ಪರ್ತ್: ಬೋರ್ಡರ್-ಗಾವಸ್ಕರ್(Border-Gavaskar Trophy) ಟ್ರೋಫಿಗಾಗಿ ನಡೆಯುತ್ತಿರುವ ಪರ್ತ್ ಟೆಸ್ಟ್ನಲ್ಲಿ ಭಾರತ(IND vs AUS) ಆತಿಥೇಯ ಆಸ್ಟ್ರೇಲಿಯಾದ ವಿರುದ್ಧ ಬಿಗಿಹಿಡಿತ ಸಾಧಿಸಿದ್ದು ಭೋಜನ ವಿರಾಮದ ಅಂತ್ಯಕ್ಕೆ ಒಂದು ವಿಕೆಟ್ಗೆ 275 ರನ್ ಗಳಿಸಿದ್ದು, 321 ರನ್ ಮುನ್ನಡೆ ಸಾಧಿಸಿದೆ. ಯಶಸ್ವಿ ಜೈಸ್ವಾಲ್(141) ಮತ್ತು ದೇವದತ್ತ ಪಡಿಕ್ಕಲ್(25) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶನಿವಾರ ಅರ್ಧಶತಕ ಬಾರಿಸಿದ್ದ ಕೆ.ಎಲ್ ರಾಹುಲ್(KL Rahul) ಭಾನುವಾರ 77 ರನ್ ಗಳಿಸಿ ಔಟಾದರು. ಸದ್ಯ ಉತ್ತಮ ಸ್ಥಿತಿಯಲ್ಲಿರುವ ಭಾರತ ತನ್ನ ಮುನ್ನಡೆಯನ್ನು 400+ ರನ್ಗೆ ಹೆಚ್ಚಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ.
ಜೈಸ್ವಾಲ್(Yashasvi Jaiswal) ಮತ್ತು ರಾಹುಲ್ ಭರ್ಜರಿ ಜೊತೆಯಾಟವಾಡಿ ದಾಖಲೆಯೊಂದನ್ನು ಬರೆದಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ವಿಕೆಟ್ಗೆ ಗರಿಷ್ಠ ಮೊತ್ತದ ಜತೆಯಾಟ ನಡೆಸಿದ ಭಾರತ ಮೊದಲ ಜೋಡಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಜೈಸ್ವಾಲ್ ಮತ್ತು ರಾಹುಲ್ ಜೋಡಿ 201 ರನ್ಗಳ ಜತೆಯಾಟ ನಡೆಸಿತು. ಇದಕ್ಕೂ ಮುನ್ನ ಈ ದಾಖಲೆ ಸುನಿಲ್ ಗವಾಸ್ಕರ್ ಮತ್ತು ಕ್ರಿಸ್ ಶ್ರೀಕಾಂತ್ ಹೆಸರಿನಲ್ಲಿತ್ತು. ಈ ಜೋಡಿ 1986 ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ 191 ರನ್ ಬಾರಿಸಿತ್ತು.
ಪ್ರವಾಸಿ ತಂಡದ ಆರಂಭಿಕ ಜೋಡಿಯೊಂದು ಆಸ್ಟ್ರೇಲಿಯಾದಲ್ಲಿ ಗಳಿಸಿದ 6ನೇ ಗರಿಷ್ಠ ಮೊತ್ತದ ಜತೆಯಾಟ ಇದಾಗಿದೆ. ದಾಖಲೆ ಇಂಗ್ಲೆಂಡ್ ತಂಡದ ಜ್ಯಾಕ್ ಹಾಬ್ಸ್ ಮತ್ತು ವಿಲ್ಫ್ರೆಡ್ ರೋಡ್ಸ್ ಜೋಡಿ ಹೆಸರಿನಲ್ಲಿದೆ. ಈ ಜೋಡಿ 1912ರಲ್ಲಿ 323 ರನ್ಗಳ ಜತೆಯಾಟ ನಿಭಾಯಿಸಿತ್ತು.
ಇದನ್ನೂ ಓದಿ Yashasvi Jaiswal: ಶತಕ ಬಾರಿಸಿ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಇದು ಮಾತ್ರವಲ್ಲದೆ ಸೆನಾ (ದ.ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಆಸೀಸ್) ರಾಷ್ಟ್ರಗಳಲ್ಲಿ ಆರಂಭಿಕ ವಿಕೆಟ್ಗೆ ಬೃಹತ್ ಮೊತ್ತ ದಾಖಲಿಸಿದ ಮೂರನೇ ಭಾರತೀಯ ಜೋಡಿ ಎಂಬ ಹಿರಿಮೆಗೂ ರಾಹುಲ್ ಮತ್ತು ಜೈಸ್ವಾಲ್ ಪಾತ್ರರಾದರು. 1979ರಲ್ಲಿ ಸುನೀಲ್ ಗವಾಸ್ಕರ್ ಮತ್ತು ಚೇತನ್ ಚೌಹಾಣ್ ಇಂಗ್ಲೆಂಡ್ ವಿರುದ್ಧ 213 ರನ್ ಜತೆಯಾಟವಾಡಿದ್ದು ದಾಖಲೆ.
90 ರನ್ ಗಳಿಸಿದ್ದಲ್ಲಿಂದ ಭಾನುವಾರ ಬ್ಯಾಟಿಂಗ್ ಆರಂಭಿಸಿದ ಜೈಸ್ವಾಲ್ ಹ್ಯಾಜಲ್ವುಡ್ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ ಶರಕ ಪೂರೈಸಿದರು. ಶತಕ ಸಾಧನೆಯೊಂದಿಗೆ 23 ವರ್ಷ ತುಂಬುವ ಮುನ್ನ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಶತಕ ಸಿಡಿಸಿದ ನಾಲ್ಕನೇ ಬ್ಯಾಟರ್ ಎನಿಸಿಕೊಂಡರು. ಸಚಿನ್ ತೆಂಡೂಲ್ಕರ್ ಜತೆ ಜಂಟಿ ದಾಖಲೆಯನ್ನು ಹಂಚಿಕೊಂಡರು. ಸಚಿನ್ ಮತ್ತು ಜೈಸ್ವಾಲ್ 3 ಶತಕ ಬಾರಿಸಿದ್ದಾರೆ. ದಾಖಲೆ ಸುನಿಲ್ ಗವಾಸ್ಕರ್ ಮತ್ತು ವಿನೋದ್ ಕಾಂಬ್ಳಿ ಹೆಸರಿನಲ್ಲಿದೆ. ಉಭಯ ಆಟಗಾರರು 4 ಶತಕ ಬಾರಿಸಿದ್ದಾರೆ.