Wednesday, 30th October 2024

ದೇಶ ಹಿತದ ಆ ಹೇಳಿಕೆ ಬಗ್ಗೆ ಅವಲೋಕನ ಅಗತ್ಯವಲ್ಲವೇ ?

Bipin Rawat

ಅಭಿವ್ಯಕ್ತಿ

ಚಂದ್ರಶೇಖರ ಬೇರಿಕೆ

ನಮ್ಮ ಸೈನಿಕರ ಮೇಲೆ ಕಲ್ಲೆಸೆಯುತ್ತಾ, ಪಾಕಿಸ್ತಾನ ಮತ್ತು ಐಸಿಸ್ ಧ್ವಜಗಳನ್ನು ಪ್ರದರ್ಶಿಸುತ್ತಾ, ದೇಶವಿರೋಧಿ ಚಟುವಟಿಕೆ ಗಳನ್ನು ಮುಂದುವರಿಸಿದರೆ ಅವರನ್ನು ಭಯೋತ್ಪಾದಕರು ಹಾಗೂ ದೇಶದ್ರೋಹಿಗಳೆಂದು ಪರಿಗಣಿಸಲಾಗುವುದು ಮತ್ತು ನಿರ್ದಾಕ್ಷಿಣ್ಯವಾಗಿ ಹೊಡೆದುರುಳಿಸಲಾಗುವುದು’.

ಅನ್ನ, ನೀರು, ಆಶ್ರಯ ನೀಡಿದ ಮಾತೃಭೂಮಿಗೆ ದ್ರೋಹ ಬಗೆದು ದುಂಡಾವರ್ತನೆ ತೋರುವವರಿಗೆ ಫೆಬ್ರವರಿ 2017ರಂದು ಈ ರೀತಿಯ ಎಚ್ಚರಿಕೆಯನ್ನು ನೀಡಿದವರೇ ಭಾರತೀಯ ಭೂಸೇನೆಯ ಆಗಿನ ಮುಖ್ಯಸ್ಥ ಜನರಲ್ ಬಿಪಿನ್ ರಾವತ್. ಹಲವು ದಶಕಗಳಿಂದ ಭಾರತದ ನೆಲದಲ್ಲಿ ನಡೆಯುತ್ತಿದ್ದ ಇಂತಹ ದೇಶ ವಿರೋಧಿ ಕೃತ್ಯಗಳಿಂದ ರೋಸಿ ಹೋಗಿದ್ದ ಭಾರತೀಯ ಪ್ರಜೆಗಳು ಭೂಸೇನಾ ಮುಖ್ಯಸ್ಥರ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸುವುದು ಮತ್ತು ಹೆಮ್ಮೆ ಪಡುವುದು ಸ್ವಾಭಾವಿಕ.

ಆ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೋಟ್ಯಂತರ ದೇಶಾಭಿಮಾನಿಗಳ ಪೈಕಿ ನಾನೂ ಒಬ್ಬ. ಹಾಗೆಯೇ ಅದನ್ನು ಇನ್ನೊಂದಷ್ಟು ಜನರೊಂದಿಗೆ ಹಂಚಿಕೊಳ್ಳಬೇಕಲ್ಲವೇ? ಅಂತೆಯೇ ದೇಶ ಹಿತದ ಆ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡರೆ ಆ ಹೇಳಿಕೆಗೆ ಮೆಚ್ಚುಗೆ ವ್ಯಕ್ತವಾಗಬಹುದು ಎಂಬ ಆಶಯ ದೊಂದಿಗೆ ನನ್ನ ಸ್ನೇಹಿತರ ಜತೆಗೆ ಆ ಹೇಳಿಕೆಯ ವರದಿ ಯನ್ನು ಹಂಚಿಕೊಂಡೆ. ಆದರೆ ಆ ವರದಿಗೆ ಮೆಚ್ಚುಗೆ ವ್ಯಕ್ತವಾಗುವುದಿರಲಿ, ವಿರೋಧ ವ್ಯಕ್ತವಾದರೆ? ಈ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದವರ ಜತೆ ದೀರ್ಘವಾದ – ಪ್ರತಿವಾದ ನಡೆದ ಬಳಿಕ ಆ ವ್ಯಕ್ತಿಯ ಮನಸ್ಥಿತಿಯನ್ನು ಅರ್ಥಮಾಡಿಕೊಂಡ ಸಾರ್ಥಕತೆ ಮತ್ತು ಅವರ ನಿಷ್ಠೆಯನ್ನು ಹೊರಗೆಡದ ಸಂತೃಪ್ತ ಭಾವದೊಂದಿಗೆ ನನ್ನ ಸಮರ್ಥನೆಗೆ ಬದ್ಧನಾಗಿ ವಾದ – ಪ್ರತಿವಾದ ದಿಂದ ವಿರಮಿಸಿದೆ.

