Sunday, 24th November 2024

Mann Ki Baat: ಹಕ್ಕಿಗಳ ಸಂರಕ್ಷಣೆಗೆ ಕ್ರಮ ಕೈಗೊಂಡಿರುವ ಮೈಸೂರಿನ ‘ಅರ್ಲಿ ಬರ್ಡ್’ ಅಭಿಯಾನಕ್ಕೆ ಮೋದಿ ಮೆಚ್ಚುಗೆ

Mann Ki Baat

ಹೊಸದಿಲ್ಲಿ: ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ (Mann Ki Baat)ನಲ್ಲಿ ಭಾನುವಾರ (ನ. 24) ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಕ್ಷಿ ಸಂರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿರುವ ಮೈಸೂರಿನ ಸಂಸ್ಥೆಯ ʼಅರ್ಲಿ ಬರ್ಡ್ʼ (Early Bird) ಅಭಿಯಾನವನ್ನು ಶ್ಲಾಘಿಸಿದರು. ಈ ಸಂಸ್ಥೆಯು ಮಕ್ಕಳಿಗೆ ಪಕ್ಷಿ, ಪ್ರಕೃತಿಯ ಮಹತ್ವವನ್ನು ತಿಳಿಸುವ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು. ʼʼಮೈಸೂರಿನ ಸಂಸ್ಥೆಯೊಂದು ಮಕ್ಕಳಿಗಾಗಿ ‘ಅರ್ಲಿ ಬರ್ಡ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಈ ಸಂಸ್ಥೆಯು ಪಕ್ಷಿಗಳ ಬಗ್ಗೆ ಮಕ್ಕಳಿಗೆ ಹೇಳಲು ವಿಶೇಷ ರೀತಿಯ ಗ್ರಂಥಾಲಯವನ್ನು ನಡೆಸುತ್ತಿದೆ. ಅಷ್ಟೇ ಅಲ್ಲ, ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸಲು ‘ನೇಚರ್ ಎಜುಕೇಶನ್ ಕಿಟ್’ ಅನ್ನು ಸಿದ್ಧಪಡಿಸಿದೆʼʼ ಎಂದು ಅವರು ವಿವರಿಸಿದರು.

ʼʼಈ ಕಿಟ್ ಮಕ್ಕಳಿಗಾಗಿ ಕಥೆ ಪುಸ್ತಕಗಳು, ಆಟಗಳು, ವಿವಿಧ ಚಟುವಟಿಕೆ ಮತ್ತು ಒಗಟುಗಳನ್ನು ಒಳಗೊಂಡಿದೆ. ಈ ಸಂಸ್ಥೆಯು ಮಕ್ಕಳನ್ನು ನಗರಗಳಿಂದ ಹಳ್ಳಿಗಳಿಗೆ ಕರೆದೊಯ್ದು ಪಕ್ಷಿಗಳನ್ನು ಪರಿಚಯಿಸುತ್ತದೆ. ಈ ಸಂಸ್ಥೆಯ ಪ್ರಯತ್ನಗಳಿಂದಾಗಿ, ಮಕ್ಕಳು ಅನೇಕ ಜಾತಿಯ ಪಕ್ಷಿಗಳನ್ನು ಗುರುತಿಸಲು ಪ್ರಾರಂಭಿಸಿದ್ದಾರೆ. ‘ಮನ್ ಕಿ ಬಾತ್’ ಕೇಳುಗರು ಇಂತಹ ಪ್ರಯತ್ನಗಳ ಮೂಲಕ ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ನೋಡಲು ಮತ್ತು ಅರ್ಥ ಮಾಡಿಕೊಳ್ಳಲು ಮಕ್ಕಳಲ್ಲಿ ವಿಭಿನ್ನ ದೃಷ್ಟಿಕೋನವನ್ನು ಬೆಳೆಸಬಹುದುʼʼ ಎಂದು ಹೇಳಿದರು.

