Sunday, 24th November 2024

Srivathsa Joshi Column: ನೆಪೊಲೀಯನ್‌ ಬೊನಾಪಾರ್ಟೆ: ಅನನ್ಯ ವೈಚಿತ್ರ್ಯಗಳ ಅ-ಲಾ-ಕಾರ್ಟೆ

ತಿಳಿರುತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ನೆಪೋಲಿಯನ್ ಬೊನಾಪಾರ್ಟೆಯನ್ನು ಜನರು ಈಗಲೂ ನೆನಪಿಸಿಕೊಳ್ಳುವುದಕ್ಕೆ ಒಂದು ಕಾರಣ ಆತ ಜಾರಿಗೊಳಿಸಿದ್ದ ಪೌರಸಂಹಿತೆ. ಫ್ರಾನ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಪೋಲಿಯನ್‌ನ ಸಾಮ್ರಾಜ್ಯವಿದ್ದಾಗ ‘ನೆಪೋಲಿಯನಿಕ್ ಕೋಡ್’ ಎಂಬ ಪೌರಸಂಹಿತೆ ಜಾರಿಗೆ ಬಂತು. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳು, ಸ್ಥಿರಾಸ್ತಿ ಮತ್ತು ಚರಾಸ್ತಿಗಳಿಗೆ ಸಂಬಂಧಿಸಿದ ನಿಯಮಗಳು, ವಿವಾಹ, ವಿಚ್ಛೇದನಗಳ ಕಾಯಿದೆಗಳು ಎಲ್ಲವೂ ಅದರಲ್ಲಿತ್ತು.

ಅಶೋಕನೆಂಬ ಮಗಧ ದೊರೆಯಿರಲಿ, ಅಕ್ಬರನೆಂಬ ಮೊಘಲ್ ದೊರೆಯಿರಲಿ ಸಮಾಜ ಪರಿಚಯ ಪಠ್ಯಪುಸ್ತಕಗಳಲ್ಲಿ ನಮಗೆ ಅವರ ಆಡಳಿತ ಕಾಲದ ಸುಧಾರಣೆಗಳು, ದಾಳಿಗಳು, ಯುದ್ಧಗಳು, ಸಾಮ್ರಾಜ್ಯ ವಿಸ್ತರಣೆ ಮತ್ತು ಅಧಃಪತನ ಮುಂತಾದವಷ್ಟೇ ಓದಲಿಕ್ಕೆ ಸಿಗುವುದು.
ಅದೂ, ‘ತೆರಿಗೆ ಭಾರವಾಗಿತ್ತು. ಶಿಕ್ಷೆ ಕ್ರೂರವಾಗಿತ್ತು. ಕಲೆಗಳಿಗೆ ಪ್ರೋತ್ಸಾಹ ಇತ್ತು…’ ರೀತಿಯ ಸಿದ್ಧಮಾದರಿಯ ಒಣವಾಕ್ಯಗಳು. ಪ್ರೌಢಶಾಲೆ ಯಲ್ಲಿ ಪ್ರಪಂಚ ಚರಿತ್ರೆಯಲ್ಲಿ ಯುರೋಪಿಯನ್ ಚಕ್ರವರ್ತಿಗಳು ಮತ್ತು ಸರ್ವಾಧಿಕಾರಿಗಳ ವಿಚಾರಗಳಾದರೂ ಅಷ್ಟೇ. ‘ಮುಸ್ಸೊಲಿನಿಯನ್ನು ಅವನ ಜನರೇ ಹಿಡಿದು ಕೊಂದರು’ ಎಂಬ ವಾಕ್ಯವೊಂದೇ ನನಗೆ ಈಗಲೂ ಸ್ಪಷ್ಟ ನೆನಪಿರುವುದು.

ಈ ಎಲ್ಲ ಮಹಾಮಹಿಮರ ವ್ಯಕ್ತಿಗತ ಗುಣಸ್ವಭಾವಗಳು, ಅಭಿರುಚಿಗಳು, ವಾಂಛೆಗಳು, ಖಯಾಲಿಗಳು ಹೇಗಿರುತ್ತಿದ್ದವು ಎಂಬ ಕುತೂಹಲವೂ ನಮಗಿರುತ್ತದೆಯಷ್ಟೆ? ಆದರೆ ಆ ವಿವರಗಳು ಪಠ್ಯಪುಸ್ತಕಗಳಲ್ಲಿ ಇರುವುದಿಲ್ಲ. ಇದ್ದರೂ ಒಂದೆರಡು ವಾಕ್ಯಗಳು ಮಾತ್ರ. ಅದು ಪಠ್ಯಪುಸ್ತಕ ಗಳಿಗಿರುವ ಮಿತಿಯಿಂದಾಗಿಯೂ ಹೌದೆನ್ನಿ. ಬೇಕಿದ್ದರೆ ನಾವೇ ಗ್ರಂಥಾಲಯಗಳಿಂದ ಬೇರೆ ಪುಸ್ತಕಗಳಲ್ಲಿ ಓದಿ ತಿಳಿದುಕೊಳ್ಳಬೇಕು. ಈಗಾದರೆ ಗೂಗಲೀಶ್ವರನನ್ನು ಗೋಗರೆಯಬೇಕು.