1958, ಮಾರ್ಚ್ 16ರಂದು ಉತ್ತರಾಖಂಡ್‌ನ ಪೌರಿಯಲ್ಲಿ ಜನಿಸಿದ ಜನರಲ್ ಬಿಪಿನ್ ರಾವತ್ ಮೂಲತಃ ಸೈನಿಕ ಕುಟುಂಬದ ಹಿನ್ನೆಲೆಯವರು. ಅವರ ತಂದೆ ಲೆಫ್ಟಿನೆಂಟ್ ಜನರಲ್ ಲಕ್ಷ್ಮಣ್ ಸಿಂಗ್ ರಾವತ್ 1988ರಲ್ಲಿ ಭೂಸೇನಾ ಸಿಬ್ಬಂದಿ ಉಪ ಮುಖ್ಯಸ್ಥ ರಾಗಿ ನಿವೃತ್ತರಾದವರು. ಜನರಲ್ ಬಿಪಿನ್ ರಾವತ್ ಉತ್ತರಾಖಂಡ್‌ನ ಡೆಹ್ರಾಡೂನ್ ಮತ್ತು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ವಿದ್ಯಾಭ್ಯಾಸದ ಬಳಿಕ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಖಡಕ್ ವಾಸ್ಲಾ, ಪುಣೆಯಲ್ಲಿ ವ್ಯಾಸಂಗ ಮಾಡಿದರು. ಭಾರತೀಯ ಮಿಲಿಟರಿ ಅಕಾಡೆಮಿ ಡೆಹ್ರಾಡೂನ್, ಉತ್ತರಾಖಂಡ್‌ನಲ್ಲಿ ತರಬೇತಿ ಪಡೆದು ‘ಸ್ವೋರ್ಡ್ ಆಫ್ ಆನರ್’ ಗೌರವಕ್ಕೆ ಪಾತ್ರರಾದ ವರು.

ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜು, ವೆಲ್ಲಿಂಗ್ಟನ್, ತಮಿಳುನಾಡಿನಲ್ಲಿ ರಕ್ಷಣಾ ಅಧ್ಯಯನದಲ್ಲಿ ಎಂ.ಫಿಲ್ ಪದವಿ ಪಡೆದ ಬಳಿಕ
ಅಮೆರಿಕಾದ ಆರ್ಮಿ ಕಮಾಂಡ್ ಮತ್ತು ಜನರಲ್ ಸ್ಟಾಫ್ ಕಾಲೇಜು, ಪೋರ್ಟ್ ಲೀವೆನ್ವರ್ತ್, ಕನ್ಸಾಸ್‌ನಲ್ಲಿ ತರಬೇತಿ
ಪಡೆದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಮ್ಯಾನೇಜ್ ಮೆಂಟ್ ಮತ್ತು ಕಂಪ್ಯೂಟರ್ ಸ್ಟಡೀಸ್‌ನಲ್ಲಿ ಡಿಪ್ಲೊಮಾವನ್ನೂ
ಮಾಡಿದ್ದು, ಮಿಲಿಟರಿ ಮಾಧ್ಯಮ ಕಾರ್ಯತಂತ್ರದ ಅಧ್ಯಯನಗಳ ಕುರಿತಾದ ಸಂಶೋಧನೆಗೆ 2011ರಲ್ಲಿ ಮೀರತ್ ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ (ತತ್ತ್ವಶಾಸ್ತ್ರ) ಪಡೆದಿರುತ್ತಾರೆ.

