Sunday, 24th November 2024

Elon Musk: ಭಾರತೀಯ ಚುನಾವಣಾ ವ್ಯವಸ್ಥೆ ಶ್ಲಾಘಿಸಿದ ಎಲಾನ್ ಮಸ್ಕ್; ಅಮೆರಿಕ ಇನ್ನೂ ಮತ ಎಣಿಸುತ್ತಲೇ ಇದೆ ಎಂದು ವ್ಯಂಗ್ಯ!

Elon Musk

ವಾಷಿಂಗ್ಟನ್‌ : ಭಾರತದ ಚುನಾವಣಾ ವ್ಯವಸ್ಥೆಯ (Indian Electoral System) ಬಗ್ಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್‌ (Elon Musk) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದೇ ದಿನದಲ್ಲಿ ಚುನಾವಣಾ ಫಲಿತಾಂಶ ಪ್ರಕಟಿಸುವ ಉತ್ತಮ ಸಾಮರ್ಥ್ಯಕ್ಕಾಗಿ ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆ ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಹಂಚಿಕೊಂಡ ಅವರು ಭಾರತ ಒಂದೇ ದಿನ 64 ಕೋಟಿ ಮತ ಎಣಿಕೆ ಮಾಡಿದೆ ಎಂಬ ಲೇಖನದ ಹೆಡ್‌ಲೈನ್‌ ಹಂಚಿಕೊಂಡಿದ್ದಾರೆ.

ಟ್ವೀಟ್‌ನಲ್ಲಿ ಅವರು ಭಾರತವು ಒಂದೇ ದಿನದಲ್ಲಿ 64 ಕೋಟಿ ಮತಗಳನ್ನು ಎಣಿಸಿದೆ. ಆದರೆ ಕ್ಯಾಲಿಫೋರ್ನಿಯಾ (California) ಚುನಾವಣೆಯಾಗಿ 18 ದಿನಗಳ ನಂತರವೂ ಮತಗಳನ್ನು ಎಣಿಕೆ ಮಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಭಾರತದ ಇವಿಎಂ (EVM) ಕಾರ್ಯವನ್ನು ಮಸ್ಕ್‌ ಹೊಗಳಿದ್ದಾರೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದು, ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ ಕ್ಯಾಲಿಫೋರ್ನಿಯಾದ ಮತ ಎಣಿಕೆ ಬಾಕಿ ಇದ್ದು, ಇನ್ನೂ ಮತ ಎಣಿಕೆ ಮುಕ್ತಾಯಗೊಂಡಿಲ್ಲ. ಕ್ಯಾಲಿಫೋರ್ನಿಯಾದಲ್ಲಿ 3.9 ಕೋಟಿ ಜನರಿದ್ದಾರೆ. ಇದು ಅಮೆರಿಕದ ಅತಿ ಹೆಚ್ಚು ಜನಸಂಖ್ಯೆ ಇರುವ ರಾಜ್ಯ ಎಂದು ಖ್ಯಾತಿ ಪಡೆದಿದೆ. ನವೆಂಬರ್ 5 ರಂದು ಚುನಾವಣೆ ನಡೆದಿದ್ದು, 1.6 ಕೋಟಿ ಮತದಾರರು ಮತಚಲಾಯಿಸಿದ್ದಾರೆ. ಈವರೆಗೆ ಕ್ಯಾಲಿಫೋರ್ನಿಯಾದಲ್ಲಿ 3 ಲಕ್ಷಕ್ಕೂ ಹೆಚ್ಚು ಮತಗಳು ಎಣಿಕೆಯಾಗಿಲ್ಲ. ವರದಿಗಳ ಪ್ರಕಾರ, 5.7 ಲಕ್ಷಕ್ಕೂ ಹೆಚ್ಚು ಮತಗಳು ಎಣಿಕೆಯಾಗಬೇಕಷ್ಟೆ.

ಇದನ್ನೂ ಓದಿ : Tahawwur Rana : ʻಭಾರತಕ್ಕೆ ಹಸ್ತಾಂತರ ಬೇಡವೆಂದು ಅಮೆರಿಕಾ ಸುಪ್ರೀಂಗೆ ಮೊರೆ ಹೋದ ಮುಂಬೈ ದಾಳಿ ಆರೋಪಿ ತಹವ್ವುರ್​ ರಾಣಾ!

ಕ್ಯಾಲಿಫೋರ್ನಿಯಾದಲ್ಲಿ ಮತ ಎಣಿಕೆ ವಿಳಂಬವಾಗುವುದಕ್ಕೆ ಮುಖ್ಯವಾಗಿ ಮೇಲ್‌ ಇನ್ ಮತದಾನ ಪ್ರಕ್ರಿಯೆ ಕಾರಣ. ವ್ಯಕ್ತಿಗತ ಮತದಾನಕ್ಕಿಂತ ಇದು ಭಿನ್ನ. ವ್ಯಕ್ತಿಗತ ಮತದಾನದಲ್ಲಿ ಮತಗಳನ್ನು ಬೇಗ ಲೆಕ್ಕ ಹಾಕಬಹುದು. ಆದರೆ ಮೇಲ್‌ ಇನ್‌ ಮತ ಎಣಿಕೆ ವಿಳಂಬವಾಗುತ್ತದೆ. ಪ್ರತಿಯೊಂದು ಮೇಲ್-ಇನ್ ಬ್ಯಾಲೆಟ್ ವೈಯಕ್ತಿಕ ಮೌಲ್ಯೀಕರಣ ಮತ್ತು ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಈ ಪ್ರಕ್ರಿಯೆಯು ಮತದಾನ ಕೇಂದ್ರಗಳಲ್ಲಿ ಮತಪತ್ರಗಳನ್ನು ಸ್ಕ್ಯಾನ್ ಮಾಡುವುದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.