Saturday, 23rd November 2024

DK Shivakumar: ಭಕ್ತಿ, ಜ್ಞಾನ, ಸಂಸ್ಕೃತಿ ಸಂಗಮವೇ ಬಿಜಿಎಸ್; ಡಿ.ಕೆ. ಶಿವಕುಮಾರ್ ವ್ಯಾಖ್ಯಾನ

DK Shivakumar

ಬೆಂಗಳೂರು: ಬಿಜಿಎಸ್ ಸಂಸ್ಥೆಯು ಭಕ್ತಿ, ಜ್ಞಾನ, ಸಂಸ್ಕೃತಿಯ ಸಂಗಮವಾಗಿದ್ದು, ಸುಮಾರು 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಪ್ರತಿ ವರ್ಷ ಲಕ್ಷಾಂತರ ಮಕ್ಕಳಿಗೆ ಅಕ್ಷರ ದಾಸೋಹ ಮಾಡಿಕೊಂಡು ಬಂದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಬೆಂಗಳೂರಿನ ಕೆಂಗೇರಿಯಲ್ಲಿ ಶುಕ್ರವಾರ ನಡೆದ ಬಿಜಿಎಸ್ ಉತ್ಸವದಲ್ಲಿ ಅವರು ಮಾತನಾಡಿದರು.

ಆದಿ ಚುಂಚನಗಿರಿ ಮಠದ ವತಿಯಿಂದ 500 ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗಿದೆ. ಈ ಸಂಸ್ಥೆಗಳಲ್ಲಿ 1.5 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಉದ್ಯೋಗ ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪರ್ಯಾಯವಾಗಿ ನಮ್ಮ ಮಠಮಾನ್ಯಗಳು ರಾಜ್ಯದಲ್ಲಿ ಅಕ್ಷರದಾಸೋಹ ಮಾಡಿಕೊಂಡು ಬಂದಿವೆ. ಇದಕ್ಕಿಂತ ದೊಡ್ಡ ಮಾನವೀಯ ಸೇವೆ ಮತ್ತೊಂದಿಲ್ಲ ಎಂದು ಸರ್ಕಾರದ ಪ್ರತಿನಿಧಿಯಾಗಿ ಹೇಳಬಯಸುತ್ತೇನೆ.

ಈ ಸುದ್ದಿಯನ್ನೂ ಓದಿ | DK Shivakumar: ಕರಾವಳಿ ಜನರ ವಲಸೆ ತಪ್ಪಿಸಲು ವಿಶೇಷ ಯೋಜನೆ

ಈ ಕಾರ್ಯಕ್ರಮದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಗಳನ್ನು ಹಾಗೂ ಅವರ ಮಾರ್ಗದರ್ಶನ ಸ್ಮರಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದ ಅವರು, ಇದು ನಮ್ಮ ಸಂಸ್ಕೃತಿ, ಇದೇ ನಮ್ಮ ದೇಶದ ಆಸ್ತಿ. ಇಂದು ಬಾಲಗಂಗಾಧರನಾಥ ಸ್ವಾಮೀಜಿಗಳ ಜಯಂತಿಯಂದು ನಿಮ್ಮೆಲ್ಲರ ಪರವಾಗಿ ನಾನು ದೀಪ ಬೆಳಗಿಸಿದ್ದೇನೆ. ಶುಭಂ ಕರೋತಿ ಕಲ್ಯಾಣಂ, ಆರೋಗ್ಯ ಧನ ಸಂಪದಂ, ಜ್ಞಾನಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ ಶ್ಲೋಕದ ಆಶಯದಂತೆ ನಿಮ್ಮೆಲ್ಲರಿಗೂ ಆರೋಗ್ಯ, ಐಶ್ವರ್ಯ, ಸಂಪತ್ತು, ವಿದ್ಯೆ ಎಲ್ಲವೂ ಸಿಗಲಿ ಎಂದು ಆಶಿಸುತ್ತೇನೆ ಎಂದರು.