‘ರಾಷ್ಟ್ರೀಯ ಭದ್ರತೆ’ ಮತ್ತು ‘ನಾಯಕತ್ವ’ ಕುರಿತಾದ ಇವರ ಹಲವಾರು ಲೇಖನಗಳು ವಿವಿಧ ನಿಯತಕಾಲಿಕೆ ಗಳಲ್ಲಿ ಪ್ರಕಟಣೆ ಯಾಗಿರುತ್ತದೆ. ಜನರಲ್ ಬಿಪಿನ್ ರಾವತ್ ಡಿಸೆಂಬರ್ 1978ರಲ್ಲಿ ಗೂರ್ಖಾ ರೆಜಿಮೆಂಟ್ ಮೂಲಕ ಸೇನೆಗೆ ನಿಯುಕ್ತಿಗೊಂಡರು. ಪ್ರಮುಖ ಹುದ್ದೆಗಳ ಪೈಕಿ ಸೆಪ್ಟೆಂಬರ್ 2016 ರಿಂದ ಡಿಸೆಂಬರ್ 2016ರವರೆಗೆ ಸೇನಾ ಸಿಬ್ಬಂದಿಯ 37ನೇ ಉಪ ಮುಖ್ಯಸ್ಥ,
ಡಿಸೆಂಬರ್ 2016ರಿಂದ ಡಿಸೆಂಬರ್ 2019ರವರೆಗೆ ಭಾರತೀಯ ಸೇನಾ ಪಡೆಯ 27ನೇ ಮುಖ್ಯಸ್ಥ, ಸೆಪ್ಟೆೆಂಬರ್ 2019ರಿಂದ
ಡಿಸೆಂಬರ್ 2019ರ ವರೆಗೆ ಸಿಬ್ಬಂದಿ ಸಮಿತಿಯ ಮುಖ್ಯಸ್ಥರ 32ನೇ ಚೇರ್‌ಮೆನ್ ಆಗಿ ಸೇವೆ ಸಲ್ಲಿಸಿದವರು.

ಜ್ಯೇಷ್ಠತೆಯಲ್ಲಿ ಇಬ್ಬರು ಲೆಫ್ಟಿನೆಂಟ್ ಜನರಲ್‌ಗಳಾದ ಲೆ.ಪ್ರವೀಣ್ ಬಕ್ಷಿ ಮತ್ತು ಲೆ. ಪಿ. ಎಂ. ಹರಿಜ್ ಅವರನ್ನು ಕೇಂದ್ರ ಸರಕಾರ ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಹುದ್ದೆಯ ನೇಮಕದಿಂದ ಹೊರಗಿಟ್ಟು ಜನರಲ್ ಬಿಪಿನ್ ರಾವತ್ ಅವರನ್ನು ಈ ಹುದ್ದೆಗೆ
ಪರಿಗಣಿಸಿತ್ತು ಎಂಬುದು ಗಮನಾರ್ಹ. ಅವರು ಗೂರ್ಖಾ ಬ್ರಿಗೇಡ್‌ನಿಂದ ಸೇನೆಯ ಮುಖ್ಯಸ್ಥರಾದ ಮೂರನೇ ಅಧಿಕಾರಿ.

2019ರ ಡಿಸೆಂಬರ್ 30ರಂದು ಸೇನಾ ಪಡೆಯ ಮುಖ್ಯಸ್ಥ ಸ್ಥಾನದಿಂದ ನಿವೃತ್ತಿಗೊಂಡ ಜನರಲ್ ಬಿಪಿನ್ ರಾವತ್ ಭಾರತ
ಸರಕಾರ ಹೊಸದಾಗಿ ಸೃಜಿಸಿದ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆ ಒಳಗೊಂಡ ‘ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್) ಹುದ್ದೆಯ ಮೊದಲ ಮುಖ್ಯಸ್ಥರಾಗಿ 2019ರ ಡಿಸೆಂಬರ್ 31ರಿಂದ ಮೂರು ವರ್ಷಗಳ ಅವಧಿಗೆ ನಿಯುಕ್ತಿಗೊಂಡಿದ್ದಾರೆ.

