Sunday, 24th November 2024

IND vs AUS: ಆಸೀಸ್‌ಗೆ ಪ್ರಯಾಣಿಸಿದ ರೋಹಿತ್‌ ಶರ್ಮ

ಮುಂಬಯಿ: ಟೀಮ್‌ ಇಂಡಿಯಾದ ನಾಯಕ ರೋಹಿತ್‌ ಶರ್ಮ ಅವರು ಶನಿವಾರ ರಾತ್ರಿ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾಕ್ಕೆ(IND vs AUS) ಪ್ರಯಾಣ ಬೆಳೆಸಿದ್ದಾರೆ. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೋಹಿತ್‌ಗೆ ಪತ್ನಿ ರಿತಿಕಾ ಸಜ್ದೇ ವಿಶೇಷವಾಗಿ ಬೀಳ್ಕೊಟ್ಟರು. ಈ ಫೋಟೊ ಮತ್ತು ವಿಡಿಯೊಗಳು ವೈರಲ್‌ ಆಗಿದೆ. ನವೆಂಬರ್‌ 16ರಂದು ರಿತಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಡಿಸೆಂಬರ್ 6 ರಿಂದ ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ರೋಹಿತ್‌ ತಂಡದ ನಾಯಕತ್ವವಹಿಸಿಕೊಂಡು ಆಡಲಿದ್ದಾರೆ.

2ನೇ ಮಗುವಿನ ಆಗಮನದ ಹಿನ್ನೆಲೆಯಲ್ಲಿ ಆಸೀಸ್‌ಗೆ ತಡವಾಗಿ ತೆರಳುವುದಾಗಿ ಬಿಸಿಸಿಐಗೆ ಮಾಹಿತಿ ನೀಡಿದ್ದರು. ಹೀಗಾಗಿ ಮೊದಲ ಪಂದ್ಯಕ್ಕೆ ಜಸ್‌ಪ್ರೀತ್‌ ಬುಮ್ರಾ ನಾಯಕನಾಗಿದ್ದಾರೆ. ಅಡಿಲೇಡ್‌ನಲ್ಲಿ ನಡೆಯುವ ದ್ವಿತೀಯ ಪಂದ್ಯಕ್ಕೂ ಮುನ್ನ ಭಾರತ ತಂಡ ಆಸೀಸ್ ಪ್ರಧಾನ ಮಂತ್ರಿ ಇಲೆವೆನ್ ವಿರುದ್ಧ 3 ದಿನಗಳ ಅಹರ್ನಿಶಿ ಅಭ್ಯಾಸ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ರೋಹಿತ್ ಕಣಕ್ಕಿಳಿಯಲಿದ್ದಾರೆ. 

ರೋಹಿತ್‌ ಆಗಮನದಿಂದ ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಆಡಿದ್ದ ರಾಹುಲ್‌ ದ್ವಿತೀಯ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸಬಹುದು. ಶುಭಮನ್‌ ಗಿಲ್‌ ಕೂಡ ದ್ವಿತೀಯ ಪಂದ್ಯದ ವೇಳೆಗೆ ಚೇತರಿಕೆ ಕಾಣುವ ನಿರೀಕ್ಷೆ ಇದ್ದು ಅವರು ಕೂಡ ಆಡಬಹುದು ಆಗ ಪಡಿಕ್ಕಲ್‌ ಜಾಗ ಬಿಡಬೇಕಾದೀತು. ರಾಹುಲ್‌ ಆರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಬಹುದು.

ಇದನ್ನೂ ಓದಿ IND vs AUS: ದೀರ್ಘ ಸಮಯದ ಬಳಿಕ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡ ಅನುಷ್ಕಾ ಶರ್ಮಾ

ಫಿಲಿಪ್‌ ಹ್ಯೂಸ್‌ ಸ್ಮರಣೆ

ಅಡಿಲೇಡ್‌ ಟೆಸ್ಟ್‌(Adelaide Test) ಪಂದ್ಯದಲ್ಲಿ ಬೌನ್ಸರ್‌ ಏಟಿಗೆ ಸಿಲುಕಿ ದುರ್ಮರಣಕ್ಕೀಡಾದ ಫಿಲಿಪ್‌ ಹ್ಯೂಸ್‌(Phillip Hughes) ಅವರ 10ನೇ ಪುಣ್ಯಸ್ಮರಣೆಯನ್ನು ಸ್ಮರಿಸಲು ಕ್ರಿಕೆಟ್‌ ಆಸ್ಟ್ರೇಲಿಯ ನಿರ್ಧರಿಸಿದೆ. 2014ರ ನ. 25ರಂದು ಸಿಡ್ನಿಯಲ್ಲಿ ನಡೆದ ಶೆಫೀಲ್ಡ್‌ ಶೀಲ್ಡ್‌ ಪಂದ್ಯಾವಳಿಯ ವೇಳೆ ಸೀನ್‌ ಅಬೋಟ್‌ ಅವರ ಶಾರ್ಟ್‌ಪಿಚ್‌ ಎಸೆತವೊಂದು ಫಿಲಿಪ್‌ ಹ್ಯೂಸ್‌ ಅವರನ್ನು ಬಲಿಪಡೆದಿತ್ತು. ಜೀವನ್ಮರಣ ಹೋರಾಟದ ಬಳಿಕ ನ. 27ರಂದು ಹ್ಯೂಸ್‌ ದುರಂತ ಅಂತ್ಯ ಕಂಡಿದ್ದರು.