Sunday, 24th November 2024

IPL 2025 Auction: ಮೆಗಾ ಹರಾಜಿಗೆ ಕ್ಷಣಗಣನೆ; ಇಂದಿನ ವಿಶೇಷತೆ ಏನು?

ದುಬೈ: ಬಹುನಿರೀಕ್ಷಿತ ಐಪಿಎಲ್​ 18ನೇ ಆವೃತ್ತಿಯ ಮೆಗಾ ಹರಾಜು(IPL 2025 Auction) ಪ್ರಕ್ರಿಯೆ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಮತ್ತು ನಾಳೆ ಹರಾಜು ಪ್ರಕ್ರಿಯೆ ನಡೆಯಲಿದೆ. ಇಂಗ್ಲೆಂಡ್​ನ 42 ವರ್ಷದ ನಿವೃತ್ತ ವೇಗಿ ಜೇಮ್ಸ್​ ಆಂಡರ್ಸನ್‌ (1.25 ಕೋಟಿ ರೂ. ಮೂಲಬೆಲೆ) ಹರಾಜು ಪಟ್ಟಿಯಲ್ಲಿರುವ ಅತ್ಯಂತ ಹಿರಿಯ ಆಟಗಾರರಾಗಿದ್ದಾರೆ. ಬಿಹಾರದ 14 ವರ್ಷದ ಬ್ಯಾಟರ್​ ವೈಭವ್​ ಸೂರ್ಯವಂಶಿ ಹರಾಜು ಕಣದಲ್ಲಿರುವ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. 17 ವರ್ಷದ ಆಯುಷ್​ ಮಹಾತ್ರೆ, 18 ವರ್ಷದ ಕ್ವೆನಾ ಮಾಕ ಮತ್ತು 18 ವರ್ಷದ ಆಂಡ್ರೆ ಸಿದ್ಧಾರ್ಥ್​ ಇತರ ಕಿರಿಯರಾಗಿದ್ದಾರೆ.

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಇಂದು(ಭಾನುವಾರ) ನಡೆಯಲಿಯುವ ಈ ಹರಾಜು ಪ್ರಕ್ರಿಯೆ ಭಾರತೀಯ ಕಾಲಮಾನ ಮಧ್ಯಾಹ್ನ 3.30ರಿಂದ ಆರಂಭವಾಗಿ ರಾತ್ರಿ 10.30ರ ತನಕ ನಡೆಯಲಿದೆ. 2 ದಿನಗಳ ಹರಾಜು ಪ್ರಕ್ರಿಯೆಯಲ್ಲಿ 367 ಭಾರತೀಯರು, 210 ವಿದೇಶಿಯರ ಸಹಿತ ಒಟ್ಟು 577 ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಭಾನುವಾರ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಆರಂಭದಲ್ಲಿ 116 ಆಟಗಾರರ ಹೆಸರು ಪ್ರಸ್ತಾವವಾಗುತ್ತದೆ. ಇದು ಮುಗಿದ ಬಳಿಕ ಫ್ರಾಂಚೈಸಿಗಳು ಬಯಸಿದ ಆಟಗಾರರ ಹೆಸರು ಪ್ರಸ್ತಾವಕ್ಕೆ ಬರುತ್ತದೆ. ಸೋಮವಾರ ಕೂಡ ಇದೇ ಪ್ರಕ್ರಿಯೆಯ ಮುಂದುವರಿದ ಭಾಗವಿರುತ್ತದೆ.

10 ತಂಡಗಳು 70 ವಿದೇಶಿಯರ ಸಹಿತ ಗರಿಷ್ಠ 204 ಆಟಗಾರರ ಖರೀದಿ ಮಾಡಬಹುದಾಗಿದೆ. ಪ್ರತಿ ತಂಡ ಕನಿಷ್ಠ 18ರಿಂದ ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದೆ. ರಿಟೇನ್​ ವೆಚ್ಚ ಸೇರಿ ಪ್ರತಿ ತಂಡ ಆಟಗಾರರ ಖರೀದಿಗೆ ಗರಿಷ್ಠ 120 ಕೋಟಿ ರೂ. ವ್ಯಯಿಸಬಹುದಾಗಿದೆ. ತಲಾ 6ರ 2 ಸೆಟ್​ನಲ್ಲಿ 12 ಮಾರ್ಕೀ ಆಟಗಾರರ ಹರಾಜು ಮೊದಲಿಗೆ ನಡೆಯಲಿದೆ. ನಂತರ ವಿವಿಧ ಸೆಟ್​ಗಳಲ್ಲಿ ಆಟಗಾರರ ಹರಾಜು ನಡೆಯಲಿದೆ.

