Sunday, 24th November 2024

Justin Trudeau: ಭಾರತಕ್ಕೆ ಬೆದರಿದ್ರಾ ಕೆನಡಾ ಪ್ರಧಾನಿ? ತಮ್ಮದೇ ಅಧಿಕಾರಿಗಳನ್ನು ಅಪರಾಧಿ ಎಂದು ಕರೆದ ಟ್ರುಡೋ

Justin Trudeau

ಒಟ್ಟಾವಾ: ಭಾರತ ಮತ್ತು ಕೆನಡಾ (India – Canada) ನಡುವಿನ ಸಂಬಂಧ ದಿನೇ ದಿನೆ ಹದಗೆಡುತ್ತಿರುವ ಸಂದರ್ಭದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ತಮ್ಮ ಅಧಿಕಾರಿಗಳ ವಿರುದ್ಧವೇ ಕಿಡಿಕಾರಿದ್ದಾರೆ. ಕೆನಡಾದ ಗುಪ್ತಚರ ಇಲಾಖೆಯ ಅಧಿಕಾರಿಗಳನ್ನು ಅಪರಾಧಿಗಳು ಎಂದು ಕರೆದಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಪ್ರಕರಣದಲ್ಲಿ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಟ್ರೂಡೊ ತಮ್ಮದೆ ಅಧಿಕಾರಿಗಳನ್ನು ಅಪರಾಧಿಗಳು ಎಂದು ಕರೆದಿದ್ದಾರೆ. ಕೆನಡಾದ ಪ್ರಮುಖ ಪತ್ರಿಕೆ ‘ಗ್ಲೋಬ್ ಆಂಡ್ ಮೇಲ್’ ವರದಿಯೊಂದನ್ನು ಪ್ರಕಟಿಸಿತ್ತು. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಪ್ರಧಾನಿ ಮೋದಿಗೆ ಮೊದಲೇ ಮಾಹಿತಿ ಇತ್ತು ಎಂದು ಹೇಳಲಾಗಿತ್ತು. ಅದೇ ವರದಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ಗೂ ಈ ಯೋಜನೆಯ ಅರಿವಿತ್ತು ಎಂದು ಪತ್ರಿಕೆ ಆರೋಪ ಮಾಡಿತ್ತು. ಇದೀಗ ಟ್ರೂಡೊ ಈ ವಿಷಯಗಳನ್ನು ಆಧಾರರಹಿತ ಎಂದು ಕರೆದಿದ್ದಾರೆ.

ಶುಕ್ರವಾರ ಬ್ರಾಂಪ್ಟನ್‌ ನಗರದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು “ದುರದೃಷ್ಟವಶಾತ್ ಆ ಅಪರಾಧಿಗಳು ಮಾಧ್ಯಮಗಳಿಗೆ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿರುವುದು ನನ್ನ ಗಮನಕ್ಕೆ ಬಂದಿವೆ. ಮಾಧ್ಯಮಗಳು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿವೆ. ಅಪರಾಧಿಗಳು ಮಾಧ್ಯಮಗಳಿಗೆ ಸುಳ್ಳು ಮಾಹಿತಿಯನ್ನು ಸೋರಿಕೆ ಮಾಡುತ್ತಾರೆ” ಎಂದು ಹೇಳಿದ್ದಾರೆ.

ಕೆಲ ತಿಂಗಳ ಹಿಂದೆ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಗೃಹ ಸಚಿವ ಅಮಿತ್‌ ಶಾ ಇದ್ದಾರೆ ಎಂದು ಕೆನಡಾ ಆರೋಪ ಮಾಡಿತ್ತು. ಕೆನಡಾದಲ್ಲಿರುವ ಸಿಖ್‌ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ಕೈಗೊಳ್ಳಲು, ಬೆದರಿಕೆ ಹಾಕಲು ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಅಮಿತ್‌ ಶಾ ಆದೇಶಿಸಿದ್ದರು ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್‌ ಮಾರಿಸನ್‌ ಆರೋಪಿಸಿದ್ದರು. ಅವರು, ಸಂಸತ್‌ ಸದಸ್ಯರನ್ನು ಒಳಗೊಂಡ ರಾಷ್ಟ್ರೀಯ ಭದ್ರತಾ ಸಮಿತಿಗೆ ಮಾಹಿತಿ ನೀಡಿದ್ದು, ಈ ವಿಷಯದ ಕುರಿತ ಆರೋಪಗಳ ವರದಿಯನ್ನು ಮೊದಲ ಬಾರಿಗೆ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆ ಪ್ರಕಟಿಸಿತ್ತು. ಆ ಪತ್ರಿಕೆಯ ವರದಿಗಾರನಿಗೆ ಈ ವಿಷಯವನ್ನು ನಾನೇ ಖಚಿತಪಡಿಸಿದ್ದೆ’ ಎಂದು ಮಾರಿಸನ್‌ ಹೇಳಿದ್ದರು. ವರದಿಗಾರ ಕರೆ ಮಾಡಿ ಅದು ಆ ವ್ಯಕ್ತಿಯೇ ಎಂದು ಕೇಳಿದ್ದ. ನಾನು ಹೌದು ಅದೇ ವ್ಯಕ್ತಿ ಎಂದು ಹೇಳಿದ್ದೇನೆ ಎಂದು ಅವರು ಹೇಳಿದ್ದರು.

ಕೆನಡಾ ಮಾಡಿದ್ದ ಈ ಆರೋಪಕ್ಕೆ ಭಾರತ ತೀವ್ರವಾಗಿ ಖಂಡಿಸಿತ್ತು. ಈ ಬಗ್ಗೆ ವಿದೇಶಾಂಗ ಇಲಾಖೆಯ (ministry of external affairs) ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಪ್ರತಿಕ್ರಿಯಿಸಿ, ಕೆನಡಾ ಹೈಕಮಿಷ್‌ನರ್‌ ಕರೆಸಿ ಮಾತನಾಡಿದ್ದೇವೆ. ಇನ್ನು ಮುಂದೆ ಆಧಾರ ರಹಿತವಾಗಿ ಭಾರತದ ಮೇಲೆ ಆರೋಪ ಮಾಡಿದರೆ ಕಠಿಣ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಎಚ್ಚರಕೆ ನೀಡಿತ್ತು.

ಇದನ್ನೂ ಓದಿ : Amit Shah: ಅಮಿತ್‌ ಶಾ ವಿರುದ್ಧದ ಕೆನಡಾ ಆರೋಪಕ್ಕೆ ಭಾರತ ಖಂಡನೆ; ಸಾಕ್ಷ್ಯಾಧಾರ ಇದ್ರೆ ಮಾತ್ರ ಮಾತನಾಡಿ ಎಂದು ಖಡಕ್‌ ಎಚ್ಚರಿಕೆ