ಗುಬ್ಬಚ್ಚಿಯ ಮಹತ್ವ

ಈ ವೇಳೆ ಮೋದಿ ಅವರು ಗುಬ್ಬಚ್ಚಿಗಳ ಮಹತವ್ವವನ್ನು ಸಾರಿ ಹೇಳಿದರು. ʼʼಬಾಲ್ಯದಲ್ಲಿ ಗುಬ್ಬಚ್ಚಿಗಳು ಛಾವಣಿಯ ಮೇಲೆ ಅಥವಾ ಮರಗಳ ಮೇಲೆ ಓಡಾಡುತ್ತಿದ್ದುದನ್ನು ನೀವೆಲ್ಲ ನೋಡಿರಬಹುದು. ಇದನ್ನು ತಮಿಳು ಮತ್ತು ಮಲಯಾಳಂನಲ್ಲಿ ಕುರುವಿ, ತೆಲುಗಿನಲ್ಲಿ ಪಿಚ್ಚುಕಾ ಮತ್ತು ಕನ್ನಡದಲ್ಲಿ ಗುಬ್ಬಿ ಎಂದು ಕರೆಯಲಾಗುತ್ತದೆ. ಗುಬ್ಬಚ್ಚಿಯ ಬಗ್ಗೆ ಕಥೆಗಳನ್ನು ಪ್ರತಿಯೊಂದು ಭಾಷೆ ಮತ್ತು ಸಂಸ್ಕೃತಿಯಲ್ಲಿ ಹೇಳಲಾಗುತ್ತದೆ. ನಮ್ಮ ಸುತ್ತಲಿನ ಜೀವ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ಗುಬ್ಬಚ್ಚಿಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಆದರೆ ಇಂದು ಗುಬ್ಬಚ್ಚಿ ನಗರಗಳಲ್ಲಿ ಗೋಚರಿಸುವುದಿಲ್ಲ. ಹೆಚ್ಚುತ್ತಿರುವ ನಗರೀಕರಣದಿಂದಾಗಿ ಗುಬ್ಬಚ್ಚಿ ನಮ್ಮಿಂದ ದೂರ ಹೋಗಿದೆ. ಗುಬ್ಬಚ್ಚಿಯನ್ನು ಚಿತ್ರಗಳು ಅಥವಾ ವಿಡಿಯೊಗಳಲ್ಲಿ ಮಾತ್ರ ನೋಡಿದ ಇಂದಿನ ಪೀಳಿಗೆಯ ಅನೇಕ ಮಕ್ಕಳಿದ್ದಾರೆʼʼ ಎಂದು ಮೋದಿ ತಿಳಿಸಿದರು.

ʼʼಚೆನ್ನೈಯ ಕುಡುಗಲ್ ಟ್ರಸ್ಟ್ ಗುಬ್ಬಚ್ಚಿಗಳ ಸಂಖ್ಯೆಯನ್ನು ಹೆಚ್ಚಿಸುವ ಅಭಿಯಾನದಲ್ಲಿ ಶಾಲಾ ಮಕ್ಕಳನ್ನು ತೊಡಗಿಸಿಕೊಂಡಿದೆ. ಸಂಸ್ಥೆಯ ಪದಾಧಿಕಾರಿಗಳು ಶಾಲೆಗಳಿಗೆ ಹೋಗಿ ದೈನಂದಿನ ಜೀವನದಲ್ಲಿ ಗುಬ್ಬಚ್ಚಿ ಎಷ್ಟು ಮುಖ್ಯ ಎಂದು ಮಕ್ಕಳಿಗೆ ತಿಳಿ ಹೇಳುತ್ತಾರೆ. ಜತೆಗೆ ಈ ಸಂಸ್ಥೆಯು ಗುಬ್ಬಚ್ಚಿ ಗೂಡುಗಳನ್ನು ತಯಾರಿಸಲು ಮಕ್ಕಳಿಗೆ ತರಬೇತಿ ನೀಡುತ್ತದೆ. ಇದಕ್ಕಾಗಿ ಸಂಸ್ಥೆಯು ಮಕ್ಕಳಿಗೆ ಸಣ್ಣ ಮರದ ಮನೆಯನ್ನು ಮಾಡಲು ಕಲಿಸಿದೆ. ಅದರಲ್ಲಿ ಗುಬ್ಬಚ್ಚಿಗಳಿಗೆ ಆಹಾರ ಮತ್ತು ಆಶ್ರಯದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇವು ಯಾವುದೇ ಕಟ್ಟಡದ ಹೊರ ಗೋಡೆಯ ಮೇಲೆ ಅಥವಾ ಮರದ ಮೇಲೆ ಇರಿಸಬಹುದಾದ ಮನೆಗಳಾಗಿವೆʼʼ ಎಂದು ಮೋದಿ ವಿವರಿಸಿದರು.

ʼʼಈ ಯೋಜನೆಯಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಗುಬ್ಬಚ್ಚಿಗಳಿಗಾಗಿ ಮನೆ ನಿರ್ಮಿಸುತ್ತಿದ್ದಾರೆ. ಕಳೆದ 4 ವರ್ಷಗಳಲ್ಲಿ ಈ ಸಂಸ್ಥೆ ಮೂಲಕ ಸಾವಿರಕ್ಕೂ ಅದಿಕ ಗೂಡುಗಳನ್ನು ನಿರ್ಮಿಸಲಾಗಿದೆ. ಕುಡುಗಲ್ ಟ್ರಸ್ಟ್‌ನ ಈ ಅಭಿಯಾನದಿಂದಾಗಿ ಗುಬ್ಬಚ್ಚಿಗಳ ಸಂಖ್ಯೆ ಹೆಚ್ಚಾಗಿದೆ. ಇಂತಹ ಅಭಿಯಾನಕ್ಕೆ ನೀವು ಕೈಜೋಡಿಸಿದರೆ ಮರೆಯಾಗಿರುವ ಗುಬ್ಬಚ್ಚಿಗಳನ್ನು ಮರಳಿ ಕರೆ ತರಬಹುದುʼʼ ಎಂದು ಮೋದಿ ತಿಳಿಸಿದರು.