ಇದನ್ನೂ ಓದಿ Yashasvi Jaiswal: ಶತಕ ಬಾರಿಸಿ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌

ರಿಷಭ್​ ಪಂತ್​, ಕೆಎಲ್​ ರಾಹುಲ್​, ಶ್ರೇಯಸ್​ ಅಯ್ಯರ್​, ಅರ್ಷದೀಪ್​ ಸಿಂಗ್​, ಯಜುವೇಂದ್ರ ಚಾಹಲ್​, ಮೊಹಮದ್​ ಶಮಿ, ಮೊಹಮದ್​ ಸಿರಾಜ್​, ಮಿಚೆಲ್​ ಸ್ಟಾರ್ಕ್​, ಜೋಸ್​ ಬಟ್ಲರ್​, ಲಿಯಾಮ್​ ಲಿವಿಂಗ್​ಸ್ಟೋನ್​, ಡೇವಿಡ್​ ಮಿಲ್ಲರ್​, ಕಗಿಸೊ ರಬಾಡ. ಈ ಆಟಗಾರರು ಮೊದಲ ಎರಡು ಮಾರ್ಕಿ ಸೆಟ್‌ನಲ್ಲಿರುವ ಆಟಗಾರರು.

ಸೆಟ್‌-3ರಲ್ಲಿ ಹ್ಯಾರಿ ಬ್ರೂಕ್​, ಡೆವೊನ್​ ಕಾನ್​ವೇ, ಫ್ರೇಸರ್​ ಮೆಕ್​ಗುರ್ಕ್​, ಏಡನ್​ ಮಾರ್ಕ್ರಮ್​, ದೇವದತ್​ ಪಡಿಕ್ಕಲ್​, ರಾಹುಲ್​ ತ್ರಿಪಾಠಿ, ಡೇವಿಡ್​ ವಾರ್ನರ್​ ಕಾಣಿಸಿಕೊಂಡಿದ್ದಾರೆ.

ಸೆಟ್‌-4ರಲ್ಲಿ ಆರ್​. ಅಶ್ವಿನ್​, ವೆಂಕಟೇಶ್​ ಅಯ್ಯರ್​, ಮಿಚೆಲ್​ ಮಾರ್ಷ್​, ಗ್ಲೆನ್​ ಮ್ಯಾಕ್ಸ್​ವೆಲ್​, ಹರ್ಷಲ್​ ಪಟೇಲ್​, ರಚಿನ್​ ರವೀಂದ್ರ, ಮಾರ್ಕಸ್​ ಸ್ಟೋಯಿನಿಸ್​ ಸ್ಥಾನ ಪಡೆದಿದ್ದಾರೆ.

ಸೆಟ್‌-5 ರಲ್ಲಿ ಜಾನಿ ಬೇರ್​ಸ್ಟೋ, ಕ್ವಿಂಟನ್​ ಡಿಕಾಕ್​, ರಹಮಾನುಲ್ಲ ಗುರ್ಬಜ್​, ಇಶಾನ್​ ಕಿಶನ್​, ಫಿಲ್​ ಸಾಲ್ಟ್​, ಜಿತೇಶ್​ ಶರ್ಮ ಇದ್ದಾರೆ.

ಆರ್​ಟಿಎಂ ಬಳಕೆ

2014 ಮತ್ತು 2018ರ ಮೆಗಾ ಹರಾಜಿನಲ್ಲಿ ಚಾಲ್ತಿಯಲ್ಲಿದ್ದ ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ ಈ ಬಾರಿಯೂ ಇದೆ. ಗರಿಷ್ಠ 6 ಆಟಗಾರರನ್ನು ರಿಟೇನ್​ ಮಾಡಿಕೊಂಡಿರುವ ರಾಜಸ್ಥಾನ, ಕೆಕೆಆರ್​ ಬಳಿ ಈ ಬಾರಿ ಆರ್​ಟಿಎಂ ಇರುವುದಿಲ್ಲ. ಈ ಬಾರಿ ಗರಿಷ್ಠ ಬಿಡ್​ ಬಳಿಕ ಮೂಲ ತಂಡ ಆರ್​ಟಿಎಂ ಮೂಲಕ ಆತನನ್ನು ಉಳಿಸಿಕೊಳ್ಳಲು ಮುಂದಾದಾಗ, ಆತನಿಗೆ ಗರಿಷ್ಠ ಬಿಡ್​ ಮಾಡಿದ್ದ ತಂಡಕ್ಕೆ ಬಿಡ್​ ಮೊತ್ತವನ್ನು ತನಗೆ ಬೇಕೆನಿಸಿದಷ್ಟು ಏರಿಸಲು ಅವಕಾಶ ನೀಡಲಾಗುತ್ತದೆ. ಆಗಲೂ ಆ ಏರಿಕೆ ಮೊತ್ತಕ್ಕೆ ಮೂಲ ತಂಡ ಆತನನ್ನು ಖರೀದಿಸಲು ಮುಂದಾದರೆ ಮಾತ್ರ ಆತನನ್ನು ಉಳಿಸಿಕೊಳ್ಳಬಹುದಾಗಿರುತ್ತದೆ. ಹಿಂದಿನ ನಿಯಮ ಹೀಗಿರಲಿಲ್ಲ.