ಭಾರತೀಯ ಸೇನೆಯಲ್ಲಿ ಸೆಕೆಂಡ್ ಲೆಫ್ಟಿನೆಂಟ್, ಲೆಫ್ಟಿನೆಂಟ್, ಕ್ಯಾಪ್ಟನ್, ಮೇಜರ್, ಲೆಫ್ಟಿನೆಂಟ್ ಕರ್ನಲ್, ಕರ್ನಲ್, ಬ್ರಿಗೇಡಿ ಯರ್, ಮೇಜರ್ ಜನರಲ್, ಲೆಫ್ಟಿನೆಂಟ್ ಜನರಲ್, ಜನರಲ್ ಸ್ಥಾನಗಳನ್ನು ಅಲಂಕರಿಸಿದವರು. 37 ವರ್ಷಗಳ ಸುದೀರ್ಘ ಸೇನಾ ಅನುಭವ, ಯುದ್ಧಾನುಭವ ಹೊಂದಿರುವ ಹಾಗೂ ಭಾರತದ ವಿವಿಧ ಭಾಗಗಳಲ್ಲಿ ಮತ್ತು ವಿವಿಧ ಹುದ್ದೆಯಲ್ಲಿ  ಕಾರ್ಯನಿರ್ವ ಹಿಸಿರುವ ಜನರಲ್ ಬಿಪಿನ್ ರಾವತ್ ಒಬ್ಬ ಅಪ್ಪಟ ದೇಶಭಕ್ತ ಸೈನ್ಯಾಧಿಕಾರಿಯಾಗಿದ್ದು, ಅತಿ ಎತ್ತರದ ಪ್ರದೇಶಗಳಲ್ಲಿ ಯುದ್ಧ ಮತ್ತು ಪ್ರತಿ ಬಂಡಾಯ ಕಾರ್ಯಾಚರಣೆಗಳಲ್ಲಿ ಅನುಭವ ಮತ್ತು ಪರಿಣತಿ ಹೊಂದಿದವರಾಗಿದ್ದಾರೆ.

ಬಿಪಿನ್ ರಾವತ್ ಅವರ ಸೇವಾವಧಿಯಲ್ಲಿ ಪಡೆದ ಪದಕಗಳ ಪೈಕಿ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ್ ಯುದ್ಧ್ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಯುಧ್ ಸೇವಾ ಪದಕ, ಸೇನಾ ಪದಕ, ವಿಶಿಷ್ಟ ಸೇವಾ ಪದಕ, ಸೈನ್ಯ ಸೇವಾ ಪದಕ, ವಿದೇಶ್ ಸೇವಾ ಪದಕ, ಆಪರೇಷನ್ ಪರಾಕ್ರಮ್ ಪದಕ ಪ್ರಮುಖ ವಾದವುಗಳು. ಸೇನಾ ಸಿಬ್ಬಂದಿ ಮುಖ್ಯಸ್ಥರಿಂದ ಎರಡು ಬಾರಿ ಮತ್ತು ಸೇನಾ ಕಮಾಂಡರ್ ರವರಿಂದ ಒಂದು ಬಾರಿ ಪ್ರಶಂಸಾ ಗೌರವವನ್ನು ಪಡೆದಿರುತ್ತಾರೆ.