ಎನ್​ಸಿಸಿಗೆ ಸೇರಲು ಕರೆ

ಇದೇ ವೇಳೆ ಮೋದಿ ಅವರು ಎನ್‌ಸಿಸಿಯ ಮಹತ್ವವನ್ನು ತಿಳಿಸಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಇದಕ್ಕೆ ಸೇರುವವಂತೆ ಕರೆ ನೀಡಿದರು. ʼʼಇಂದು ಎನ್​ಸಿಸಿ ದಿನ. ನಾನು ಕೂಡ ಎನ್​ಸಿಸಿ ಕೆಡೆಟ್ ಆಗಿದ್ದ. ಅದರಿಂದ ಪಡೆದ ಅನುಭವ ಅಮೂಲ್ಯವಾದುದು. ಎನ್​ಸಿಸಿಯು ಮಕ್ಕಳಲ್ಲಿ ಶಿಸ್ತು, ಸೇವಾ ಮನೋಭಾವ ಹುಟ್ಟುಹಾಕುತ್ತದೆ. ವಿಪತ್ತು, ಪ್ರವಾಹ, ಭೂಕಂಪಗಳು, ಅಪಘಾತಗಳು ಸಂಭವಿಸಿದಾಗ ಎನ್​ಸಿಸಿ ಕೆಡೆಟ್​ಗಳು ಯಾವಾಗಲೂ ಸಹಾಯಕ್ಕಿರುತ್ತಾರೆ. ಎನ್‌ಸಿಸಿಯನ್ನು ಬಲಪಡಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. 2014ರಲ್ಲಿ ಸುಮಾರು 14 ಲಕ್ಷ ವಿದ್ಯಾರ್ಥಿಗಳು ಎನ್‌ಸಿಸಿಯಲ್ಲಿದ್ದರು. ಈ ವರ್ಷ ಅದರ ಸಂಖ್ಯೆ 20 ಲಕ್ಷ ಆಗಿದೆʼʼ ಎಂದರು.

ಕಸದಿಂದ ಸಂಪತ್ತು

ʼʼದಶಕಗಳಷ್ಟು ಹಳೆಯದಾದ ಕಡತಗಳನ್ನು ತೆಗೆದುಹಾಕಲು ವಿಶೇಷ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಲಾಯಿತು. ಈ ಅಭಿಯಾನವು ಸರ್ಕಾರಿ ಇಲಾಖೆಗಳಲ್ಲಿ ಅದ್ಭುತ ಫಲಿತಾಂಶಗಳನ್ನು ತಂದಿದೆ. ಸ್ವಚ್ಛತೆಯು ಕಚೇರಿಗಳಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸಿದೆ. ತಮ್ಮ ಕೆಲಸದ ಸ್ಥಳವನ್ನು ಸ್ವಚ್ಛವಾಗಿಡುವ ಬಗ್ಗೆಯೂ ಹಲವರು ಚಿಂತನೆ ನಡೆಸುತ್ತಿದ್ದಾರೆ. ಎಲ್ಲಿ ಸ್ವಚ್ಚತೆ ಇರುತ್ತದೆಯೋ ಅಲ್ಲಿ ಲಕ್ಷ್ಮಿ ದೇವಿಯು ವಾಸಿಸುತ್ತಾಳೆ ಎಂದು ಹಿರಿಯರು ಹೇಳುವುದನ್ನು ನೀವು ಆಗಾಗ್ಗೆ ಕೇಳಿರಬಹುದು. ‘ತ್ಯಾಜ್ಯದಿಂದ ಸಂಪತ್ತು’ ಎಂಬ ಪರಿಕಲ್ಪನೆ ನಮ್ಮ ದೇಶದಲ್ಲಿ ಬಹಳ ಹಳೆಯದು. ದೇಶದ ಅನೇಕ ಭಾಗಗಳಲ್ಲಿ ಯುವ ಜನತೆ ನಿಷ್ಪ್ರಯೋಜಕವೆಂದು ಪರಿಗಣಿಸಲಾದ ವಸ್ತುಗಳನ್ನು ಸಂಪತ್ತಾಗಿ ಪರಿವರ್ತಿಸುತ್ತಿದ್ದಾರೆʼʼ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ: Mann Ki Baat: ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್‌ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಕೆ; ಮನ್‌ ಕೀ ಬಾತ್‌ ಪ್ರಮುಖಾಂಶಗಳು ಇಲ್ಲಿವೆ