ಶಿಕ್ಷಣ ಸಂಸ್ಥೆ ಕಾರ್ಯಕ್ರಮದಲ್ಲಿ ನಾವು ಸೇರಿದ್ದು, ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ನಾನು ಕೆಲ ಕಾಲ ಕಾರ್ಯಕ್ರಮ ನೋಡಿ ಸಂತೋಷವಾಯಿತು. ಬಿಜಿಎಸ್ ಎಂದರೆ ಕೇವಲ ವಿದ್ಯಾ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಸಾಹಿತ್ಯ, ಕಲೆ ಕ್ಷೇತ್ರಕ್ಕೆ ಆದ್ಯತೆ ನೀಡಿ ಗ್ರಾಮೀಣ ಕಲೆಗಳನ್ನು ಉಳಿಸಿ, ಬೆಳೆಸಲು ಸಹಕಾರ ನೀಡುತ್ತಿದೆ ಎಂದು ಹೇಳಿದರು.

25 ವರ್ಷಗಳ ಹಿಂದೆ ನಾನು ಸಹಕಾರ ಮಂತ್ರಿಯಾಗಿದ್ದಾಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ಯಾರೀಸ್ ದೇಶಕ್ಕೆ ಭೇಟಿ ನೀಡಿದ್ದೆ. ಆ ಕಾರ್ಯಕ್ರಮದ ದಿನ ನನ್ನ ಜನ್ಮದಿನವಾಗಿತ್ತು. ಅಂದು ವೇದಿಕೆ ಮೇಲೆ ಕರೆದು ನನ್ನ ಪರಿಚಯಿಸಿ ಕೇಕ್ ಕತ್ತರಿಸಲು ಹೇಳಿದರು. ಆ ಸಂದರ್ಭದಲ್ಲಿ ಮೇಣದ ದೀಪ ಆರಿಸಲು ಹೇಳಿದರು. ಆಗ ವ್ಯಕ್ತಿಯೊಬ್ಬ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವರು ಭಾರತೀಯರು ಅವರದ್ದು ದೀಪ ಹಚ್ಚುವ ಸಂಸ್ಕೃತಿಯೇ ಹೊರತು, ದೀಪ ಆರಿಸುವ ಸಂಸ್ಕೃತಿಯಲ್ಲ ಎಂದು ಹೇಳಿದರು.

ನೀವು ನಿಮ್ಮ ಮೂಲ ಮರೆಯಬಾರದು. ಪೋಷಕರು, ಶಾಲೆ, ಶಿಕ್ಷಕರೇ ನಿಮ್ಮ ಮೂಲ. ಅವರನ್ನು ಎಂದಿಗೂ ಮರೆಯಬಾರದು. ನಾವು ನಮ್ಮ ಮನೆಗಳನ್ನು ರಕ್ಷಿಸಿಕೊಂಡಂತೆ, ಮಠವನ್ನು ರಕ್ಷಣೆ ಮಾಡಿಕೊಳ್ಳಬೇಕು. ಬಿಜಿಎಸ್ ಸಂಸ್ಥೆ ಆಲದಮರದಂತೆ, ನಿರಂತರವಾಗಿ ಬೆಳೆದು ಜನರಿಗೆ ನೆರಳಾಗಿ ನಿಲ್ಲುತ್ತದೆ. ಬಾಲಗಂಗಾಧರನಾಥ ಸ್ವಾಮೀಜಿಗಳು ಹಾಕಿಕೊಟ್ಟಿರುವ ಅಡಿಪಾಯ ಮಹತ್ವದ್ದಾಗಿದ್ದು, ನಿರ್ಮಲಾನಂದ ಸ್ವಾಮೀಜಿಗಳು ಹಾಗೂ ಇತರೆ ಸ್ವಾಮೀಜಿಗಳು ಬಹಳ ಆಸ್ಥೆಯಿಂದ ಬೆಳೆಸಿಕೊಂಡು ಹೋಗುತ್ತಿದ್ದಾರೆ ಎಂದರು.

ಈ ಸುದ್ದಿಯನ್ನೂ ಓದಿ | Bengaluru News: ಬೆಂಗಳೂರಿನಲ್ಲಿ ಅಂತರ್‌ ಕಾಲೇಜು ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಿ ಮಾರ್ಗದರ್ಶನ ನೀಡುತ್ತಿರುವ ಈ ಸಂಸ್ಥೆ ಕೊಡುಗೆ ಅನನ್ಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.