದೆ, ಎಂದು ತಿಳಿಸಿದ್ದಾರೆ.

ಸೈನಿಕರ ಈ ಯಶಸ್ಸು ಶ್ಲಾಘನೀಯ: ಮುಖ್ಯಮಂತ್ರಿ

“ಸೈನಿಕರು ಸಾಧಿಸಿದ ಈ ಯಶಸ್ಸು ಶ್ಲಾಘನೀಯ. ನಮ್ಮ ಸರ್ಕಾರವು ನಕ್ಸಲೀಯರ ವಿರುದ್ಧ ಬಲವಾಗಿ ಹೋರಾಡುತ್ತಿದೆ. ಶೂನ್ಯ ಸಹಿಷ್ಣುತೆಯ ನೀತಿಯಲ್ಲಿ ಕೆಲಸ ಮಾಡುತ್ತಿದೆ. ಬಸ್ತಾರ್‌ನಲ್ಲಿ ಅಭಿವೃದ್ಧಿ, ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ತಮ್ಮ ಅದಮ್ಯ ಧೈರ್ಯವನ್ನು ಪ್ರದರ್ಶಿಸಿದ ಭದ್ರತಾ ಪಡೆಗಳು ಇಂದು ಬೆಳಗ್ಗೆ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲೀಯರ ವಿರುದ್ಧ ಪ್ರಮುಖ ಕ್ರಮ ಕೈಗೊಂಡು ಎನ್‌ಕೌಂಟರ್‌ನಲ್ಲಿ 10 ನಕ್ಸಲೀಯರನ್ನು ಕೊಂದಿದ್ದಾರೆ,” ಎಂದು ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ

ಈ ಹಿಂದೆ ದಕ್ಷಿಣ ಬಸ್ತಾರ್, ಗರಿಯಾಬಂದ್ ಮತ್ತು ಕಂಕೇರ್‌ನಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆದಿತ್ತು. ನವೆಂಬರ್ 16 ರಂದು ಛತ್ತೀಸ್‌ಗಢದ ಅಬುಜ್ಮದ್ ಅರಣ್ಯದಲ್ಲಿ ನಕ್ಸಲ್ ಮತ್ತು ಪೊಲೀಸರ ನಡುವೆ ಎನ್‌ಕೌಂಟರ್ ನಡೆದಿತ್ತು. ಈ ಅವಧಿಯಲ್ಲಿ ಐವರು ನಕ್ಸಲೀಯರನ್ನು ಕೊಂದು ಶವಗಳನ್ನು ಹೊರತೆಗೆಯಲಾಗಿತ್ತು.