ನೇಪಾಳ ಸರಕಾರ ದಿಂದ ಸಾಂಪ್ರದಾಯಿಕವಾಗಿ ಘೋಷಿಸ ಲಾಗುವ ನೇಪಾಳಿ ಸೈನ್ಯದ ಗೌರವ ಜನರಲ್ ಗೌರವವನ್ನು ಪಡೆದಿರು ತ್ತಾರೆ. ಅಷ್ಟಕ್ಕೂ ಬಿಪಿನ್ ರಾವತ್ ಫೆಬ್ರವರಿ 2017ರಂದು ಹೇಳಿದ್ದಾದರೂ ಏನು? ಕಾಶ್ಮೀರ ಕಣಿವೆಯಲ್ಲಿ ಸೈನಿಕ ಕಾರ್ಯಾಚರಣೆ ವೇಳೆ ಸ್ಥಳೀಯರು ಪ್ರತಿರೋಧ ವ್ಯಕ್ತಪಡಿಸುವುದರಿಂದ ಭದ್ರತಾ ಸಿಬ್ಬಂದಿಗಳ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿತ್ತು. ಸ್ಥಳೀಯರು ಭಯೋತ್ಪಾದಕರಿಗೆ ತಪ್ಪಿಸಿಕೊಳ್ಳಲು ನೆರವಾಗುವ ಘಟನೆಗಳೂ ನಡೆಯುತ್ತಿತ್ತು. ಸ್ಥಳೀಯರ ಪ್ರತಿರೋಧಗಳ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಒಬ್ಬ ಮೇಜರ್ ಸೇರಿದಂತೆ ನಾಲ್ವರು ಭಾರತೀಯ ಜವಾನರು ಹುತಾತ್ಮರಾದ ಬಳಿಕ ಬಿಪಿನ್ ರಾವತ್ ಕಾಶ್ಮೀರದ ಯುವಕರನ್ನು ಉದ್ದೇಶಿಸಿ, ಭಯೋತ್ಪಾದಕರಿಗೆ ಬೆಂಬಲ ನೀಡಬೇಡಿ, ಸೈನಿಕ ಕಾರ್ಯಚರಣೆಗೆ ಅಡ್ಡಿಯಾಗ ಬೇಡಿ, ಕೈಯಲ್ಲಿ ಗನ್ ಹಿಡಿಯಬೇಡಿ, ಕಲ್ಲು ಎಸೆಯಬೇಡಿ, ತಪ್ಪುದಾರಿಯಲ್ಲಿರುವ ಯುವಕರೆಲ್ಲರೂ ದೇಶದ ಮುಖ್ಯ
ವಾಹಿನಿಗೆ ಬನ್ನಿ.

ಇಲ್ಲದಿದ್ದಲ್ಲಿ ಕಾಶ್ಮೀರದ ಸ್ಥಳೀಯ ಜನರಲ್ಲಿ ಯಾರು ಯಾರು ಸೈನ್ಯದ ಮೇಲೆ ಆಕ್ರಮಣ ಮತ್ತು ಉಗ್ರರ ವಿರುದ್ಧ ಕಾರ್ಯಾ ಚರಣೆಗೆ ಅಡ್ಡಿಪಡಿಸುತ್ತಿರೋ, ಅವರು ಇನ್ನೂ ಇದೇ ರೀತಿ ನಮ್ಮ ಸೈನಿಕರ ಮೇಲೆ ಕಲ್ಲೆಸೆಯುತ್ತಾ, ಪಾಕಿಸ್ತಾನ ಮತ್ತು ಐಸಿಸ್ ಧ್ವಜಗಳನ್ನು ಪ್ರದರ್ಶಿಸುತ್ತಾ ದೇಶರೋಧಿ ಚಟುವಟಿಕೆಗಳನ್ನು ಮುಂದುವರಿಸಿದರೆ ಅವರನ್ನು ಭಯೋತ್ಪಾದಕರು ಮತ್ತು ದೇಶದ್ರೋಹಿಗಳೆಂದು ಪರಿಗಣಿಸಲಾಗುವುದು ಮತ್ತು ನಿರ್ದಾಕ್ಷಿಣ್ಯವಾಗಿ ಹೊಡೆದುರುಳಿಸಲಾಗುವುದು!.

