Sunday, 24th November 2024

AR Rahman: ವಂದತಿ ಹಬ್ಬಿಸುವವರ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ರೆಹಮಾನ್‌; ಮಾನನಷ್ಟ ಕೇಸ್‌ ಹಾಕುವುದಾಗಿ ಎಚ್ಚರಿಕೆ

AR Rahman

ಮುಂಬೈ: ಆಸ್ಕರ್‌ ಪ್ರಶಸ್ತಿ ವಿಜೇತ ಎ.ಆರ್‌.ರೆಹಮಾನ್‌ (AR Rahman) ಇತ್ತೀಚೆಗೆ ತಮ್ಮ ಪತ್ನಿ ಸಾಯಿರಾ ಬಾನು ಅವರಿಂದ ದೂರವಾಗಿದ್ದಾರೆ. ಸುದೀರ್ಘ 29 ವರ್ಷಗಳ ದಾಂಪತ್ಯ ಜೀವನದ ಬಳಿಕ ಇದೀಗ ತಾವು ಪರಸ್ಪರ ದೂರವಾಗುತ್ತಿರುವುದರ ಬಗ್ಗೆ ಈ ಜೋಡಿ ನ. 19ರಂದು ಘೋಷಿಸಿತ್ತು. ಅದೇ ದಿನ ರೆಹಮಾನ್‌ ತಂಡದ ಸದಸ್ಯೆ ಮೋಹಿನಿ ಡೇ (Mohini Day) ಕೂಡ ತನ್ನ ಪತಿಯಿಂದ ದೂರವಾಗುತ್ತಿರುವುದಾಗಿ ಘೋಷಿಸಿದ್ದರು. ಈ ಸುದ್ದಿ ಹೊರ ಬರುತ್ತಿದ್ದಂತೆ ರೆಹಮಾನ್‌ ಹಾಗೂ ಮೋಹಿನಿ ಬಗ್ಗೆ ಸಾಕಷ್ಟು ವದಂತಿಗಳು ಸೃಷ್ಟಿಯಾಗಿದ್ದವು. ವದಂತಿಗಳನ್ನು ಹುಟ್ಟು ಹಾಕುವವರಿಗೆ ರೆಹಮಾನ್‌ ಕಾನೂನಿನ ಮೂಲಕ ಬುದ್ಧಿ ಕಲಿಸಲು ಹೊರಟಿದ್ದಾರೆ. ಅವರು ತಮ್ಮ ಹಾಗೂ ಕುಟುಂಬದವರ ಮಾನಹಾನಿ ಮಾಡಲು ಯತ್ನಿಸಿದವರ ವಿರುದ್ಧ ಕೇಸ್‌ ಹಾಕುವ ಎಚ್ಚರಿಕೆಯನ್ನು ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಎಚ್ಚರಿಕೆ ನೀಡಿರುವ ಅವರು, ʼʼಇದು ಎ.ಆರ್‌.ರೆಹಮಾನ್‌ ತಂಡದಿಂದ ಕೊಡಲಾಗುತ್ತಿರುವ ನೋಟಿಸ್‌. 24 ಗಂಟೆಗಳ ಗಡುವು ನೀಡುತ್ತೇವೆ. ನಮ್ಮ ವಿರುದ್ಧ ಮಾಡಿರುವ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿ, ವದಂತಿಗಳನ್ನು ಹರಡಬೇಡಿ. ಒಂದು ವೇಳೆ ಪೋಸ್ಟ್‌ ಡಿಲೀಟ್‌ ಮಾಡದೆ ಹೋದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುʼʼ ಎಂದು ತಿಳಿಸಿದ್ದಾರೆ.

ಏನಿದು ವದಂತಿ ?

ರೆಹಮಾನ್‌ ಮ್ಯೂಸಿಕ್‌ ಟೀಮ್‌ನಲ್ಲಿ ಬಾಸಿಸ್ಟ್‌ ಆಗಿದ್ದ ಮೋಹಿನಿ ಡೇ  ತಮ್ಮ ಪತಿಗೆ ವಿಚ್ಛೇದನ ನೀಡಿ ದೂರವಾಗಿದ್ದಾರೆ. ರೆಹಮಾನ್‌ ಹಾಗೂ ಸಾಯಿರಾ ಬಾನು ವಿಚ್ಛೇದನ ಘೋಷಿಸಿದ್ದ ದಿನವೇ ಮೋಹಿನಿ ಕೂಡ ತಾವು ಪತಿಯಿಂದ ದೂರಾಗುತ್ತಿರುವ ವಿಷಯವನ್ನು ತಿಳಿಸಿದ್ದರು. ನಂತರ ಇಬ್ಬರ ನಡುವೆ ಏನೋ ಇದೆ ಎಂಬ ವದಂತಿಗಳು ಕೇಳಿ ಬಂದಿದ್ದವು. ಅದಕ್ಕೆ ಸಾಯಿರಾ ಬಾನು ಪರ ವಕೀಲೆ ವಂದನಾ ಶಾ ಸ್ಪಷ್ಟನೆ ನೀಡಿ, ಮೋಹಿನಿ ಡೇ ರೆಹಮಾನ್‌ ಅವರ ತಂಡದ ಸದಸ್ಯೇ ಅಷ್ಟೇ ಅವರಿಗೂ ಇವರಿಗೂ ಬೇರೆ ಯಾವುದೇ ಸಂಬಂಧವಿಲ್ಲ. ಖಾಸಗಿ ಕಾರಣದಿಂದಾಗಿ ರೆಹಮಾನ್‌ ಹಾಗೂ ಸಾಯಿರಾ ಬಾನು ವಿಚ್ಛೇದನ ಪಡೆದಿದ್ದಾರೆ, ವದಂತಿಗಳನ್ನು ಸೃಷ್ಟಿಸಬೇಡಿ ಎಂದು ಹೇಳಿದ್ದರು. ನಂತರ ರೆಹಮಾನ್‌ ಪುತ್ರಿ ರಹೀಮಾ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿ ಸುಳ್ಳು ಸುದ್ದಿ ಹರಡುವವರಿಗೆ ಚಾಟಿ ಬೀಸಿದ್ದರು. ಸ್ಟೋರಿಯಲ್ಲಿ “ಯಾವಾಗಲೂ ನೆನಪಿಟ್ಟುಕೊಳ್ಳಿ ವದಂತಿಗಳನ್ನು ದ್ವೇಷಿಗಳು ಒಯ್ಯುತ್ತಾರೆ, ಮೂರ್ಖರು ಹರಡುತ್ತಾರೆ ಮತ್ತು ಮೂರ್ಖರು ಸ್ವೀಕರಿಸುತ್ತಾರೆ. ಪ್ರಾಮಾಣಿಕವಾಗಿ, ಜೀವನವನ್ನು ನಡೆಸಿʼʼ ಎಂದು ಬರೆದುಕೊಂಡಿದ್ದರು. ಇದೀಗ ವದಂತಿ ಹರಡುವವರ ಬಗ್ಗೆ ರೆಹಮಾನ್‌ ಅವರೇ ಕ್ರಮ ಕೈಗೊಳ್ಳಲು ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ : AR Rahman : ವಿಚ್ಚೇದನದ ನಂತರ ಎ ಆರ್ ರೆಹಮಾನ್‌‌ ಮೊದಲ ಪೋಸ್ಟ್‌… ಫ್ಯಾನ್ಸ್‌ ದಿಲ್‌ ಖುಷ್‌!