ಹಾಗೆ ಮೊನ್ನೆ ಒಂದುದಿನ ಅಂತರಜಾಲ ಮಂಥನ ಮಾಡುತ್ತ ಬೇರೇನನ್ನೋ ಹುಡುಕುತ್ತಿದ್ದಾಗ Interesting Facts About Napoleon ಎಂಬ ವೆಬ್ ಪುಟ ಕಣ್ಣಿಗೆ ಬಿತ್ತು. ವಿಶ್ವಚರಿತ್ರೆಯ ಆಸಕ್ತಿಕರ ಅಂಶಗಳನ್ನೆಲ್ಲ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿರುವ ಆ ವೆಬ್‌ಸೈಟ್ ಯಾವುದೋ ಹಾಳುಮೂಳು ರೀತಿಯದಲ್ಲ ಎಂದು ಗೊತ್ತಾಗುತ್ತಿತ್ತು. ಆದರೂ ಇಂಟರ್‌ನೆಟ್‌ನ ಸರಕನ್ನು ಚಿಟಿಕೆ ಉಪ್ಪು ಸೇರಿಸಿಯೇ ಸೇವಿಸಬೇಕಾದ್ದರಿಂದ ಬೇರೊಂದಿಷ್ಟು ಆಕರಗಳನ್ನೂ ಪರಾಮರ್ಶಿಸಿದೆ.

ನೆಪೋಲಿಯನ್ ಮಹಾಶಯ ಹಾಗಿದ್ದದ್ದು ಹೌದು, ಮಿಲಿಟರಿ ಕಾಠಿಣ್ಯಕ್ಕಿಂತ ಹೊರತಾದ ವ್ಯಕ್ತಿತ್ವವೂ ಆತನಿಗೆ ಇತ್ತು ಎಂದು ಅವುಗಳಲ್ಲೂ ತಿಳಿದುಬಂತು. ಹಾಗೆ ದೃಢೀಕೃತ ಒಂದಿಷ್ಟು ಸ್ವಾರಸ್ಯಗಳು ಇಂದು ನಿಮ್ಮ ಓದಿಗೆ. ಯುರೋಪ್‌ನ ಚರಿತ್ರೆಯಲ್ಲಿ ಬರುವ ಪ್ರಖರ ವ್ಯಕ್ತಿತ್ವಗಳಲ್ಲಿ ಫ್ರೆಂಚ್ ಕ್ರಾಂತಿಯಿಂದ ಪ್ರಖ್ಯಾತನಾದ ನೆಪೋಲಿಯನ್ ಬೊನಾಪಾರ್ಟೆ ಅಗ್ರಗಣ್ಯ. ನೋಡಲಿಕ್ಕೆ ಸ್ವಲ್ಪ ವಾಮನಮೂರ್ತಿಯಾಗಿದ್ದರೂ, ಅವನ ಟಿಪಿಕಲ್ ಎರಡು ಕೋಡುಗಳ ರೀತಿಯ ಹ್ಯಾಟ್‌ನಿಂದ, ಅದಕ್ಕಿಂತ ಹೆಚ್ಚಾಗಿ ಮಿಲಿಟರಿ ತಾಕತ್ತಿನಿಂದ ಅದ್ಭುತ ವರ್ಚಸ್ಸು ಹೊಂದಿದ್ದವನು.