ಕೆಲವು ದೇಶದ್ರೋಹಿ ಕಾಶ್ಮೀರಿ ಯುವಕರು ಸೈನಿಕ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತೀಯ ಸೈನಿಕರ ಮೇಲೆ ಕಲ್ಲು ತೂರಾಟ ನಡೆಸಿ ಸೈನಿಕರು ಮರಣ ಹೊಂದುವಂತೆ ಮಾಡಿದ್ದು ಮಾತ್ರವಲ್ಲ ಭಯೋತ್ಪಾದಕರು ಪರಾರಿಯಾಗಲು ಕಾರಣ ರಾಗಿದ್ದರು. ಅಲ್ಲದೇ ಗಾಯಗೊಂಡು ಬಿದ್ದ ಭಾರತೀಯ ಸೇನೆಯ ಮೇಜರ್ ಅವರನ್ನು ಕರೆದುಕೊಂಡು ಹೋಗುತ್ತಿದ್ದ
ವಾಹನಕ್ಕೂ ಕಲ್ಲೆಸೆದಿದ್ದರು. ಜಮ್ಮು ಕಾಶ್ಮೀರದಲ್ಲಿ ಭೀಕರ ಪ್ರವಾಹ ಬಂದಾಗ ಅವರ ರಕ್ಷಣೆಗೆ ತಮ್ಮ ಪ್ರಾಣದ ಹಂಗು
ತೊರೆದು ಧಾವಿಸಿದ್ದ ಸೈನಿಕರ ಮೇಲೆಯೇ ಆಕ್ರಮಣದಲ್ಲಿ ತೊಡಗಿದ್ದು, ಸ್ಥಳೀಯರ ಈ ದುಂಡಾವರ್ತನೆಯಿಂದ ಸೈನಿಕರು
ಹುತಾತ್ಮರಾದಾಗ ಸೈನ್ಯದ ಮುಖ್ಯಸ್ಥನಾಗಿ ಸುಮ್ಮನೆ ಕೂರಬೇಕೇ? ಸ್ಥಳೀಯರೇ ಈ ಘಟನೆಯಲ್ಲಿ ಭಾಗಿಗಳು ಅಂತ
ಗೊತ್ತಿದ್ದರೂ ಕಠಿಣ ಕ್ರಮ ಕೈಗೊಳ್ಳುವ ಬದಲು ಯುವಕರು ಪರಿವರ್ತನೆ ಆಗುವುದಿದ್ದರೆ ಆಗಲಿ ಎಂಬ ಆಶಾವಾದದೊಂದಿಗೆ
ಕೇವಲ ಒಂದು ಎಚ್ಚರಿಕೆ ಕೊಟ್ಟಿದ್ದಾರಷ್ಟೇ.

ಸದ್ಯ ಕಾಶ್ಮೀರದ ಸ್ಥಳೀಯ ಕಿಡಿಗೇಡಿ ಯುವಕರುಗಳ ಉಪಟಳ ನಿಯಂತ್ರಣಕ್ಕೆ ಬರಲು ಇವರೇ ಪ್ರಮುಖ ಕಾರಣ ಎಂಬುದು ಗಮನಾರ್ಹ. ಭಾರತದ ಪೂರ್ವ ಗಡಿ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿರು ವುದು ಇದೇ ಜನರಲ್ ಬಿಪಿನ್ ರಾವತ್. ಪಾಕಿಸ್ತಾನದ ವಿರುದ್ಧದ ಸರ್ಜಿಕಲ್ ಸ್ಟ್ರೆಕ್‌ನಲ್ಲಿ ‘ಮಾಸ್ಟರ್ ಆಫ್ ಸರ್ಜಿಕಲ್ ಸ್ಟ್ರೆಕ್’ ಎಂದು ಗುರುತಿಸಿಕೊಂಡವರು.

ಬಾಲಾಕೋಟ್ ಏರ್ ಸ್ಟ್ರೆಕ್ ಸಂದರ್ಭದಲ್ಲಿ ಪಾಕಿಸ್ತಾನದಿಂದ ಯಾವುದೇ ಭೂ ಆಕ್ರಮಣವನ್ನು ತಡೆಯಲು ಯೋಜನೆ ರೂಪಿಸಿ ದವರು. 1987ರಲ್ಲಿ ಅರುಣಾಚಲ ಪ್ರದೇಶದ ಸುಮದೊರೋಂಗ್ ಚು ಕಣಿವೆಯಲ್ಲಿ ಚೀನಾದ ಪೀಪಲ್ಸ್‌ ಲಿಬರೇಷನ್ ಆರ್ಮಿ ಮತ್ತು ಭಾರತದ ಸೇನೆ ಮುಖಾಮುಖಿಯಾದಾಗ ಭಾರತದ ಕಡೆಯಿಂದ ಬಿಪಿನ್ ರಾವತ್ ನೇತೃತ್ವದ ಬಟಾಲಿಯನ್ ಪ್ರಮುಖ ಪಾತ್ರವಹಿಸಿತ್ತು.