ಫ್ರೆಂಚ್ ಮಿಲಿಟರಿ ಅಕಾಡೆಮಿಯಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದಲ್ಲಿಂದ ಹಿಡಿದು ಇಡೀ ಯುರೋಪ್ ಖಂಡವನ್ನು ಆವರಿಸಿದ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆಯುವವರೆಗಿನ ಆತನ ಬದುಕು ವರ್ಣರಂಜಿತ. ಕೊನೆಗೂ 1815ರಲ್ಲಿ ಆತನ ಉತ್ತುಂಗದ ದಿನಗಳು ಮುಗಿದವಾದರೂ, ನೆಪೋಲಿಯನ್ ಕದನಗಳು ಎಂದೇ ಕರೆಸಿಕೊಂಡ ಆತನ ದಿಗ್ವಿಜಯಗಳಿಂದಾಗಿ ಅಷ್ಟು ಹೊತ್ತಿಗೆ ಯುರೋಪ್ ಖಂಡದ ರಾಜಕೀಯ-ಸಾಮಾಜಿಕ ಸ್ಥಿತಿಗತಿಗಳ ಸಂಪೂರ್ಣ ಚಿತ್ರಣವೇ ಬದಲಾಗಿತ್ತು. ಮೊದಲ ಸ್ವಾರಸ್ಯವೇನೆಂದರೆ ನೆಪೋಲಿಯನ್ ಬೊನಾಪಾರ್ಟೆ ಫ್ರಾನ್ಸ್‌ನಲ್ಲಿದ್ದವನು, ಫ್ರೆಂಚ್ ಕ್ರಾಂತಿಯ ಮೂಲಕ ಫ್ರಾನ್ಸ್‌ನ ಚರಿತ್ರೆಯಲ್ಲಿ ಪ್ರಧಾನ ಪಾತ್ರ ವಹಿಸಿದವನು, ಫ್ರಾನ್ಸ್-ಬ್ರಿಟನ್ ನಡುವೆ ಇಂದಿಗೂ ಜೀವಂತವಿರುವ ವೈಷಮ್ಯಕ್ಕೆ ನಾಂದಿ ಹಾಡಿದವನು ಇತ್ಯಾದಿಯೆಲ್ಲವೂ ಹೌದಾದರೂ ಆತ ಹುಟ್ಟಿನಿಂದ ಫ್ರೆಂಚ್ ಅಲ್ಲ!

ನೆಪೋಲಿಯನ್ ಹುಟ್ಟಿದ್ದು 1769ರ ಆಗಸ್ಟ್ 15ರಂದು, ಕೋರ್ಸಿಕಾ ಎಂಬ ಮೆಡಿಟರೇನಿಯನ್ ದ್ವೀಪವೊಂದರಲ್ಲಿ. ಹೆತ್ತವರು ಇಟಲಿ ಮೂಲದ ವರು, ತಲೆಮಾರುಗಳ ಹಿಂದಿನಿಂದ ಕೋರ್ಸಿಕಾದಲ್ಲಿ ನೆಲೆಸಿದ್ದವರು. ಅಲ್ಲಿನ ಜನರು ಇಟಾಲಿಯನ್‌ನ ಒಂದು ಉಪಭಾಷೆ ಮಾತನಾಡುತ್ತಿದ್ದರು. ನೆಪೋಲಿಯನ್ ಅದನ್ನೇ ಮಾತನಾಡುತ್ತ ಬೆಳೆದವನು. ಹತ್ತು ವರ್ಷದ ಹುಡುಗನಾಗಿದ್ದಾಗ, ಅಷ್ಟುಹೊತ್ತಿಗೆ ಕೋರ್ಸಿಕಾ ದ್ವೀಪವು ಫ್ರಾನ್ಸ್‌ನ ಭಾಗವೇ ಆಗಿಹೋಗಿದ್ದರಿಂದ ನೆಪೋಲಿಯನ್ ಫ್ರಾನ್ಸ್‌ಗೆ ಹೋಗಿ ಮಿಲಿಟರಿ ಅಕಾಡೆಮಿಗೆ ಸೇರಿದನು. ಬಾಲ್ಯದಲ್ಲಿ ತಾಯಿಯ ಶಿಸ್ತುಬದ್ಧ ಜೀವನಕ್ರಮವು ಆತನ ಮೇಲೆ ಒಳ್ಳೆಯ ಪ್ರಭಾವ ಬೀರಿತ್ತಂತೆ.

ಫ್ರಾನ್ಸ್‌ ಗೆ ಹೋದ ಮೇಲೆ ಫ್ರೆಂಚ್ ಭಾಷೆಯನ್ನು ಕಲಿತನಾದರೂ ಆತ ಮಾತನಾಡುವಾಗ ಕೋರ್ಸಿಕನ್ ಸ್ವರಶೈಲಿ ಗಾಢವಾಗಿ ಕೇಳಿಸುತ್ತಿತ್ತು. ಅಷ್ಟು ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯಾದರೂ ಆತ ಹುಟ್ಟಾ ಫ್ರೆಂಚನಲ್ಲ, ಮೆಡಿಟರೇನಿಯನ್ ಮೂಲದವನೆಂದು ಮಾತಿನಲ್ಲೇ ಗೊತ್ತಾಗುತ್ತಿತ್ತು.

ಇದನ್ನೂ ಓದಿ: Srivathsa Joshi Column: ಗುಳಿಗೆ ರಸಗಳಿಗೆ ಹರಟೆ ಮತ್ತೊಂದು ಲೆಕ್ಕ ಮಿದುಳಿಗೆ