2015ರಲ್ಲಿ ಮಯನ್ಮಾರ್‌ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲೂ ಇವರ ಪಾತ್ರ ಮಹತ್ತರ
ವಾದುದು. ಕಾಂಗೋದಲ್ಲಿ ವಿಶ್ವಸಂಸ್ಥೆಯ ಪರವಾಗಿ ಭಾರತೀಯ ಸೇನಾ ಪಡೆಯ ನೇತೃತ್ವವನ್ನೂ ವಹಿಸಿರುತ್ತಾರೆ. ಪ್ರಸಕ್ತ ಭಾರತ
ಹಾಗೂ ಚೀನಾ ನಡುವಿನ ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತ ಹೆಚ್ಚಿನ ಸಂಖ್ಯೆಯ ಯೋಧರನ್ನು ಲಡಾಖ್ ಪ್ರಾಂತ್ಯದಲ್ಲಿ ನಿಯೋಜಿಸಿದೆ. ಇದೇ ಸಂದರ್ಭದಲ್ಲಿ ಈ ಲಾಭವನ್ನು ಪಡೆಯುವ ದುಸ್ಸಾಹಕ್ಕೆ ಪಾಕಿಸ್ತಾನ ಕೈ ಹಾಕಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಸೆಪ್ಟೆಂಬರ್ ಮೊದಲ ವಾರದಲ್ಲಿ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ ಜನರಲ್ ಬಿಪಿನ್ ರಾವತ್.

ಬಿಪಿನ್ ರಾವತ್ ನೇಪಾಳ, ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್, ಕಜಕಿಸ್ತಾನ್, ತುರ್ಕ್ ಮೆನಿಸ್ತಾನ್, ಶ್ರೀಲಂಕಾ, ರಷ್ಯಾ, ತಾಂಜೆನಿಯಾ, ಕೀನ್ಯಾ, ಅಮೆರಿಕಾ ಮತ್ತು ಮಾಲ್ದೀವ್ಸ್ ದೇಶ ಗಳೊಂದಿಗಿನ ಅನೇಕ ಅಂತಾರಾಷ್ಟ್ರೀಯ ದ್ವಿಪಕ್ಷೀಯ ಭೇಟಿಗಳಲ್ಲಿ ಭಾರತದ ಭಾಗವಾಗಿದ್ದರು. ಸದ್ಯ ಭಾರತದ ‘ರಕ್ಷಣಾ ಪಡೆಗಳ ಮುಖ್ಯಸ್ಥ’ ಹುದ್ದೆಯ ಮೊದಲ ಮುಖ್ಯಸ್ಥರಾಗಿ 2020, ಜನವರಿ 1ರಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮೂರೂ ಪಡೆಗಳ ಮುಖ್ಯಸ್ಥರಂತೆ ರಕ್ಷಣಾ ಪಡೆಗಳ ಮುಖ್ಯಸ್ಥರೂ ‘4 ಸ್ಟಾರ್’ ಅಧಿಕಾರಿ ಯಾಗಿದ್ದು, ಅದೇ ವೇತನ ಶ್ರೇಣಿ ಯಲ್ಲಿರುತ್ತಾರೆ. ಆದರೆ ಇವರು ಸಮಾನರಲ್ಲಿ ಮೊದಲಿಗರಾಗಿರುತ್ತಾರೆ. ರಕ್ಷಣಾ ಪಡೆಗಳ ಮುಖ್ಯಸ್ಥರು ಭಾರತೀಯ ಸೇನೆಯ ಏಕಗವಾಕ್ಷಿ ಸಲಹೆಗಾರರಾಗಿರುತ್ತಾರೆ. ಮೂರೂ ಪಡೆಗಳಿಗೆ ಸಂಬಂಧಿಸಿದ ವಿಚಾರಗಳು ಮತ್ತು ಮೂರು ಪಡೆಗಳಲ್ಲಿ ಎದುರಾಗ ಬಹುದಾದ ಸಮಸ್ಯೆಗಳನ್ನು ನಿವಾರಿಸಿ, ಸಮನ್ವಯ ರೂಪಿಸುವ ಮೂಲಕ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗು ವಂತೆ ಸರಕಾರಕ್ಕೆ ಸಲಹೆ ನೀಡುವುದು, ರಕ್ಷಣಾ ನೀತಿ ರೂಪಿಸುವುದು, ಶಸ್ತ್ರಾಸ್ತ್ರ ಖರೀದಿ, ತರಬೇತಿ, ಸೇನಾ ಕಾರ್ಯಾಚರಣೆ ಗಳನ್ನು ಯೋಜಿಸುವುದು ಸೇರಿದಂತೆ ಮುಂತಾದ ವಿಚಾರಗಳಲ್ಲಿ ಸಮನ್ವಯ ಸಾಧಿಸುವುದು, ತುರ್ತು ಸಂದರ್ಭದಲ್ಲಿ ಸರಕಾರವು ಮೂರೂ ಸೇನಾ ಪಡೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಸಮಾಲೋಚಿಸುವ ಬದಲು ರಕ್ಷಣಾ ಪಡೆಗಳ ಮುಖ್ಯಸ್ಥರ ಜೊತೆ ಚರ್ಚಿಸಿ ತ್ವರಿತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.

ಜಂಟಿ ಯೋಜನೆಗಳ ಮೂಲಕ ಸೇನೆಗಳಿಗೆ ಸಿಬ್ಬಂದಿ ನೇಮಕ, ತರಬೇತಿ ನೀಡುವುದು, ಅಗತ್ಯ ಸಾಮಗ್ರಿಗಳನ್ನು ಪೂರೈಸುವುದು, ಸಹಭಾಗಿತ್ವಕ್ಕೆ ನೆರವಾಗುವುದು, ಸಂಪನ್ಮೂಲಗಳ ಪರಿಣಾಮ ಕಾರಿ ಬಳಕೆಗಾಗಿ ಸೇನಾ ಆದೇಶಗಳ ಪುನರ್‌ರಚನೆಗಾಗಿ ಅನುಕೂಲ ಕಲ್ಪಿಸುವುದು, ಸ್ಥಳೀಯ ಉಪಕರಣಗಳ ಬಳಕೆಗೆ ಉತ್ತೇಜನ ನೀಡುವುದು, ಮೂರೂ ಪಡೆಗಳ ಸೈಬರ್ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಆದೇಶಗಳು, ಅಣ್ವಸ್ತ್ರ ಕಮಾಂಡ್ ಪ್ರಾಧಿಕಾರದ ಸೇನಾ ಸಲಹೆಗಾರರಾಗಿ ಕಾರ್ಯ ನಿರ್ವಹಣೆಯ ಜವಾಬ್ದಾರಿ ಯೂ ಇವರ ಮೇಲಿದೆ. ಕರೋನಾ ಸಾಂಕ್ರಾಮಿಕದ ಹಿನ್ನೆಲೆಯ ಪಿಎಂ – ಕೇರ್ಸ್ ಪರಿಹಾರ ನಿಧಿಗೆ ತಮ್ಮ ವೇತನದಿಂದ ಒಂದು ವರ್ಷ ಪ್ರತಿ ತಿಂಗಳು 50 ಸಾವಿರ ರು.ಗಳಂತೆ ವರ್ಷಕ್ಕೆ 6 ಲಕ್ಷ ರು.ಪರಿಹಾರದ ಹಣವನ್ನು ಈಗಾಗಲೇ ಏಪ್ರಿಲ್‌ನಿಂದ ಸದರಿ ನಿಧಿಗೆ ಸಂದಾಯ ಮಾಡುತ್ತಿದ್ದಾರೆ.

ಭಾರತ – ಚೀನಾ ನಡುವಿನ ಗಡಿ ಉದ್ವಿಗ್ನತೆಯ ಸಂದರ್ಭದಲ್ಲಿ ಭಾರತದ ಸೇನೆಯ ಬಗ್ಗೆ ಚೀನಾ ಎಷ್ಟು ಎಚ್ಚರಿಕೆ ವಹಿಸು ತ್ತದೆಯೋ ಅಷ್ಟೇ ಎಚ್ಚರಿಕೆಯನ್ನು ಜನರಲ್ ಬಿಪಿನ್ ರಾವತ್ ಬಗ್ಗೆಯೂ ವಹಿಸುತ್ತಿದೆ ಎಂಬುದು ಗಮನಾರ್ಹ. ಇವರನ್ನು ಭಾರತದ ‘ರಕ್ಷಣಾ ಪಡೆಗಳಮುಖ್ಯಸ್ಥ’ ರನ್ನಾಗಿ ಪಡೆದ ಭಾರತೀಯರೆಲ್ಲರೂ ಅದೃಷ್ಟವಂತರು.